ಬಂಟ್ವಾಳ, ಸೆಪ್ಟೆಂಬರ್ 29, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆ ಪ್ರವೇಶಿಸುವ ಸಾಲುಮರ ರಸ್ತೆಯು ಯಾವುದೇ ರಕ್ಷಣಾ ತಡೆ ಬೇಲಿ ಇಲ್ಲದೆ ವಾಹನ ಸವಾರರ ಪಾಲಿಗೆ ಅಪಾಯವನ್ನು ತಂದೊಡ್ಡುವ ಸನ್ನಿವೇಶ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸಾಲುಮರ ರಸ್ತೆಯು ಪ್ರಾಚೀನ ಇತಿಹಾಸ ಇರುವ ರಸ್ತೆಯಾಗಿದ್ದು, ಪಾಣೆಮಂಗಳೂರು ಪೇಟೆ ಪ್ರವೇಶಿಸಲು ಪ್ರಮುಖ ರಸ್ತೆಯೂ ಆಗಿದೆ. ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆ ದಾಟಿ ಮುಂದಕ್ಕಿರುವ ತಿರುವಿನಲ್ಲಿ ಈ ರಸ್ತೆ ಇದ್ದು, ಕಿರಿದಾದ ಈ ರಸ್ತೆಯಲ್ಲಿ ವಾಹನ ಸವಾರರು ಕೊಂಚ ಯಾಮಾರಿದರೂ ರಸ್ತೆ ಬದಿಯ ಕಮರಿಗೆ ನುಗ್ಗಿ ಬೀಳುವ ಎಲ್ಲ ಸಾಧ್ಯತೆಗಳೂ ಹೆಚ್ಚಾಗಿವೆ. ಈ ರಸ್ತೆಯ ಎರಡೂ ಬದಿಯಲ್ಲೂ ಕಮರಿನಂತಹ ಸನ್ನಿವೇಶ ಇದ್ದು, ಮಳೆಗಾಲದಲ್ಲಿ ನೀರು ತುಂಬಿರುತ್ತದೆ. ಸದಾ ನೀರು ಹರಿಯುವ ತೋಡು ಹಾಗೂ ಸಮೀಪದಲ್ಲೇ ನೇತ್ರಾವತಿ ನದಿಯೂ ಇದೆ. ನದಿಗೆ ಅಣೆಕಟ್ಟು ನಿರ್ಮಿಸಿರುವುದರಿಂದ ನದಿಯಲ್ಲಿ ಎಲ್ಲ ಕಾಲದಲ್ಲೂ ನೀರು ತುಂಬಿರುತ್ತದೆ. ಈ ಕಾರಣದಿಂದ ಸಾಲುಮರ ರಸ್ತೆಯ ಕೆಳಭಾಗ ನೀರು ನಿಲ್ಲುವ ಜಾಗ ಆಗಿರುವುದರಿಂದ ಬೇಸಿಗೆ ಕಾಲದಲ್ಲೂ ಈ ಜಾಗದಲ್ಲಿ ಕೆಸರು ತುಂಬಿರುತ್ತದೆ. ವಾಹನ ಸವಾರರು ಯಾಮಾರಿ ಕಮರಿಗೆ ಉರುಳಿ ಬಿದ್ದರೆ ಪ್ರಾಣ ಹಾನಿಯಂತಹ ಗಂಭೀರ ಅಪಾಯಗಳನ್ನು ಅಲ್ಲಗಳೆಯುವಂತಿಲ್ಲ.
ಈಗಾಗಲೇ ಕೆಲವು ಬಾರಿ ಇಲ್ಲಿ ವಾಹನ ಅಪಘಾತಗಳು ಸಂಭವಿಸಿದರೂ ಸವಾರರು ಮಾತ್ರ ಗಂಭೀರ ಅಪಾಯಗಳಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅಲ್ಲದೆ ರಾತ್ರಿ ವೇಳೆ ಈ ರಸ್ತೆಯಲ್ಲಿ ವಿದ್ಯುತ್ ದೀಪ ವ್ಯವಸ್ಥೆಯೂ ಸಮರ್ಪಕವಾಗಿಲ್ಲದೆ ಇರುವುದರಿಂದ ವಾಹನ ಸವಾರರ ಪಾಲಿಗೆ ಇದೂ ಕೂಡಾ ಅಪಾಯವನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಈ ಪರಿಸರದಲ್ಲಿ ಜನ ತ್ಯಾಜ್ಯ-ಕಸಗಳನ್ನು ಎಸೆಯುತ್ತಿರುವುದರಿಂದ ಬೀದಿ ನಾಯಿಗಳೂ ಈ ಪರಿಸರದಲ್ಲಿ ಬೇಕಾಬಿಟ್ಟಿಯಾಗಿ ಅಲೆದಾಡುತ್ತಿರುತ್ತದೆ. ತ್ಯಾಜ್ಯ ಎಳೆದಾಡುವ ಬೀದಿ ನಾಯಿಗಳು ವಾಹನ ಸಂಚಾರದ ಸಂದರ್ಭ ರಸ್ತೆಯಲ್ಲೇ ಅಡಾದಿಡ್ಡಿ ಓಡಿ ಬಂದು ವಾಹನ ಸವಾರರ ಪಾಲಿಗೆ ಅಪಾಯ ತಂದೊಡ್ಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈ ಹಿನ್ನಲೆಯಲ್ಲಿ ಇಲ್ಲಿನ ಸಾಲು ಮರ ರಸ್ತೆಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಕ್ಷಣಾ ತಡೆಬೇಲಿ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಡೆಗಟ್ಟುವಂತೆ ಜನ ಆಗ್ರಹಿಸಿದ್ದಾರೆ.

























0 comments:
Post a Comment