ಬಂಟ್ವಾಳ, ಮೇ 19, 2025 (ಕರಾವಳಿ ಟೈಮ್ಸ್) : ಬ್ಯಾಂಕ್ ಉದ್ಯೋಗಿ ಮಹಿಳೆಯೇ ಇನ್ಸ್ಟಾಗ್ರಾಂನಲ್ಲಿ ಬಂದ ಪಾರ್ಟ್ ಟೈಂ ಜಾಬ್ ಜಾಹೀರಾತು ಲಿಂಕ್ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಮೋಸ ಹೋದ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಎಸ್ ಬಿ ಐ ಬ್ಯಾಂಕ್ ಶಾಖೆಯಲ್ಲಿ ಕ್ರೆಡಿಟ್ ಕಾರ್ಡ್ ಸೆಕ್ಷನ್ನಿನಲ್ಲಿ ಕೆಲಸ ಮಾಡುತ್ತಿರುವ ಇರ್ವತ್ತೂರು ಗ್ರಾಮದ ನೈನಾಡು-ದುರ್ಗಾಂಬಾ ಕೃಪಾ ನಿವಾಸಿ ದುರ್ಗಾಪ್ರಸಾದ್ ಅವರ ಪತ್ನಿ ಯಶ್ಮಿತಾ (30) ಎಂಬವರೇ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಮೋಸ ಹೋದ ಮಹಿಳೆ.
ಇವರಿಗೆ ಮೇ 6 ರಂದು ಇನ್ಸ್ಟಾಗ್ರಾಮಿನಲ್ಲಿ ಪಾರ್ಟ್ ಟೈಂ ಜಾಬ್ ಬಗ್ಗೆ ಜಾಹಿರಾತು ನೀಡಿ ಲಿಂಕ್ ಕಳುಹಿಸಿದ್ದು,(ಪ್ರಸ್ತುತ ಲಿಂಕ್ ಇರುವುದಿಲ್ಲ.) ಸದ್ರಿ ಲಿಂಕನ್ನು ಒತ್ತಿದಾಗ ವಾಟ್ಸಪ್ ನಂಬ್ರ ತೆರೆದಿದ್ದು, ಅದರಲ್ಲಿ ಆನ್ ಲೈನ್ ಪಾರ್ಟ್ ಟೈಂ ಜಾಬ್ ಬಗ್ಗೆ ಮಾಹಿತಿ ನೀಡಿ ಒಂದು ಲಿಂಕನ್ನು ಕಳುಹಿಸಲಾಗಿದೆ. ಸದ್ರಿ ಲಿಂಕನ್ನು ಒತ್ತಿದಾಗ ಬರುವ ವೀಡಿಯೋವನ್ನು ಲೈಕ್ ನೀಡಿ ಸ್ಕ್ರೀನ್ಶಾಟ್ ಕಳುಹಿಸುವಂತೆ ಹೇಳಲಾಗಿತ್ತು. ಅದರಂತೆ ಯಶ್ಮಿತಾ ಅವರು ಕಳುಹಿಸಿದ್ದು, ನಂತರ ಅವರು ಟಿಲಿಗ್ರಾಂ ನೀಡಿ ಇನ್ನು ಹೆಚ್ಚಿನ ಮಾಹಿತಿಯನ್ನು ನೀಡುವುದಾಗಿ ಹೇಳಿರುತ್ತಾರೆ. ಅದರಂತೆ ಸದ್ರಿ ಟೆಲಿಗ್ರಾಂ ಖಾತೆಯವರು ಟಾಸ್ಕ್ ಗಳನ್ನು ನೀಡಿದ್ದು, ಅದನ್ನು ಪೂರ್ಣಗೊಳಿಸಿದ್ದಕ್ಕೆ ಯಶ್ಮಿತಾ ಅವರಿಗೆ 100/- ರೂಪಾಯಿ ಹಣ ನೀಡಿರುತ್ತಾರೆ. ನಂತರ 1 ಸಾವಿರ ರೂಪಾಯಿ ಹಣ ಹಾಕಿದ್ದಕ್ಕೆ 1,300/- ರೂಪಾಯಿ ಹಾಕಿರುತ್ತಾರೆ. ಇದಾದ ನಂತರ ವಂಚಕರು ಲಿಂಕ್ ನೊಂದಿಗೆ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ನೀಡಿರುತ್ತಾರೆ.
ಇದರಲ್ಲಿ ಮಹಿಳೆ ಲಾಗಿನ್ ಆಗಿದ್ದು, ಅದರಲ್ಲಿ ಡೆಪೋಸಿಟ್, ವಿತ್ ಡ್ರಾ ಆಯ್ಕೆಯನ್ನು ನೀಡಿದ್ದು, ಅದಕ್ಕೆ 3 ಸಾವಿರ ರೂಪಾಯಿ ಹಣ ಹಾಕಿದ್ದಕ್ಕೆ ಕಮಿಷನ್ ಆಗಿ 4,800/- ರೂಪಾಯಿ ಹಣವನ್ನು ಮಹಿಳೆಗೆ ಡೆಪಾಸಿಟ್ ಮಾಡಲಾಗಿದೆ. ಅದನ್ನು ಅವರು ವಿತ್ ಡ್ರಾ ಮಾಡಿದ್ದಾರೆ. ನಂತರ ಇನ್ನು ಹೆಚ್ಚಿನ ಹಣವನ್ನು ಹಾಕುವಂತೆ ಆನ್ ಲೈನ್ ವಂಚಕರು ತಿಳಿಸಿದಂತೆ ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗಳಿಗೆ ಮಹಿಳೆ ಹಂತ ಹಂತವಾಗಿ ಒಟ್ಟು 6,80,976/- ರೂಪಾಯಿ ಹಣ ಕಳುಹಿಸಿದ್ದಾರೆ. ಸದ್ರಿ ಹಣ ಪಡೆದ ವಂಚಕರು ಮಹಿಳೆಗೆ ಯಾವುದೇ ಕಮೀಷನ್ ನೀಡದೆ ಮೋಸ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2025 ಕಲಂ 66(ಡಿ) ಐಟಿ ಕಾಯ್ದೆ 318(4) ಬಿ ಎನ್ ಎಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment