ಮಂಗಳೂರು, ಅಕ್ಟೋಬರ್ 24, 2025 (ಕರಾವಳಿ ಟೈಮ್ಸ್) : ರೌಡಿಶೀಟರ್ ಹಾಗೂ ಕೊಲೆ ಆರೋಪಿ ಸಹಿತ ಇಬ್ಬರು ಪಟಾಕಿ ಅಂಗಡಿ ಮಾಲಕರಿಗೆ ಬೆದರಿಕೆ ಹಾಕಿ ಸುಲಿಗೆ ಯತ್ನ ಮಾಡಿದ ಆರೋಪದಲ್ಲಿ ಬಜ್ಪೆ ಪೆÇಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ರೌಡಿಶೀಟರ್, ಫಾಝಿಲ್ ಕೊಲೆ ಪ್ರಕರಣ ಆರೋಪಿ ಪ್ರಶಾಂತ್ ಅಲಿಯಾಸ್ ಪಚ್ಚು ಹಾಗೂ ಅಶ್ವಿತ್ ಎಂದು ಹೆಸರಿಸಲಾಗಿದೆ. ಬಜ್ಪೆಯ ಪಟಾಕಿ ಅಂಗಡಿ ಮಾಲೀಕ ದಾಮೋದರ್ ಎಂಬವರನ್ನು ಬೆದರಿಸಿ ಸುಲಿಗೆ ಮಾಡಲು ಯತ್ನಿಸಿದ ಆರೋಪದಲ್ಲಿ ಈ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
ಆರಂಭದಲ್ಲಿ ಪಟಾಕಿ ಅಂಗಡಿ ಮಾಲಕರು ಹೆದರಿ ದೂರು ನೀಡಲು ಹಿಂದೇಟು ಹಾಕಿದ್ದರು. ಬಳಿಕ ಅವರು ಧೈರ್ಯ ಮಾಡಿಕೊಂಡು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಅಪರಾಧ ಚಟುವಟಿಕೆಗಳ ಹಿನ್ನಲೆ ಹೊಂದಿರುವ ಆರೋಪಿಗಳ ಜೊತೆ ಯಾರೂ ತಿರುಗಾಡಬಾರದು ಎಂದು ಈ ಹಿಂದೆಯೇ ಎಚ್ಚರಿಕೆ ನೀಡಲಾಗಿದ್ದು, ಆದರೂ ಸೂಚನೆ ಪಾಲಿಸದೆ ಅಪರಾಧಿ ಹಿನ್ನಲೆ ಹೊಂದಿರುವ ವ್ಯಕ್ತಿಗಳ ಜೊತೆ ತಿರುಗಾಟ ನಡೆಸಿದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮತ್ತೆ ಎಚ್ಚರಿಸಿದ್ದಾರೆ.

















0 comments:
Post a Comment