ಬಂಟ್ವಾಳ, ನವಂಬರ್ 03, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಸ್ವಚ್ಛತಾ ಕಾರ್ಯಕ್ಕೆ ನ 3 ರಂದು ಚಾಲನೆ ನೀಡಲಾಗಿದೆ.
ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಯು ರಾಜೇಶ್ ನಾಯ್ಕ್ ನ 2 ರಂದು ನೀರು ಶುದ್ಧೀಕರಣ ಘಟಕಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಘಟಕದಲ್ಲಿ ಪಾಚಿ, ಕೆಸರು ಹಾಗೂ ತ್ಯಾಜ್ಯ ಸಂಗ್ರಹವಾಗಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಅದನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ನ 3 ರಂದು ಘಟಕಕ್ಕೆ ಭೇಟಿ ನೀಡಿದ ನಗರ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ಅವರು ಇಲ್ಲಿನ ನೀರು ಶುದ್ಧೀಕರಣ ಘಟಕದ ಸ್ವಚ್ಛತೆಯ ಕುರಿತು ಶಾಸಕರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ. ನೀರು ಶುದ್ಧೀಕರಣ ಘಟಕದ ಸ್ವಚ್ಛತೆ ಹಾಗೂ ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ 2 ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿರುವುದರಿಂದ ಪುರವಾಸಿಗಳು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಇಂಜಿನಿಯರ್ ಗಳಾದ ತೇಜಮೂರ್ತಿ, ಪುರಂದರ, ಪ್ರಸಾದ್, ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಈ ಸಂದರ್ಭ ಜೊತೆಗಿದ್ದರು.











0 comments:
Post a Comment