ಬಂಟ್ವಾಳ, ಅಕ್ಟೋಬರ್ 06, 2026 (ಕರಾವಳಿ ಟೈಮ್ಸ್) : ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಅರ್ಹ ಹಾಗೂ ಮಾನ್ಯ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಅಳಿಸುವ ಉದ್ದೇಶದಿಂದ ಸುಳ್ಳು ಹಾಗೂ ಆಧಾರ ರಹಿತ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಕಾಂಗ್ರೆಸ್ ಮುಖಂಡರು ತಾಲೂಕು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಅ 6 ರಂದು ಮನವಿ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಣಿ ಗ್ರಾಮದ ವಿವಿಧ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮಾಣಿ ಗ್ರಾಮದ ಬೂತ್ ಸಂಖ್ಯೆ 179 ರಲ್ಲಿ 93, ಬೂತ್ ಸಂಖ್ಯೆ 180 ರಲ್ಲಿ 64, ಬೂತ್ ಸಂಖ್ಯೆ 181ರಲ್ಲಿ 9 ಹಾಗೂ ಬೂತ್ ಸಂಖ್ಯೆ 182ರಲ್ಲಿ 18 ಮತದಾರರಿಗೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಕೆಯಾಗಿವೆ. ಇದೇ ರೀತಿ ಸಾಲೆತ್ತೂರು ಗ್ರಾಮದ ಬೂತ್ ಸಂಖ್ಯೆ 245 ರಲ್ಲಿ 33 ಹಾಗೂ ಬೂತ್ ಸಂಖ್ಯೆ 246 ರಲ್ಲಿ 23 ಮತದಾರರನ್ನು ಒಳಗೊಂಡಂತೆ ಇತರ ಮತಗಟ್ಟೆಗಳಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಲಾಗಿದೆ.
ಮತದಾರರು ತಮ್ಮ ವಿಳಾಸದಲ್ಲಿ ವಾಸವಾಗಿಲ್ಲ ಅಥವಾ ಸ್ಥಳಾಂತರಗೊಂಡಿದ್ದಾರೆ ಎಂಬ ಕಾರಣಗಳನ್ನು ನೀಡಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಅರ್ಜಿಗಳಲ್ಲಿನ ಮಾಹಿತಿ ವಾಸ್ತವಾಂಶಗಳಿಗೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಹೆಸರು ಅಳಿಸಲು ಗುರಿಪಡಿಸಲಾದವರು ನೈಜ ಹಾಗೂ ಅರ್ಹ ಮತದಾರರಾಗಿದ್ದು, ಅವರ ಮತದಾನದ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ರಮಾನಾಥ ರೈ ನೇತೃತ್ವದ ಕೈ ಮುಖಂಡರು ತಹಶೀಲ್ದಾರರಿಗೆ ವಿವರಿಸಿದ್ದಾರೆ.
ಸುಳ್ಳು ಮಾಹಿತಿ ಅಥವಾ ನಕಲಿ ದಾಖಲೆಗಳನ್ನು ಆಧರಿಸಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈಗಾಗಲೇ ಯಾವುದೇ ಅರ್ಹ ಮತದಾರರ ಹೆಸರನ್ನು ತಪ್ಪಾದ ಅಥವಾ ಸುಳ್ಳು ಅರ್ಜಿಯ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಅಳಿಸಲಾಗಿದ್ದರೆ, ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಅವರ ಹೆಸರುಗಳನ್ನು ಪುನಃ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಪ್ರೆಸೆಂಟೇಷನ್ ಆಫ್ ದಿ ಪ್ಯೂಪಲ್ ಆಕ್ಟ್ 1950ರ ಕಲಂ 31 ಸೇರಿದಂತೆ ಅನ್ವಯವಾಗುವ ಇತರ ಚುನಾವಣಾ ಕಾನೂನುಗಳ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ರಮಾನಾಥ ರೈ ಅವರು ಒತ್ತಾಯಿಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಮತದಾರರನ್ನು ಒಳಗೊಂಡಿರುವ ಫಾರಂ-7 ಅರ್ಜಿಗಳ ವಿಷಯವನ್ನು ತುರ್ತಾಗಿ ಹಾಗೂ ನಿಷ್ಪಕ್ಷಪಾತವಾಗಿ ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ತಪ್ಪಾಗಿ ಮತದಾರರ ಪಟ್ಟಿಯಿಂದ ಅಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮತದಾರರ ಪಟ್ಟಿಯ ಸಮಗ್ರತೆಯನ್ನು ಕಾಪಾಡುವುದರ ಜೊತೆಗೆ, ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಮತದಾನದ ಹಕ್ಕು ದೊರೆಯುವಂತೆ ಕ್ರಮ ವಹಿಸಬೇಕು ಎಂದು ಮುಖಂಡರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭ ಪಕ್ಷ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಕೆ ಪದ್ಮನಾಭ ರೈ, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಜಯಂತಿ ಪೂಜಾರಿ, ಸುದರ್ಶನ್ ಜೈನ್, ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಬಿ ಪದ್ಮಶೇಖರ್ ಜೈನ್, ಐಡಾ ಸುರೇಶ್ ಸಹಿತ ಹಲವು ಮುಖಂಡರು ನಿಯೋಗದಲ್ಲಿದ್ದರು.















0 comments:
Post a Comment