ಬಂಟ್ವಾಳ, ಅಕ್ಟೋಬರ್ 20, 2026 (ಕರಾವಳಿ ಟೈಮ್ಸ್) : ದಸರಾ ಎಂದರೆ ಶಾಲಾ ಮಕ್ಕಳಿಗೆ ಒಂದು ರೀತಿಯ ಸಂತೋಷ-ಸಂಭ್ರಮ. ವೇಷ ನೋಡುವುದು, ವೇಷ ಹಾಕುವುದು ಈ ಸಂದರ್ಭ ಮಕ್ಕಳಿಗೆ ಒಂದು ರೀತಿಯ ಖುಷಿ. ಈ ಮಧ್ಯೆ ಸಜಿಪನಡು ಗ್ರಾಮದ ಕೋಟೆಕಣಿ ಎಂಬಲ್ಲಿನ ಶಾಲಾ ಮಕ್ಕಳು ತಮ್ಮದೇ ಚಿಂತನೆಯ ಪರಿಕರಗಳೊಂದಿಗೆ ಶಾರ್ದೂಲ ವೇಷ ತೊಟ್ಟು ಮನೆ ಮನೆ ಕುಣಿತದಿಂದ ಸಂಗ್ರಹವಾದ ಮೊತ್ತವನ್ನು ಮಕ್ಕಳಾಟಿಕೆಗೆ ಉಪಯೋಗಿಸದೆ ಅಪಘಾತದಿಂದ ಕಳೆದ ಐದು ವರ್ಷಗಳಿಂದ ಮನೆಯಲ್ಲೇ ಇದ್ದ ಸಂತ್ರಸ್ತಗೆ ಅತ್ಯಂತ ರಹಸ್ಯವಾಗಿ ನೀಡಿ ಸಮಾಜಕ್ಕೆ ಮಾನವೀಯತೆಯ ಸಂದೇಶ ನೀಡಿದ್ದಾರೆ.
ಶಾಲಾ ಮಕ್ಕಳಲ್ಲಿ ಅನೇಕ ಸಂದೇಶಗಳು ಸಮಾಜಕ್ಕೆ ದೊರಕುತ್ತಿದೆ. ಮಕ್ಕಳನ್ನು ಯಾವತ್ತೂ ಕೀಳಾಗಿ ಕಾಣುವಂತಿಲ್ಲ. ಮಕ್ಕಳ ಹೃದಯ ವಿಶಾಲತೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಮಕ್ಕಳು ಮಾಡಿರುವುದು ಕೇವಲ ದಾನವಲ್ಲ. ಹೃದಯ ವೈಶಾಲ್ಯತೆಗೆ ಹಿನ್ನಡಿದ ಕೈಗನ್ನಡಿಯಾಗಿದೆ ಎಂದು ಊರ ನಾಗರಿಕರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಪ್ರಾಥಮಿಕ ಶಾಲೆಯ ಮಕ್ಕಳು ಖಾಲಿ ಡಬ್ಬ ಹಾಗೂ ಪ್ಲಾಸ್ಟಿಕ್ ಬಾಲ್ದಿ ಮೊದಲಾದ ಪರಿಕರಗಳನ್ನು ಉಪಯೋಗಿಸಿ ತಾಸೆಗಳಂತೆ ತಯಾರಿಸಿ ಗೋಣಿ ಚೀಲ ಹಾಗೂ ಹೆಲ್ಮೆಟ್ ಮೊದಲಾದ ಪರಿಕರ ಬಳಸಿ ಶಾರ್ದೂಲ ವೇಷ ಧರಿಸಿ ಊರಿನ ಕೆಲವೊಂದು ಮನೆ ಮನೆಗಳಿಗೆ ತೆರಳಿ ದಸರಾ ವೇಷ ಕುಣಿತದ ಸಂಭ್ರಮ ಹಂಚಿಕೊಂಡು ಸಂಗ್ರಹವಾದ ಸುಮಾರು 5 ಸಾವಿರ ಚಿಲ್ಲರೆ ಹಣವನ್ನು ಮಕ್ಕಳು ತಮ್ಮ ಜ್ವಾಲಿ ಬದುಕಿಗೆ ಬಳಸಿಕೊಳ್ಳದೆ ಪರಿಸರದ ಅಪಘಾತ ಸಂತ್ರಸ್ತ ವ್ಯಕ್ತಿಗೆ ಅತ್ಯಂತ ರಹಸ್ಯವಾಗಿ ಸ್ವತಃ ಮಕ್ಕಳೇ ತೆರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಮಕ್ಕಳ ಈ ಹೃದಯವಂತಿಕೆಯ ನಡೆಗೆ ಸ್ಥಳೀಯವಾಗಿ ಗ್ರಾಮಸ್ಥರಿಂದ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ಅಪ್ರಾಪ್ತ ಶಾಲಾ ಮಕ್ಕಳ ಮಾನವೀಯತೆಯ ಮನಸ್ಸಿನ ಅರ್ಥಪೂರ್ಣ ಸೇವಾ ಕಾರ್ಯದಿಂದ ಈ ಬಾರಿಯ ಸಜಿಪದ ದಸರಾ ಶತಮಾನೋತ್ಸವಕ್ಕೆ ವಿಶೇಷ ಮೆರುಗು ಬಂದಿರುವುದಂತೂ ಸುಳ್ಳಲ್ಲ.
ವೈಭವ್, ಹಾರ್ದಿಕ್, ಅದೀಪ್, ಶ್ರೇಯಸ್, ಸಾತ್ವಿಕ್, ಅಮೋಘ್ ಹಾಗೂ ರಿತೇಶ್ ಎಂಬ 7 ಮಂದಿ ಪುಟಾಣಿ ಮಕ್ಕಳು ಈ ಮಾನವೀಯ ಕಾರ್ಯವನ್ನು ಯಾವುದೇ ಪ್ರಚಾರ ಬಯಸದೆ, ಸ್ವತಃ ವಿದ್ಯಾರ್ಥಿಗಳ ಮನೆ ಮಂದಿಗೂ ಗೊತ್ತಾಗದ ರೀತಿಯಲ್ಲಿ ರಹಸ್ಯವಾಗಿ ನೀಡಿದ್ದರೂ ಯಾರೋ ಕ್ಲಿಕ್ಕಿಸಿದ ಒಂದು ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇವರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಹಾಗೂ ಶಹಬ್ಬಾಸ್ ಗಿರಿ ಹರಿದು ಬರಲಾರಂಭಿಸಿದೆ. ಪುಟಾಣಿ ವಿದ್ಯಾರ್ಥಿಗಳ ಈ ಒಂದು ಮಾನವೀಯ ಮನಸ್ಸುಗಳನ್ನು ಸ್ಥಳೀಯ ಸಂಘ-ಸಂಸ್ಥೆಗಳ ಜೊತೆಗೆ ಸರಕಾರ ಕೂಡಾ ಗುರುತಿಸುವ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕಾಗಿದೆ.















0 comments:
Post a Comment