ಬಂಟ್ವಾಳ, ಅಕ್ಟೋಬರ್ 15, 2026 (ಕರಾವಳಿ ಟೈಮ್ಸ್) : ಸಜಿಪಮೂಡ ಗ್ರಾಮದ ಸುಭಾಷ್ ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸುಭಾಷ್ ಯುವಕ ಮಂಡಲ (ರಿ) ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ವತಿಯಿಂದ ಆಚರಿಸಲ್ಪಡುವ ಶ್ರೀ ಶಾರದಾ ಪೂಜಾ ಮಹೋತ್ಸವ ಈ ಬಾರಿ 100ನೇ ವರ್ಷದೊಂದಿಗೆ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ ಅಕ್ಟೋಬರ್ 17 ರಿಂದ 22 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಎನ್ ವಿವೇಕ್ ಶೆಟ್ಟಿ ಹೇಳಿದರು.
ಬಿ ಸಿ ರೋಡಿನಲ್ಲಿ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, 100ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆರು ದಿನಗಳ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಬದ್ಧತೆಯೊಂದಿಗೆ ಬಡವರಿಗೆ ಮನೆ, ವೈದ್ಯಕೀಯ ನೆರವು ನೀಡುವ ಕಾರ್ಯ ಮಾಡಲಾಗಿದೆ. ಸುಭಾಷ್ ನಗರ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸಲಾಗಿದೆ ಎಂದರು.
ಅಕ್ಟೋಬರ್ 17 ರಂದು ಬೆಳಗ್ಗೆ ಶ್ರೀ ಶಾರದಾ ದೇವಿ ಪ್ರತಿಷ್ಠೆ, ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಶಾಲೆಗೆ ದಾನಿಗಳ ನೆರವಿ£ಂದ ನಿರ್ಮಿಸಲಾದ ಸುಸಜ್ಜಿತ ಕೊಠಡಿಯ ಉದ್ಘಾಟನೆ ನೆರವೇರಲಿದೆ. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಗಣ್ಯರು ಭಾಗವಹಿಸುವರು ಎಂದ ಅವರು, ಅಕ್ಟೋಬರ್ 18ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮುಜರಾಯಿ ಸಚಿವ ಕೆ ಎಸ್ ಬಸವಂತಪ್ಪ ಭಾಗವಹಿಸುವರು. ಅಕ್ಟೋಬರ್ 21ರಂದು ಸಂಜೆ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ವೈಭವ ನಡೆಯಲಿದ್ದು, ಅ 17 ರಂದು ಸಂಜೆ ಸ್ಥಳೀಯ ತಂಡಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, 18 ರಂದು ಚಲನಚಿತ್ರ ಹಿನ್ನೆಲೆ ಗಾಯಕರ ಸಂಗೀತ ವೈಭವ, 19 ರಂದು ಚಾಪರ್ಕ ಕಲಾವಿದರಿಂದ ಯಾನೊರಿ ಬರೊಲಿಯಾ ನಾಟಕ, 20 ರಂದು ಅಟ್ಲಾಸ್ ಸಾಂಸ್ಕೃತಿಕ ವೈಭವ, 21 ರಂದು ಶನಿ ಮಹಾತ್ಮೆ ಪೌರಾಣಿಕ ನಾಟಕ ನಡೆಯಲಿದೆ ಎಂದ ಅವರು ಈ ಪ್ರಯುಕ್ತ ಅ 16 ರಂದು ಶುಕ್ರವಾರ ಅಪರಾಹ್ನ 3.30ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಿಂದ ಹೊರಡಲಿದೆ ಎಂದರು.
ಅಕ್ಟೋಬರ್ 22 ರಂದು ಗುರುವಾರ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ನಾಸಿಕ್ ಬ್ಯಾಂಡ್, ತಂಬೋಲಂ, ಸ್ತಬ್ಧ ಚಿತ್ರಗಳು, ಚೆಂಡೆ, ವಯೋಲಿನ್, ಕುಣಿತ ಭಜನೆ, ಗೊಂಬೆ ಕುಣಿತ ಮತ್ತು ಹಲವು ಸಾಂಸ್ಕೃತಿಕ ತಂಡಗಳೊಂದಿಗೆ ಮೆರವಣಿಗೆ ಉತ್ಸವ ವೇದಿಕೆಯಿಂದ ಹೊರಟು ಮಾರ್ನಬೈಲಿಗೆ ತೆರಳಿ ಅಲ್ಲಿಂದ ಹಿಂದಿರುಗಿ ಸುಭಾಷ್ ನಗರವಾಗಿ ವಿದ್ಯಾನಗರ, ಶ್ರೀ ಶಾರದಾ ಭಜನಾ ಮಂದಿರ ಬಳಿಕ ಆಲಾಡಿ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿ ಪ್ರತಿಷ್ಠಾ ವಿಸರ್ಜನೆ ನಡೆಯಲಿದೆ ಎಂದವರು ವಿವರಿಸಿದರು.
ಈ ಸಂದರ್ಭ ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಬಿ ಶೋಭಿತ್ ಪೂಂಜ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ, ಕೋಶಾಧಿಕಾರಿ ಕೀರ್ತನ್ ಆಳ್ವ ಕಾಂತಾಡಿಗುತ್ತು, ಜೊತೆ ಕಾರ್ಯದರ್ಶಿ ಸುಜೀತ್ ಕುಮಾರ್ ಬೆಂಕ್ಯ ಜೊತೆಗಿದ್ದರು.















0 comments:
Post a Comment