ಐಪಿಎಲ್ ವಿಜಯೋತ್ಸವದಲ್ಲಿ 11 ಜನ ಮೃತ್ಯು, 47 ಮಂದಿಗೆ ಗಾಯ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ, ಗಾಯಾಳುಗಳ ಚಿಕಿತ್ಸಾ ವೆಚ್ಚ ಸರಕಾರ ಭರಿಸಲಿದೆ : ಸಿಎಂ ಸಿದ್ದರಾಮಯ್ಯ - Karavali Times ಐಪಿಎಲ್ ವಿಜಯೋತ್ಸವದಲ್ಲಿ 11 ಜನ ಮೃತ್ಯು, 47 ಮಂದಿಗೆ ಗಾಯ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ, ಗಾಯಾಳುಗಳ ಚಿಕಿತ್ಸಾ ವೆಚ್ಚ ಸರಕಾರ ಭರಿಸಲಿದೆ : ಸಿಎಂ ಸಿದ್ದರಾಮಯ್ಯ - Karavali Times

728x90

4 June 2025

ಐಪಿಎಲ್ ವಿಜಯೋತ್ಸವದಲ್ಲಿ 11 ಜನ ಮೃತ್ಯು, 47 ಮಂದಿಗೆ ಗಾಯ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ, ಗಾಯಾಳುಗಳ ಚಿಕಿತ್ಸಾ ವೆಚ್ಚ ಸರಕಾರ ಭರಿಸಲಿದೆ : ಸಿಎಂ ಸಿದ್ದರಾಮಯ್ಯ

 ಬೆಂಗಳೂರು, ಜೂನ್ 05, 2025 (ಕರಾವಳಿ ಟೈಮ್ಸ್) : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವಿಜಯೋತ್ಸವ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿದೆ. ಇಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11 ಜನರು ಮೃತಪಟ್ಟು, 47 ಮಂದಿ ಗಾಯಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದೇನೆ, ತಮ್ಮವರನ್ನು ಕಳೆದುಕೊಂಡವರನ್ನು ಸಂತೈಸಿದ್ದೇನೆ. ಸಂಭ್ರಮಾಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಾಗಿತ್ತು. ಈ ಘಟನೆಯ ಬಗ್ಗೆ ನಮಗೆ ಮರುಕವಿದೆ ಎಂದರು. 

ಸಾವಿಗೀಡಾದವರಲ್ಲಿ ಹೆಚ್ಚಿನವರು ಯುವ ವಯಸ್ಸಿನವರು. ನಾವು ಮೃತಪಟ್ಟವರ ಕುಟುಂಬದವರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಿದ್ದೇವೆ. ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಗೊಂಡವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದ ಸಿಎಂ ಈ ದುರಂತದ ಬಗ್ಗೆ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದೇನೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. 15 ದಿನಗಳ ಒಳಗಾಗಿ ತನಿಖೆಯ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದರು. 

ನಿನ್ನೆ ತಡರಾತ್ರಿವರೆಗೂ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಕ್ರಿಕೆಟ್ ಅಸೋಸಿಯೇಶನ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸರ್ಕಾರದ ವತಿಯಿಂದ ವಿಧಾನಸೌಧದ ಬಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಮ್ಮ ನಿರೀಕ್ಷೆಗೂ ಮೀರಿ ಜನ, ಅಭಿಮಾನಿಗಳು ಸೇರಿದ್ದರು. ವಿಧಾನಸೌಧ ಎದುರು ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಆದರೂ ಸರ್ಕಾರ ಆಯೋಜಿಸಿದ್ದ ಸಮಾರಂಭದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು, ದುರಂತ ನಡೆದಿಲ್ಲ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ಸಂಭವಿಸಿದೆ. ಯಾರೂ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕ್ರಿಕೆಟ್ ಅಸೋಸಿಯೇಶನ್ ಅಥವಾ ನಾವು ನಿರೀಕ್ಷಿಸಿರಲಿಲ್ಲ. ಕ್ರಿಕೆಟ್ ಸ್ಟೇಡಿಯಂನಲ್ಲಿ 35 ಸಾವಿರ ಜನರು ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿದೆ. ಆದರೆ 2-3 ಲಕ್ಷ ಜನರು ಆಗಮಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಬರುವ ನಿರೀಕ್ಷೆ ಮಾಡಿರಲಿಲ್ಲ. ಸ್ಟೇಡಿಯಂ ಸಾಮರ್ಥ್ಯದಷ್ಟು ಜನರ ನಿರೀಕ್ಷೆಯಿತ್ತು ಎಂದ ಸಿದ್ದರಾಮಯ್ಯ, ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವ ಕೆಲಸ ಸರ್ಕಾರ ಮಾಡುತ್ತದೆಯಷ್ಟೇ ಎಂದರು. 

ಗಾಯಗೊಂಡವರಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ನೆರವು ಸರ್ಕಾರ ಒದಗಿಸಲಿದೆ. ಈ ವಿಷಯದಲ್ಲಿ ರಾಜಕೀಯ ನಡೆಸುವುದು ಸರಿಯಲ್ಲ. ಈ ದುರಂತ ನಡೆಯಬಾರದಿತ್ತು, ನಡೆದು ಹೋಗಿದೆ. ಇದಕ್ಕಾಗಿ ಸರ್ಕಾರ ಅತ್ಯಂತ ಹೆಚ್ಚಿನ ದುಃಖ ವ್ಯಕ್ತಪಡಿಸುತ್ತದೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗ, ಪೆÇೀಷಕರಿಗೆ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. 

  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ವಿಜಯೋತ್ಸವದಲ್ಲಿ 11 ಜನ ಮೃತ್ಯು, 47 ಮಂದಿಗೆ ಗಾಯ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ, ಗಾಯಾಳುಗಳ ಚಿಕಿತ್ಸಾ ವೆಚ್ಚ ಸರಕಾರ ಭರಿಸಲಿದೆ : ಸಿಎಂ ಸಿದ್ದರಾಮಯ್ಯ Rating: 5 Reviewed By: karavali Times
Scroll to Top