ಬಂಟ್ವಾಳ, ಅಕ್ಟೋಬರ್ 17, 2025 (ಕರಾವಳಿ ಟೈಮ್ಸ್) : ಹುಡುಗಿಯ ವಿಚಾರದಲ್ಲಿ ಎರಡು ಕೋಮಿನ ಯುವಕರು ಪರಸ್ಪರ ಗಲಾಟೆ ಮಾಡಿಕೊಂಡ ಘಟನೆ ಮಂಚಿ ಗ್ರಾಮದ ಮಂಚಿಕಟ್ಟೆ ಎಂಬಲ್ಲಿ ಅ 12 ರಂದು ಸಂಭವಿಸಿದೆ. ಈ ಬಗ್ಗೆ ಗ್ರಾಮದ ಬೀಟ್ ಪೊಲೀಸ್ ನೀಡಿದ ದೂರಿನಂತೆ ಆರು ಮಂದಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ವಿಜಿತ್ ಕುಮಾರ್ , ರಕ್ಷಿತ್ ಕೊಟ್ಟಾರಿ, ಪುಷ್ಪರಾಜ್, ಅಜೇಯ್, ಜಮೀರ್, ಮಹಮ್ಮದ್ ಮುಸ್ತಫಾ ಎಂದು ಹೆಸರಿಸಲಾಗಿದೆ.
ಅ 12 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಎಚ್ ಸಿ ಕೃ಼ಷ್ಣ ನಾಯ್ಕ ಅವರು ಮಂಚಿ ಗ್ರಾಮದಲ್ಲಿ ಬೀಟ್ ಸಂಚರಿಸುತ್ತಿರುವಾಗ ಮಂಚಿ ಕಟ್ಟೆ ಎಂಬಲ್ಲಿ ಯುವಕರು ಗಲಾಟೆ ಮಾಡಿಕೊಳ್ಳುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದಾಗ ಜನರು ಗುಂಪು ಸೇರಿದ್ದು ಗುಂಪಿನಲ್ಲಿ ವಿಜೇತ್ , ರಕ್ಷಿತ್ ಕೊಟ್ಟಾರಿ, ಪುಷ್ಪರಾಜ್, ಅಜೇಯ್, ಜಮೀರ್, ಮಹಮ್ಮದ್ ಮುಸ್ತಫ್ ರವರು ಗಲಾಟೆ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ದ್ವೇಷವನ್ನುಂಟು ಮಾಡುವ, ಸೌಹಾರ್ದತೆಗೆ ಬಾಧಕವಾಗುವ ರೀತಿಯಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಹೊಡೆದಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 153/2025 ಕಲಂ 189(2), 191(2), 196(1)(a), 196(1)(b), R/W 190 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.












0 comments:
Post a Comment