ಪ್ರತಿ ಹಾಸ್ಟೆಲಿಗೂ ವಾರ್ಡನ್ ನೇಮಕ : ವಿಧಾನ ಮಂಡಲದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ತಾಕೀತು - Karavali Times ಪ್ರತಿ ಹಾಸ್ಟೆಲಿಗೂ ವಾರ್ಡನ್ ನೇಮಕ : ವಿಧಾನ ಮಂಡಲದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ತಾಕೀತು - Karavali Times

728x90

7 November 2026

ಪ್ರತಿ ಹಾಸ್ಟೆಲಿಗೂ ವಾರ್ಡನ್ ನೇಮಕ : ವಿಧಾನ ಮಂಡಲದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ತಾಕೀತು

ಮಂಗಳೂರು, ನವಂಬರ್ 07, 2026 (ಕರಾವಳಿ ಟೈಮ್ಸ್) : ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಡಿಯಲ್ಲಿ ಬರುವ ಪ್ರತಿ ಹಾಸ್ಟೆಲಿಗೆ ಒಬ್ಬರು ವಾರ್ಡನ್ ನಂತೆ ಎಲ್ಲಾ ಹಾಸ್ಟೆಲ್ ಗಳಿಗೆ ಮುಂದಿನ 15 ದಿನಗಳೊಳಗೆ ವಾರ್ಡನ್ ಗಳನ್ನು ನೇಮಿಸುವಂತೆ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ನಿರ್ದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿದೆ. 

ಜಿಲ್ಲೆಯ ಹಾಸ್ಟೆಲ್ ಗಳಲ್ಲಿ ಪೂರ್ಣ ಪ್ರಮಾಣದ ವಾರ್ಡನ್ ಗಳ ತೀವ್ರ ಕೊರತೆ ಇದ್ದು, ಒಬ್ಬೊಬ್ಬ ವಾರ್ಡನ್ ಗೆ 3-4 ಹಾಸ್ಟೆಲ್ ಉಸ್ತುವಾರಿ ವಹಿಸಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಹಿತ ರಕ್ಷಣೆ, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಮೂಲ ಸೌಕರ್ಯ, ಊಟದ ವ್ಯವಸ್ಥೆ ಹಾಗೂ ಭದ್ರತೆಯಲ್ಲಿ ಲೋಪ ಬಾರದಂತೆ ನೋಡಿಕೊಳ್ಳಲು ಪ್ರತಿ ಹಾಸ್ಟೆಲ್ ಗೆ ಪೂರ್ಣ ಪ್ರಮಾಣದ ವಾರ್ಡನ್ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂದಿನ 15 ದಿನಗಳೊಳಗೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಂಡು ಪ್ರತಿ ಹಾಸ್ಟೆಲ್ ಗೆ ಒಬ್ಬರಂತೆ ವಾರ್ಡನ್ ನಿಯುಕ್ತಿಗೊಳಿಸುವಂತೆ  ಅಧ್ಯಕ್ಷರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಯಾವುದೇ ಹಾಸ್ಟೆಲ್ ವಾರ್ಡನ್ ಇಲ್ಲದೆ ಖಾಲಿ ಉಳಿಯಬಾರದು. ಹೆಚ್ಚುವರಿ ಪ್ರಭಾರ ವ್ಯವಸ್ಥೆಗೆ ಬದಲಾಗಿ ಪ್ರತಿಯೊಂದು ಹಾಸ್ಟೆಲಿಗೆ ನಿಯಮಿತವಾದ  ವಾರ್ಡನ್ ನಿಯೋಜಿಸಬೇಕು ಎಂದವರು ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 23 ಹಾಸ್ಟೆಲ್ ಗಳು ಬಾಡಿಗೆ ಕಟ್ಟಡದಲ್ಲಿದ್ದು, ಇವುಗಳಿಗೆ ಜಮೀನು ಮಂಜೂರು ಮಾಡಿ ಸ್ವಂತ ಕಟ್ಟಡ ನಿರ್ಮಿಸಬೇಕು. ಪ್ರತಿ ಹಾಸ್ಟೆಲ್ ಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು ಎಂದು ಸಮಿತಿಯು ಜಿಲ್ಲಾಧಿಕಾರಿಗಳಿಗೆ ಸೂಚಿಸಿತು.

ಹಾಸ್ಟೆಲ್ ಸೀಟ್ ಸಿಗದವರಿಗೆ ವಿದ್ಯಾಸಿರಿ ಯೋಜನೆಯಲ್ಲಿ ಕಡಿಮೆ ವಿದ್ಯಾರ್ಥಿಗಳಿಗೆ  ಪ್ರಯೋಜನ ದೊರಕಿದ್ದು, ಅಗತ್ಯ ಅನುದಾನ ಪಡೆದುಕೊಂಡು ಎಲ್ಲರಿಗೂ ಯೋಜನೆಯ ಲಾಭ ನೀಡಬೇಕು. ಹಾಸ್ಟೆಲ್ ಗಳಿಗೆ ಕಟ್ಟಡ ನಿರ್ಮಾಣ, ಹಾಸಿಗೆ, ಮಂಚ  ಖರೀದಿಸುವಾಗ ಆಯಾ ಪ್ರದೇಶದ ಹವಾಮಾನಕ್ಕನುಗುಣವಾಗಿ ಖರೀದಿಸಬೇಕು ಎಂದು ತನ್ವೀರ್ ಸೇಠ್ ಅವರು ಸೂಚಿಸಿದರು. ಖಾಸಗಿ ಅನುದಾನಿತ ವಿದ್ಯಾರ್ಥಿಗಳಿಗೆ ನೀಡುವ ಪ್ರತಿ ವಿದ್ಯಾರ್ಥಿಗಳ ಊಟದ ವೆಚ್ಚವು ಅತಿ ಕಡಿಮೆಯಾಗಿದ್ದು, ಇದನ್ನು ಸರಕಾರಿ ಹಾಸ್ಟೆಲ್ ನಲ್ಲಿರುವಷ್ಟೇ ಮೊತ್ತ ಮಂಜೂರು ಮಾಡಬೇಕು ಎಂದರು. 

ಅಲ್ಪಸಂಖ್ಯಾತರ ಇಲಾಖೆಯಲ್ಲಿ ಹಾಸ್ಟೆಲ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದರೂ ಸಿಗುತ್ತಿಲ್ಲ. ಈ ವರ್ಷ ಜಿಲ್ಲೆಯಲ್ಲಿ 12 ಸಾವಿರ ಮಂದಿ ಹಾಸ್ಟೆಲ್ ಸೀಟಿಗೆ ಅರ್ಜಿ ಸಲ್ಲಿಸಿದ್ದರೂ ಕೇವಲ 275 ಮಂದಿಗೆ ಹೊಸದಾಗಿ ಸೀಟ್ ದೊರಕಿದೆ. ಈ ನಿಟ್ಟಿನಲ್ಲಿ ಬೇಡಿಕೆಗೆ ತಕ್ಕಂತೆ ಹಾಸ್ಟೆಲ್‍ಗಳನ್ನು ಹೆಚ್ಚಿಸುವಂತೆ ಅವರು ಸೂಚಿಸಿದರು.

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಸಾಲ ಮರುಪಾವತಿ ಅತಿ ಕಡಿಮೆ ಪ್ರಮಾಣದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಮಿತಿಯು, ಸಾಲ ವಸೂಲಾತಿಯನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ತಿಳಿಸಿತು.

       ಸಭೆಯಲ್ಲಿ ಶಾಸಕರಾದ ಯು ರಾಜೇಶ್ ನಾಯಕ್, ಉಮಾನಾಥ ಕೋಟ್ಯಾನ್, ಬಿ.ಪಿ ಹರೀಶ್, ಇಕ್ಬಾಲ್ ಹುಸೇನ್, ಕರೆಮ್ಮ ನಾಯಕ್, ಕೆ. ಅಬ್ದುಲ್ ಜಬ್ಬಾರ್, ಕೇಶವ ಪ್ರಸಾದ್, ಹಿಂದುಳಿದ ವರ್ಗಗಳ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಪ್ರತಿ ಹಾಸ್ಟೆಲಿಗೂ ವಾರ್ಡನ್ ನೇಮಕ : ವಿಧಾನ ಮಂಡಲದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ತಾಕೀತು Rating: 5 Reviewed By: karavali Times
Scroll to Top