ಬೆಂಗಳೂರು, ಜೂನ್ 13, 2025 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ 108 ಆಂಬ್ಯುಲೆನ್ಸ್ ಸೇವೆಯನ್ನು ಆರೋಗ್ಯ ಇಲಾಖೆಯ ನೇರ ನಿರ್ವಹಣೆಯಡಿ ತರುವ ಪ್ರಸ್ತಾವನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು, ಇನ್ನು ಮುಂದೆ ಸರಕಾರವೇ 108 ಅಂಬ್ಯುಲೆನ್ಸ್ ಸೇವೆಯನ್ನು ನಿರ್ವಹಿಸಲಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಹೇಳಿದ್ದಾರೆ.
ಈ ಉಪಕ್ರಮವು 108 ಆಂಬ್ಯುಲೆನ್ಸ್ ಸೇವೆಯನ್ನು ಖಾಸಗಿ ನಿಯಂತ್ರಣದಿಂದ ಮುಕ್ತಗೊಳಿಸಿ ಆರೋಗ್ಯ ಇಲಾಖೆಯಡಿ ತರಲಾಗಿದೆ ಎಂದ ಸಚಿವರು ರಾಜ್ಯ ಸರಕಾರದ ಈ ಕ್ರಮದಿಂದಾಗಿ 108 ಆರೋಗ್ಯ ಕವಚ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗುವ ಭರವಸೆ ಮೂಡಿದ್ದು, ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 250 ಕೋಟಿ ರೂಪಾಯಿ ಉಳಿಸುತ್ತದೆ ಎಂದರು.
715 ಆಂಬ್ಯುಲೆನ್ಸ್‍ಗಳ ಸಮೂಹವನ್ನು ನಿರ್ವಹಿಸಲು ರಾಜ್ಯ ಮಟ್ಟದಲ್ಲಿ ಕೇಂದ್ರೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗುವುದು ಮತ್ತು ಇದಕ್ಕಾಗಿ ‘112 ಎನ್ ಜಿ-ಇ ಆರ್ ಎಸ್ ಎಸ್’ ಸಾಫ್ಟ್‍ವೇರ್ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಪ್ರತಿ ಜಿಲ್ಲೆಗಳಲ್ಲಿಯೂ 108 ಕಂಟ್ರೋಲ್ ಸೆಂಟರ್‍ಗಳು ಕಾರ್ಯನಿರ್ವಹಿಸಲಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ ಎಂದ ಸಚಿವ ದಿನೇಶ್ ಗುಂಡೂರಾವ್ ಆಂಬ್ಯುಲೆನ್ಸ್ ಗಳಿಗೆ ಚಾಲಕರು ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ಜಿಲ್ಲಾ ಮಟ್ಟದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು ಎಂದರು.
ಆರಂಭದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ನಿರ್ವಹಣೆ ಪ್ರಾರಂಭಿಸಲಾಗುತ್ತಿದೆ. ನಂತರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿರ್ವಹಣೆ ಕಾರ್ಯ ಆರಂಭವಾಗಲಿದೆ. ಅಲ್ಲದೇ 108 ಹೊರತಾಗಿ ರಾಜ್ಯದಲ್ಲಿರುವ 1000ಕ್ಕೂ ಹೆಚ್ಚು ಸ್ಟೇಟ್ ಅಂಬ್ಯುಲೆನ್ಸ್ ಗಳನ್ನು ಕೂಡಾ 108 ಕಮಾಂಡ್ ಸೆಂಟರ್ ಅಧೀನಕ್ಕೆ ತರಲು ಯೋಜನೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ಗುಂಡೂರಾವ್ ಹೇಳಿದ್ದಾರೆ.
0 comments:
Post a Comment