ಮಂಗಳೂರು, ಅಕ್ಟೋಬರ್ 03, 2026 (ಕರಾವಳಿ ಟೈಮ್ಸ್) : ನಗರದ ಬಳ್ಳಾಲ್ ಭಾಗಿನ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆದು ಓರ್ವ ವಿದ್ಯಾರ್ಥಿಗೆ ಚೂರಿ ಇರಿತ ನಡೆದ ಘಟನೆ ಅ 3 ರಂದು ಮಧ್ಯಾಹ್ನ ವೇಳೆ ಕಾಲೇಜು ಕ್ಯಾಂಟೀನ್ ಬಳಿ ಸಂಭವಿಸಿದೆ.
ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿಯನ್ನು ಬೆಳ್ತಂಗಡಿ ತಾಲುಕಿನ, ಮಳವಂತಿಗೆ ದಿಡುಪೆ-ಮಿತ್ತಬಾಗಿಲು ಅಜಲನ್ನಕ್ಕಿ ನಿವಾಸಿ ಮೊಹಮ್ಮದ್ ಉನೈಸ್ (20) ಎಂದು ಹೆಸರಿಸಲಾಗಿದೆ.
ಮೊಹಮ್ಮದ್ ಉನೈಸ್ ಅವರು ಈ ಬಗ್ಗೆ ಬರ್ಕೆ ಪೊಲೀಸರಿಗೆ ದೂರು ನೀಡಿದ್ದು, ಅ 3 ರಂದು ಮಧ್ಯಾಹ್ನ ಸುಮಾರು 1.45 ಗಂಟೆಗೆ ಶ್ರೀದೇವಿ ಕಾಲೇಜಿನ ಕ್ಯಾಂಟೀನ್ ಬಳಿ ಆರೋಪಿ ರಿಯಾನ್ ಸೇರಿದಂತೆ ಇತರ ಆರೋಪಿಗಳು ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭ ಆರೋಪಿಗಳೊಂದಿಗೆ ಉಂಟಾದ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ಪ್ರಕರಣ ನಡೆದಿರುವುದಾಗಿ ಶಂಕಿಸಲಾಗಿದೆ.
ಅ 3 ಹಲ್ಲೆಗೊಳಗಾದ ಮೊಹಮ್ಮದ್ ಉನೈಸ್ ಕಾಲೇಜು ಕ್ಯಾಂಪಸ್ಸಿಗೆ ಬಂದು ಬಳಿಕ ಕಾಲೇಜು ಬಳಿ ಇರುವ ಸಿಟಿ ಅರೇನಾ ಟರ್ಫಿಗೆ ಹೋಗಿ ಕಬಡ್ಡಿ ಆಟವಾಡಿದ್ದು, ಈ ಸಂದರ್ಭ ಸಿಟಿ ಅರೇನಾ ಟರ್ಫಿನ ಬಳಿ ರಸ್ತೆಯಲ್ಲಿ ಇವರ ಸ್ನೇಹಿತ, ಅವರ ಊರಿನನೇ ಆಗಿರುವ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ರಾಯಿಝ್ ಹಾಗೂ ಕಾಟಿಪಳ್ಳ ನಿವಾಸಿ, ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ರಿಯಾನ್ ಎಂಬವರಿಗೂ ಯಾವುದೋ ವಿಚಾರದಲ್ಲಿ ಜಗಳ ಆಗಿರುತ್ತದೆ. ಈ ಸಂದರ್ಭ ಉನೈಸ್ ಹಾಗೂ ಇತರ ವಿದ್ಯಾರ್ಥಿಗಳು ಸೇರಿ ಜಗಳ ಬಿಡಿಸಿರುತ್ತಾರೆ. ಈ ಸಂದರ್ಭ ರಿಯಾನ್ ಅವರು ಉನೈಸ್ ಅವರಿಗೆ ಕೈಯಿಂದ ಹೊಡೆದಿರುತ್ತಾನೆ.
ಬಳಿಕ ಉನೈಸ್ ತನ್ನ ಸ್ನೇಹಿತರ ಜೊತೆ ಕಾಲೇಜು ಕ್ಯಾಂಟೀನ್ ಬಳಿ ನಿಂತಿದ್ದ ವೇಳೆ ಆರೋಪಿ ರಿಯಾನ್ ಇತರ ಐದು ಮಂದಿ ಸ್ನೇಹಿತರ ಜೊತೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದು ಏಕಾ ಏಕಿ ಹಲ್ಲೆ ನಡೆಸಿದ್ದಲ್ಲದೆ ನಿನ್ನನ್ನು ಕೊಲೆ ನಡೆಸದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಚೂರಿ ತೆಗೆದು ಉನೈಸ್ ಅವರ ತಲೆಗೆ, ಬೆನ್ನಿಗೆ ಹಾಗೂ ಎಡಕಿವಿಗೆ ಹಾಗೂ ದೇಹದ ಇತರ ಭಾಗಕ್ಕೆ ಚುಚ್ಚಿ ಗಾಯಗೊಳಿಸಿದ್ದಾನೆ.
ಇರಿತದಿಂದ ಗಾಯಗೊಂಡ ಉನೈಸ್ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ರಿಯಾನ್ ಸಹಿತ ಇತರ ಐವರನ್ನು ನೋಡಿದರೆ ಗುರುತು ಹಚ್ಚುವುದಾಗಿ ನೀಡಿದ ದೂರಿನಂತೆ ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಬಳಿಕ ವಿವರ ನೀಡುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.













0 comments:
Post a Comment