ಅರ್ಹತೆಗೆ ಸಂದ ಗೌರವ : ತಾಂತ್ರಿಕ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಡಾ. ಮುಸ್ತಫಾ ಬಸ್ತಿಕೋಡಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ - Karavali Times ಅರ್ಹತೆಗೆ ಸಂದ ಗೌರವ : ತಾಂತ್ರಿಕ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಡಾ. ಮುಸ್ತಫಾ ಬಸ್ತಿಕೋಡಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ - Karavali Times

728x90

3 November 2026

ಅರ್ಹತೆಗೆ ಸಂದ ಗೌರವ : ತಾಂತ್ರಿಕ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಡಾ. ಮುಸ್ತಫಾ ಬಸ್ತಿಕೋಡಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಬಂಟ್ವಾಳ, ನವಂಬರ್ 03, 2026 (ಕರಾವಳಿ ಟೈಮ್ಸ್) : ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ ಮೆಂಟ್ ಇಲ್ಲಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಕಾಡೆಮಿಕ್ ಸೆನೆಟ್ ಸದಸ್ಯರೂ ಆಗಿರುವ ಡಾ ಮುಸ್ತಫಾ ಬಸ್ತಿಕೋಡಿ ಅವರಿಗೆ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆ ಹಾಗೂ ಗಮನಾರ್ಹ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 

ವಾಮದಪವು ನಿವಾಸಿ ಅಬ್ದುಲ್ ರಹಿಮಾನ್-ಶ್ರೀಮತಿ ಜಮೀಲಾ ದಂಪತಿಯ ಪುತ್ರರಾಗಿರುವ ಡಾ ಮುಸ್ತಫಾ ಬಸ್ತಿಕೋಡಿ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‍ಡಿ ಪದವಿ, ಬೆಂಗಳೂರು ವಿಶ್ವವಿದ್ಯಾಲಯದ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) ಇಲ್ಲಿ ಎಂಇ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿ ಬಿಇ ಪದವಿ ಪಡೆದಿರುತ್ತಾರೆ.

ಶೈಕ್ಷಣಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ 25 ವರ್ಷಗಳಿಗೂ ಹೆಚ್ಚಿನ ವೃತ್ತಿಪರ ಅನುಭವ ಹೊಂದಿರುವ ಇವರು, ಹಲವು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧನೆ ಹಾಗೂ ಶೈಕ್ಷಣಿಕ ನಾಯಕತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇದರೊಂದಿಗೆ ಸಾಫ್ಟ್ ವೇರ್ ಉದ್ಯಮದಲ್ಲಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇವರು ಐಇಇಇ ಸಂಸ್ಥೆಯ ಹಿರಿಯ ಸದಸ್ಯರಾಗಿದ್ದು, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ಐಎಸ್‍ಟಿಇ) ಮತ್ತು ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ (ಸಿಎಸ್‍ಐ) ಸಂಸ್ಥೆಗಳ ಆಜೀವ ಸದಸ್ಯರಾಗಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಕಾಡೆಮಿಕ್ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸಮಿತಿಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಆಯ್ಕೆ ಸಮಿತಿಗಳು ಹಾಗೂ ವಿಶ್ವವಿದ್ಯಾಲಯದ ಪರಿಶೀಲನಾ ಸಮಿತಿಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೆ, 2027ನೇ ಸಾಲಿನ ಐಇಇಇ ಬೆಂಗಳೂರು ವಿಭಾಗದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.

ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಜಿನಿಯರಿಂಗ್), ಯಂತ್ರ ಕಲಿಕೆ (ಮೆಶಿನ್ ಲರ್ನಿಂಗ್), ಸೈಬರ್ ಭದ್ರತೆ, ಉನ್ನತ ಕಾರ್ಯಕ್ಷಮತೆಯ ಗಣಕಯಂತ್ರ ವ್ಯವಸ್ಥೆಗಳು (ಹೈ ಪರ್‍ಫಾರ್ಮೆನ್ಸ್ ಕಂಪ್ಯೂಟಿಂಗ್) ಕ್ಲೌಡ್ ಕಂಪ್ಯೂಟಿಂಗ್, ಸಮಾನಾಂತರ ಸಂಸ್ಕರಣೆ (ಪ್ಯಾರಲ್ಲೆಲ್ ಪ್ರೊಸೆಸಿಂಗ್) ಹಾಗೂ ಬುದ್ಧಿವಂತ ವ್ಯವಸ್ಥೆಗಳು ಇವರ ಪ್ರಮುಖ ಸಂಶೋಧನಾ ಆಸಕ್ತಿಯ ಕ್ಷೇತ್ರಗಳಾಗಿವೆ. ಸಂಶೋಧನಾ ಕ್ಷೇತ್ರದಲ್ಲಿ ಇವರು 100ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆ ಹಾಗೂ ಸಮ್ಮೇಳನಗಳ ಸಂಶೋಧನಾ ಪ್ರಕಟಣೆಗಳು, ಪೇಟೆಂಟ್‍ಗಳು, ಪುಸ್ತಕಗಳು ಮತ್ತು ಪುಸ್ತಕ ಅಧ್ಯಾಯಗಳ ಮೂಲಕ ಕೊಡುಗೆ ನೀಡಿದ್ದಾರೆ. ಆರೋಗ್ಯ, ಕೃಷಿ, ಸೈಬರ್ ಭದ್ರತೆ, ಮೂಲಸೌಕರ್ಯ ಮತ್ತು ಬುದ್ಧಿವಂತ ತಂತ್ರಜ್ಞಾನ ವ್ಯವಸ್ಥೆಗಳಂತಹ ಕ್ಷೇತ್ರಗಳಲ್ಲಿನ ನವೀನ ತಾಂತ್ರಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇವರ ಸಂಶೋಧನೆಗಳು ಕೇಂದ್ರೀಕೃತವಾಗಿವೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಎಂಟು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಮಾರ್ಗದರ್ಶನ ನೀಡಿರುವ ಇವರು, ಅವರಲ್ಲಿ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳು ಈಗಾಗಲೇ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪಠ್ಯಕ್ರಮ ಅಭಿವೃದ್ಧಿ, ವಿದ್ಯಾರ್ಥಿಗಳ ಸಂಶೋಧನೆಗೆ ಮಾರ್ಗದರ್ಶನ, ಅಧ್ಯಾಪಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳು, ಫಲಿತಾಂಶ ಆಧಾರಿತ ತಾಂತ್ರಿಕ ಶಿಕ್ಷಣ ಹಾಗೂ ನಾವೀನ್ಯತೆ ಮತ್ತು ಕೈಗಾರಿಕಾ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಹಲವು ಐಇಇಇ ಅಂತರರಾಷ್ಟ್ರೀಯ ಸಮ್ಮೇಳನಗಳ ಸಂಘಟನಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಡಾ ಬಸ್ತಿಕೋಡಿ ಅವರು, ವಿವಿಧ ಪ್ರಾಯೋಜಿತ ಅಧ್ಯಾಪಕರ ತರಬೇತಿ ಕಾರ್ಯಕ್ರಮಗಳ ಆಯೋಜನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ, ತಾಂತ್ರಿಕ ಕಾರ್ಯಕ್ರಮ ಸಮಿತಿ ಸದಸ್ಯರು, ಸಂಶೋಧನಾ ಲೇಖನಗಳ ವಿಮರ್ಶಕರು, ಶೈಕ್ಷಣಿಕ ಮೌಲ್ಯಮಾಪಕರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳ ತಾಂತ್ರಿಕ ಸಂಘಟನೆಗಳ ಅಧ್ಯಾಪಕ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಂಶೋಧನಾ ಪ್ರಬಂಧಗಳ ಮಂಡನೆಗಾಗಿ ವಿವಿಧ ಪ್ರಶಸ್ತಿಗಳನ್ನು ಪಡೆದಿರುವ ಇವರು, ಬೋಧನೆ, ಕೈಗಾರಿಕಾ ಕ್ಷೇತ್ರದ ಕಾರ್ಯಕ್ಷಮತೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಾಂತ್ರಿಕ ಸಲಹಾ ಸೇವೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಅಧ್ಯಾಪಕರ ತರಬೇತಿ ಕಾರ್ಯಕ್ರಮಗಳು, ಅಂತರರಾಷ್ಟ್ರೀಯ ಸಮ್ಮೇಳನಗಳು ಮತ್ತು ವಿದ್ಯಾರ್ಥಿ ಕೇಂದ್ರಿತ ತಾಂತ್ರಿಕ ಚಟುವಟಿಕೆಗಳ ಆಯೋಜನೆಗಾಗಿ ವಿವಿಧ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳಿಂದ ಅನುದಾನಗಳನ್ನು ಕೂಡ ಪಡೆದುಕೊಂಡಿದ್ದಾರೆ.

ಬೋಧನೆ, ಸಂಶೋಧನೆ, ನಾವೀನ್ಯತೆ, ಶೈಕ್ಷಣಿಕ ಆಡಳಿತ, ವಿದ್ಯಾರ್ಥಿಗಳ ಮಾರ್ಗದರ್ಶನ ಹಾಗೂ ವೃತ್ತಿಪರ ಸೇವೆಗಳ ಮೂಲಕ ತಾಂತ್ರಿಕ ಶಿಕ್ಷಣದ ಪ್ರಗತಿಗೆ £ರಂತರವಾಗಿ ಶ್ರಮಿಸುತ್ತಿರುವ ಡಾ ಮುಸ್ತಫಾ ಬಸ್ತಿಕೋಡಿ ಅವರು, ಸಂಶೋಧನಾ ಚಟುವಟಿಕೆಗಳನ್ನು ಬಲಪಡಿಸುವುದು, ನವೀನ ಆವಿಷ್ಕಾರಗಳಿಗೆ ಪೆÇ್ರೀತ್ಸಾಹ ನೀಡುವುದು ಹಾಗೂ ಕೈಗಾರಿಕಾ ಅಗತ್ಯಗಳಿಗೆ ಪೂರಕವಾದ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ತಮ್ಮ ಕೊಡುಗೆಯನ್ನು ಮುಂದುವರಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅರ್ಹತೆಗೆ ಸಂದ ಗೌರವ : ತಾಂತ್ರಿಕ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಡಾ. ಮುಸ್ತಫಾ ಬಸ್ತಿಕೋಡಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ Rating: 5 Reviewed By: karavali Times
Scroll to Top