ದಕ್ಷ ಪೊಲೀಸ್ ಅಧಿಕಾರಿಗಳ ನೇಮಿಸಿ ದ.ಕ. ಜಿಲ್ಲೆಯ ಕೋಮು ಸಂಘರ್ಷದ ವಾತಾವರಣಕ್ಕೆ ಸರಕಾರ ಕಡಿವಾಣ ಹಾಕಿದೆ : ಸಿಎಂ ಸಿದ್ದರಾಮಯ್ಯ - Karavali Times ದಕ್ಷ ಪೊಲೀಸ್ ಅಧಿಕಾರಿಗಳ ನೇಮಿಸಿ ದ.ಕ. ಜಿಲ್ಲೆಯ ಕೋಮು ಸಂಘರ್ಷದ ವಾತಾವರಣಕ್ಕೆ ಸರಕಾರ ಕಡಿವಾಣ ಹಾಕಿದೆ : ಸಿಎಂ ಸಿದ್ದರಾಮಯ್ಯ - Karavali Times

728x90

20 October 2025

ದಕ್ಷ ಪೊಲೀಸ್ ಅಧಿಕಾರಿಗಳ ನೇಮಿಸಿ ದ.ಕ. ಜಿಲ್ಲೆಯ ಕೋಮು ಸಂಘರ್ಷದ ವಾತಾವರಣಕ್ಕೆ ಸರಕಾರ ಕಡಿವಾಣ ಹಾಕಿದೆ : ಸಿಎಂ ಸಿದ್ದರಾಮಯ್ಯ

ಪುತ್ತೂರು, ಅಕ್ಟೋಬರ್ 20, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸಂಘರ್ಷದ ವಾತಾವರಣಕ್ಕೆ ನಮ್ಮ ಸರಕಾರ ಕಡಿವಾಣ ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪುತ್ತೂರು ತಾಲೂಕಿನ ಕೊಂಬೆಟ್ಟು ಸರಕಾರಿ ಪಿಯು ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂಬರ್ ಒನ್ ಇತ್ತು. ಆದರೆ ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ. ಇಲ್ಲಿ ಎತ್ತಿಕಟ್ಟೋರ ಮಕ್ಕಳು ಯಾರೂ ಈ ಜಗಳದಲ್ಲಿ ಭಾಗಿಯಾಗಲ್ಲ. ಮೇಲ್ಜಾತಿ, ಶ್ರೀಮಂತರ ಮಕ್ಕಳು ಯಾರೂ ಸಾಯಲ್ಲ. ನಾನು ಯಾರ ಮಾತನ್ನೂ ಕೇಳಿಲ್ಲ, ದಕ್ಷ ಪೊಲೀಸ್ ಅಧಿಕಾರಿಗಳಾದ ಕಮಿಷನರ್, ಎಸ್ಪಿ ಅವರನ್ನು ನೇಮಕ ಮಾಡಿದೆ. ಈಗ ಪರಿಸ್ಥಿತಿ ಸುಧಾರಣೆ ಆಗಿಲ್ವಾ? ದಕ್ಷ ಅಧಿಕಾರಿಗಳು ಇದ್ರೆ ಬದಲಾವಣೆ ಸಾಧ್ಯ. ಯಾವತ್ತಿಗೂ ನಾವು ಅಮಾಯಕರ ಮಕ್ಕಳನ್ನ ಸಾಯಿಸೋ ಕೆಲಸ ಮಾಡಬಾರದು. ಬೇರೆ ಧರ್ಮದವರನ್ನ ದ್ವೇಷ ಮಾಡೋ ಕೆಲಸ ಮಾಡಬಾರದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಿಯೇ ಮಾಡುತ್ತೇವೆ, ನಾವು ಯಾವತ್ತೂ ಕೊಟ್ಟ ಮಾತಿಗೆ ತಪ್ಪುವವರಲ್ಲ. ಜನರಿಗೆ ನೀಡಿದ ಮಾತಿನಂತೆ ಖಂಡಿತಾ ನಡೆದುಕೊಳ್ಳುತ್ತೇವೆ. ಈ ಹಿಂದೆ ಬಜೆಟಿನಲ್ಲಿ ಘೋಷಣೆ ಮಾಡಿದಂತೆ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುತ್ತೇವೆ ಎಂದರು. 

ಕೆಲವರು ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದಾರೆ. ಸರ್ಕಾರದ ಬಳಿ ದುಡ್ಡಿಲ್ಲ ಅಂತಾರೆ. ದುಡ್ಡಿಲ್ಲದಿದ್ದರೆ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಕೊಡೋಕೆ ಆಗ್ತಿತ್ತಾ ಎಂದು ಸಿಎಂ ಪ್ರಶ್ನಿಸಿದರು. 

ನಮ್ಮ ಸಮಾಜದಲ್ಲಿ ಅನೇಕ ಜಾತಿ ಮತ್ತು ಧರ್ಮಗಳಿವೆ. ಯಾವ ಧರ್ಮವೂ ದ್ವೇಷ ಮಾಡಿ ಅಂತ ಯಾರಿಗೂ ಹೇಳಲ್ಲ. ಪ್ರತಿಯೊಬ್ಬನ ಪ್ರೀತಿಸಿ ಅಂತ ಹೇಳುತ್ತೆ, ವೈವಿಧ್ಯತೆಯಲ್ಲಿ ಏಕತೆ ಮಾಡಿಕೊಳ್ಳಬೇಕು. ಧರ್ಮದ ತತ್ವ, ಆದರ್ಶ ಪಾಲನೆ ಮಾಡಲಿ, ಸರ್ವ ಜನಾಂಗದ ಶಾಂತಿಯ ತೋಟದ ಬದಲು ದ್ವೇಷ, ಕಚ್ಚಾಟ ಇರಬಾರದು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. 

ಪ್ರತಿಯೊಬ್ಬ ವ್ಯಕ್ತಿ ಮನುಷ್ಯರಾಗೋಕೆ ಪ್ರಯತ್ನ ಮಾಡಬೇಕು. ಕೋಮು ಸೌಹಾರ್ದತೆ ಇದ್ದರೆ ರಾಜ್ಯ, ಜಿಲ್ಲೆ ಅಭಿವೃದ್ಧಿಯಾಗುತ್ತೆ. ಅದಕ್ಕಾಗಿ ನಾವು ಕೋಮು ಸೌಹಾರ್ದ ಕಾಪಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೌಹಾರ್ದಕ್ಕೆ ವಿಶೇಷ ಗಮನ ಕೊಡಬೇಕು. ಸುಳ್ಳು ಹೇಳಿದ್ರೆ ಕಾನೂನು ತಂದು ಕೇಸ್ ಹಾಕುತ್ತೇವೆ ಎಂದ ಸಿಎಂ ಸಮಾಜದಲ್ಲಿ ಶ್ರೀಮಂತರು, ಬಡವರು, ಮೇಲ್ಜಾತಿ, ಕೆಳ ಜಾತಿ ಎಲ್ಲರೂ ಇದ್ದಾರೆ. ಸಮಾನತೆಯ ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದೇ ಇರೋರಿಗೆ ಸಹಾಯ ಮಾಡಬೇಕು. ಬಸವಣ್ಣ ಕೂಡ ಕಾಯಕ ಮತ್ತು ದಾಸೋಹದ ಬಗ್ಗೆ ಹೇಳಿದ್ದಾರೆ. ನಮ್ಮಲ್ಲಿ ಅಸಮಾನತೆ, ತಾರತಮ್ಯ ಇದೆ, ಇಲ್ಲಿ ಸಮ ಸಮಾಜ ನಿರ್ಮಾಣ ಆಗಬೇಕು. ನಾನು ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸ್ತಾ ಇದ್ದೇನೆ. ಸಂವಿಧಾನ ಅರಿಯದೇ ಇದ್ದರೆ ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದರು. 

  • Blogger Comments
  • Facebook Comments

0 comments:

Post a Comment

Item Reviewed: ದಕ್ಷ ಪೊಲೀಸ್ ಅಧಿಕಾರಿಗಳ ನೇಮಿಸಿ ದ.ಕ. ಜಿಲ್ಲೆಯ ಕೋಮು ಸಂಘರ್ಷದ ವಾತಾವರಣಕ್ಕೆ ಸರಕಾರ ಕಡಿವಾಣ ಹಾಕಿದೆ : ಸಿಎಂ ಸಿದ್ದರಾಮಯ್ಯ Rating: 5 Reviewed By: karavali Times
Scroll to Top