ಬಂಟ್ವಾಳ, ಸೆಪ್ಟೆಂಬರ್ 13, 2025 (ಕರಾವಳಿ ಟೈಮ್ಸ್) : ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಒಟ್ಟು 545.04 ಕೋಟಿ ರೂಪಾಯಿ ವ್ಯವಹಾರ ನಡೆಸಿ, 19306792.15 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸಂಘವು 1947ರಲ್ಲಿ ಆಗಿನ ಸಹಕಾರಿ ಬಂಧುಗಳ ನೆರವಿನಿಂದ ಬಿ ಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿದ್ದು, ಸಂಘವು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಸೇರಿದಂತೆ ಬಂಟ್ವಾಳ ತಾಲೂಕಿನ 7 ಗ್ರಾಮಗಳೊಂದಿಗೆ ಒಟ್ಟಾರೆ 8 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಆಡಳಿತ ಮಂಡಳಿಯ ನಿರ್ದೇಶಕರ, ಸಿಬ್ಬಂದಿಗಳ ಹಾಗೂ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಎಲ್ಲರಿಗೂ ತೃಪ್ತಿಕರವಾದ ಸೇವೆಯನ್ನು ನೀಡುತ್ತಾ ಬಂದಿದ್ದು, ಕಳೆದ 78 ವರ್ಷಗಳಿಂದ ಕಾರ್ಯಚರಿಸುತ್ತಾ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
2024-25ನೇ ವರ್ಷದಲ್ಲಿ ವಿವಿಧ ಉದ್ದೇಶಗಳಿಗೆ ಒಟ್ಟು 122.33 ಕೋಟಿ ಸಾಲ ವಿತರಿಸಲಾಗಿದ್ದು, ಹೊರ ಬಾಕಿ ಸಾಲವು 112.32 ಕೋಟಿ ರೂಪಾಯಿ ಆಗಿದ್ದು, ವಿತರಿಸಿದ ಸಾಲದಲ್ಲಿ ಶೇ 97% ರಷ್ಟು ವಸೂಲಾತಿಯಾಗಿರುತ್ತದೆ. 2024-25ನೇ ಸಾಲಿನ ವರ್ಷಾಂತ್ಯಕ್ಕೆ 62.19 ಕೋಟಿ ರೂಪಾಯಿ ಠೇವಣಿ ಹೊಂದಿದ್ದು, ನಮ್ಮ ಸಂಘವು ಕಳೆದ ಹಲವಾರು ವರ್ಷಗಳಿಂದ ಅಡಿಟ್ ವರದಿಯಲ್ಲಿ ನಿರಂತರವಾಗಿ “ಎ” ಗ್ರೇಡ್ ಕಾಯ್ದುಕೊಂಡು ಬರಲಾಗಿದೆ ಎಂದ ಪ್ರಭಾಕರ ಪ್ರಭು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಗರಿಷ್ಠ ಸಾಧನೆ ಮಾಡಿದೆ ಎಂದರು.
2024-25ನೇ ಸಾಲಿನಲ್ಲಿ 1771 ರೈತರು 2037 ಎಕ್ರೆ ಜಮೀನಿಗೆ ಸಂಬಂಧಿಸಿದಂತೆ 52.74 ಲಕ್ಷ ರೂಪಾಯಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಸಂಬಂಧಿಸಿ ರೈತರಿಂದ ಪ್ರೀಮಿಯಂ ಪಾವತಿಸಲಾಗಿದೆ. ಕಳೆದ ವರ್ಷ ನಮ್ಮ ಸಂಘದ ವ್ಯಾಪ್ತಿಯ ಸದಸ್ಯರು ಸುಮಾರು 5-6 ಕೋಟಿ ಬೆಳೆ ವಿಮೆ ಪರಿಹಾರ ಪಡೆದಿರುತ್ತಾರೆ. ಇದರಿಂದ ನಮ್ಮ ಸಂಘವು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳಲ್ಲಿ ಒಂದಾಗಿದೆ ಎಂದ ಅವರು ಸಂಘದ ಸದಸ್ಯರ ಪ್ರತಿಭಾನ್ವಿತ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದವರನ್ನು ಗೌರವಿಸಲಾಗುತ್ತದೆ ಎಂದರು.
ಸ್ಥಳೀಯ ರೋಟರಿ ಕ್ಲಬ್ ಗಳ ಸಹಯೋಗದಲ್ಲಿ ಸಂಘದ ವತಿಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಮತ್ತು ಪ್ಯಾಶನ್ ಡಿಸೈನಿಂಗ್ ತರಬೇತಿ ನೀಡಲಾಗಿದೆ. ಸಂಘದಿಂದ ಬೆಳೆ ಸಾಲ ಪಡೆದ ಸದಸ್ಯರು ಮರಣ ಹೊಂದಿದ್ದಲ್ಲಿ, ಸದ್ರಿಯವರ ಕುಟುಂಬಕ್ಕೆ ಸಂಘದ ವತಿಯಿಂದ ನೆರವಾಗುವ ದೃಷ್ಠಿಯಲ್ಲಿ ‘ರೈತ ಕಲ್ಯಾಣ ನಿಧಿ’ ಯೋಜನೆಯ ಮೂಲಕ 10 ಸಾವಿರ ರೂಪಾಯಿಯಂತೆ 24 ಮಂದಿಗೆ ಆರ್ಥಿಕವಾಗಿ ಸಹಕಾರ ನೀಡಲಾಗಿದೆ ಎಂದ ಅಧ್ಯಕ್ಷ ಪ್ರಭು, ನ್ಯಾಯಬೆಲೆ ಅಂಗಡಿಯ ಮೂಲಕ ಸಂಘದಲ್ಲಿ ಪಡಿತರ ಸಾಮಾಗ್ರಿಗಳನ್ನು ಸಮರ್ಪಕವಾಗಿ ವಿತರಿಸಲಾಗಿದ್ದು, ಸಂಘದಲ್ಲಿ “ನೇತಾಜಿ ಬಹುಪಯೋಗಿ ಸೇವಾಕೇಂದ್ರ”ದ ಹೆಸರಿನಲ್ಲಿ ಗೋದಾಮು ಕಟ್ಟಡ ಇದ್ದು, ಇದರ ಮೂಲಕ ರಾಸಾಯನಿಕ ಗೊಬ್ಬರ, ಸಾವಯವ ಗೊಬ್ಬರ, ಮೈಲುತ್ತುತ್ತು, ಸುಣ್ಣ ಸೇರಿದಂತೆ ರೈತರಿಗೆ ಬೇಕಾಗುವ ಉತ್ತಮ ಗುಣ ಮಟ್ಟದ ಕೃಷಿ ಉಪಯುಕ್ತ ಉಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ಸಂಘವು ಸಿದ್ದಕಟ್ಟೆ ಪ್ರಧಾನ ಕಛೇರಿ ಸೇರಿದಂತೆ, ಆರಂಬೋಡಿ, ರಾಯಿ, ಮಾವಿನಕಟ್ಟೆ, ಅರಳ ಎಂಬಲ್ಲಿ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿದ್ದು, ಸಿಸಿ ಕ್ಯಾಮೆರಾ ಹಾಗೂ ಸೈರನ್ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಹಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಆರ್ ಟಿ ಜಿ ಎಸ್, ನೆಫ್ಟ್ ವ್ಯವಸ್ಥೆಯೊಂದಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕ ಕಾರ್ಯಕ್ರಮಕ್ಕೆ ಅನೂಕೂಲವಾಗುವಂತೆ ಸಂಘದ ಸ್ಥಾಪಕಾಧ್ಯಕ್ಷ ಬೆಳ್ಳಿಪ್ಪಾಡಿ ಕೃಷ್ಣ ರೈ ಅವರ ಸವಿ ನೆನಪಿಗಾಗಿ ಅವರ ಹೆಸರಿನಲ್ಲಿ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರ ಕಾರ್ಯಕ್ರಮಗಳಿಗೆ ಸಭಾಂಗಣವನ್ನು ಉಚಿತವಾಗಿ ನೀಡಲಾಗುತ್ತಿದೆ ಪ್ರಭು ವಿವರಿಸಿದರು.
2024-25ನೇ ಸಾಲಿನ ಮಹಾಸಬೆಯು ಸೆಪ್ಟೆಂಬರ್ 20 ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಸಂಘದ ಕೇಂದ್ರ ಕಛೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಲಿದ್ದು, ಸಂಘದ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.
ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೆÇಡುಂಬ, ನಿರ್ದೇಶಕರಾದ ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಜಾರಪ್ಪ ನಾಯ್ಕ, ವೀರಪ್ಪ ಪರವ, ಎ ಶಿವ ಗೌಡ, ಶ್ರೀಮತಿ ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾಗಿ ರಾಜೇಶ್ ಶೆಟ್ಟಿ ಕೆ, ನವೀನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಆರತಿ ಶೆಟ್ಟಿ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮಲ್ಲಿಕಾ ಅವರು ಸುದ್ದಿಗೋಷ್ಠಿಯಲ್ಲಿದ್ದರು.
















0 comments:
Post a Comment