ಕಾನೂನು ಸೇವಾ ಪ್ರಾಧಿಕಾರ ಜನರಿಗೆ ಉಪಯುಕ್ತ ಕಾನೂನು ಸೇವೆ ನೀಡುತ್ತಿದೆ : ನ್ಯಾಯಾಧೀಶ ರಾಜೇಂದ್ರ ಪ್ರಸಾದ್ - Karavali Times ಕಾನೂನು ಸೇವಾ ಪ್ರಾಧಿಕಾರ ಜನರಿಗೆ ಉಪಯುಕ್ತ ಕಾನೂನು ಸೇವೆ ನೀಡುತ್ತಿದೆ : ನ್ಯಾಯಾಧೀಶ ರಾಜೇಂದ್ರ ಪ್ರಸಾದ್ - Karavali Times

728x90

13 November 2026

ಕಾನೂನು ಸೇವಾ ಪ್ರಾಧಿಕಾರ ಜನರಿಗೆ ಉಪಯುಕ್ತ ಕಾನೂನು ಸೇವೆ ನೀಡುತ್ತಿದೆ : ನ್ಯಾಯಾಧೀಶ ರಾಜೇಂದ್ರ ಪ್ರಸಾದ್

 ಬಂಟ್ವಾಳದಲ್ಲಿ ಕಾನೂನು ಸೇವೆಗಳ ದಿನದ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮ 


ಬಂಟ್ವಾಳ, ನವಂಬರ್ 13, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ‘ನ್ಯಾಯ ದೇಗುಲ’, ಎಚ್ ಸಿದ್ದಯ್ಯ ರಸ್ತೆ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಕಾನೂನು ಸೇರಿ ಅನೇಕ ಉಪಯುಕ್ತ ಸೇವೆಗಳನ್ನು ಒದಗಿಸುತ್ತಿದೆ. ಜನರಲ್ಲಿ ಕಾನೂನಿನ ಸಾಕ್ಷರತೆ ಮೂಡಿಸುವುದು. ಇದರೊಂದಿಗೆ ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಕೆ ಎಸ್ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ (ರಿ) ತಾಲೂಕು ಪಂಚಾಯತ್ ಬಂಟ್ವಾಳ ಹಾಗೂ ಪೆÇಲೀಸ್ ಇಲಾಖೆ ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ನ 12 ರಂದು ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನತಾ ನ್ಯಾಯಾಲಯಗಳ (ಲೋಕ್ ಅದಾಲತ್) ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಇತ್ಯರ್ಥಪಡಿಸುವುದು ಇದರ ಮುಖ್ಯ ಗುರಿಯಾಗಿದೆ. ಅಲ್ಲದೆ ಖಾಯಂ ಜನತಾ ನ್ಯಾಯಾಲಯಗಳ (ಪಿ ಎಲ್ ಎ) ಮೂಲಕ ಕೆಲವು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದು ಹಾಗೂ ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ ವ್ಯವಸ್ಥೆ ಮತ್ತು ಪರ್ಯಾಯ ವ್ಯಾಜ್ಯ ಪರಿಹಾರದ ವ್ಯವಸ್ಥೆಯನ್ನು ಇದು ಕಲ್ಪಿಸುತ್ತದೆ ಎಂದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ ಎಂ ಎಫ್ ಸಿ, ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಅನಿಲ್ ಪ್ರಕಾಶ್ ಎಂ ಪಿ ಅವರು, ಪ್ರಕರಣವೊಂದರ ಉಭಯ ಪಕ್ಷಕಾರರಲ್ಲಿ ರಾಜೀ ಸಂಧಾನ ಏರ್ಪಡಿಸುವ ಮೂಲಕ ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಉಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿ ಅಥವಾ ಜಿಲ್ಲಾ/ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರವು ಜನತಾ ನ್ಯಾಯಾಲಯವನ್ನು ರಚಿಸುತ್ತದೆ. ಜನತಾ ನ್ಯಾಯಾಲಯಗಳ ವಿಶೇಷತೆಯೆಂದರೆ, ಇಲ್ಲಿ ವ್ಯಾಜ್ಯವನ್ನು ಅತ್ಯಂತ ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಬಹುದು. ಯಾವುದೇ ಕೋರ್ಟ್ ಫೀಸು ಕೊಡಬೇಕಾಗಿಲ್ಲ. ಇಲ್ಲಿ ವಕೀಲರ ಮುಖಾಂತರವೇ ಭಾಗವಹಿಸಬೇಕೆನ್ನುವ ಕಡ್ಡಾಯ ನಿಯಮವಿಲ್ಲ. ಪ್ರಕರಣದಲ್ಲಿ ಮಾರ್ಗದರ್ಶನ ನೀಡಿ ರಾಜಿ ಸಂಧಾನ ಏರ್ಪಡಿಸಲು ಇಬ್ಬರು ಸಂಧಾನಕಾರರಿರುತ್ತಾರೆ ಮತ್ತು ಅವರಲ್ಲಿ ಒಬ್ಬರು ನ್ಯಾಯಾಧೀಶರಾಗಿರುತ್ತಾರೆ. ಸಂಧಾನಕಾರರು ಸೂಚಿಸುವ ಪರಿಹಾರ ಉಭಯ ಪಕ್ಷಕಾರರಿಗೆ ತೃಪ್ತಿಯಾದರೆ ಮಾತ್ರ ರಾಜಿ ಮಾಡಿಕೊಳ್ಳಬಹುದು ಎಂದರು. 

ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಪ್ರಯುಕ್ತ ಉಚಿತ ಕಾನೂನು ಸೇವೆಗಳ ಬಗ್ಗೆ ಕಾನೂನು ಮಾಹಿತಿ ವಿಷಯದ ಕುರಿತು ಮಾತನಾಡಿದ ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಸುಚಿತ್ರಾ ಕೆ ಅವರು, ಉಚಿತ ಕಾನೂನು ನೆರವನ್ನು ಕೆಲವು ನಿರ್ದಿಷ್ಟ ವರ್ಗದ ಜನರಿಗೆ ಮಾತ್ರ ಇದನ್ನು ಕಲ್ಪಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಗಲುವ ವಕೀಲರ ಫೀಸು, ನ್ಯಾಯಾಲಯ ಶುಲ್ಕ ಹಾಗೂ ಇತರ ಎಲ್ಲಾ ವೆಚ್ಚಗಳನ್ನು ಸಂಪೂರ್ಣವಾಗಿ ಪ್ರಾಧಿಕಾರವೇ ಭರಿಸುತ್ತದೆ. ಇದರ ಜೊತೆಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ವಿವಿಧ ಉಚಿತ ಕಾನೂನು ಸಲಹಾ ಕೇಂದ್ರಗಳಲ್ಲಿ ಉಚಿತ ಕಾನೂನು ಸಲಹೆಯನ್ನೂ ಪಡೆದುಕೊಳ್ಳಬಹುದು. ಉಚಿತ ಕಾನೂನು ನೆರವು ಅಥವಾ ಸಲಹೆಯನ್ನು ಪಡೆಯಲು ಸಾರ್ವಜನಿಕರು ತಮ್ಮ ಸಮೀಪದ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಗೆ ಭೇಟಿ ನೀಡಬೇಕು ಎಂದರು. 

ಉಚಿತ ಕಾನೂನು ನೆರವು ಅಥವಾ ಸಲಹೆಯನ್ನು ಪಡೆಯಲು ಸಾರ್ವಜನಿಕರು ತಮ್ಮ ಸಮೀಪದ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಕೇವಲ ನಿಮ್ಮ ಜಾತಿ ಅಥವಾ ಆದಾಯಕ್ಕೆ ಸಂಬಂಧಿಸಿದಂತೆ ಒಂದು ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ದಯಾನಂದ ರೈ ಪಿ, ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಹರಿಣಿ ಕುಮಾರಿ ಡಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ನಗರ ಪೆÇಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ವಿಜಯ್ ಶಂಕರ್ ಆಳ್ವ (ಪಂ ರಾ) ಸ್ವಾಗತಿಸಿದರು. ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ  ವಿಶ್ವನಾಥ್ ಬಿ, (ಗ್ರಾ ಉ) ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. 

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್, ತಾ ಪಂ ವ್ಯವಸ್ಥಾಪಕ ಪ್ರಕಾಶ್ ಪಿ ವಿವಿಧ ಇಲಾಖಾಧಿಕಾರಿಗಳು, ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ತಾ ಪಂ ವಿಷಯ ನಿರ್ವಾಹಕರು, ಎನ್ ಆರ್ ಎಲ್ ಎಂ, ವಿಬಿಜಿರಾಮ್‍ಜಿ ಸಿಬ್ಬಂದಿ, ತಾ ಪಂ ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕಾನೂನು ಸೇವಾ ಪ್ರಾಧಿಕಾರ ಜನರಿಗೆ ಉಪಯುಕ್ತ ಕಾನೂನು ಸೇವೆ ನೀಡುತ್ತಿದೆ : ನ್ಯಾಯಾಧೀಶ ರಾಜೇಂದ್ರ ಪ್ರಸಾದ್ Rating: 5 Reviewed By: karavali Times
Scroll to Top