ಮಂಗಳೂರು, ಅಕ್ಟೋಬರ್ 20, 2025 (ಕರಾವಳಿ ಟೈಮ್ಸ್) : ಮುಂದಿನ ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ 2025 ರ 4ನೇ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ 5 ಮಂದಿ ಟ್ವೆಕಾಂಡೋ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
35 ಕೆಜಿಗಿಂತ ಕೆಳಗಿನ ವಿಭಾಗದಲ್ಲಿ ಸುರತ್ಕಲ್ ಕೋಡಿಕೆರೆ ನಿವಾಸಿ ಆದರ್ಶ್ (ಮಹೇಶ್ ಹನುಮಪ್ಪ-ವಿಜಯಲಕ್ಷ್ಮಿ ದಂಪತಿಯ ಪುತ್ರ), 39 ಕೆಜಿ ವಿಭಾಗದಲ್ಲಿ ಬೈಕಂಪಾಡಿ ನಿವಾಸಿ ಆಶಿಶ್ ಧಾಮಿ (ಲಲಿತ್ ಧಾಮಿ-ಲಕ್ಷ್ಮಿ ಧಾಮಿ ದಂಪತಿಯ ಪುತ್ರ), 38 ಕೆಜಿ ಕೆಳಗಿನ ವಿಭಾಗದಲ್ಲಿ ವಿಟ್ಲ ನಿವಾಸಿ ರಿಫಾ ಫಾತಿಮಾ (ಅಬ್ದುಸ್ಸಲಾಂ ಪಿ-ಅನೀಶಾ ಬಿಕೆ ದಂಪತಿಯ ಪುತ್ರಿ), ಕುಳಾಯಿ ನಿವಾಸಿ ಮುಹಮ್ಮದ್ ಶಿಮಾಕ್ ಅಲಿ (ಸಿರಾಜ್-ನಸೀಮಾ ದಂಪತಿಯ ಪುತ್ರ) ಹಾಗೂ 31 ಕೆಜಿ ವಿಭಾಗದಲ್ಲಿ ನಂದಾವರ ನಿವಾಸಿ ಮುಹಮ್ಮದ್ ಶಯಾನ್ (ಅಬ್ದುಲ್ ಶಮೀರ್-ಯಾಸ್ಮೀನ್ ದಂಪತಿಯ ಪುತ್ರ) ಅವರು ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಕರ್ನಾಟಕ ಒಲಿಂಪಿಕ್ ಎಸೋಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೆಂಬರ್ 3 ರಿಂದ 9ರವರೆಗೆ ಈ ಮಿನಿ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಕ್ರೀಡಾಪಟುಗಳನ್ನು ಅವರ ಅತ್ಯುತ್ತಮ ಪ್ರದರ್ಶನ ಮತ್ತು ಕ್ರೀಡೆಯ ಬದ್ಧತೆಯ ಆಧಾರದ ಮೇಲೆ ಈ ಆಯ್ಕೆ ಮಾಡಲಾಗಿದೆ. ಈ ಕ್ರೀಡಾಪಟುಗಳು ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಸ್ಪರ್ಧಿಸಲಿದ್ದಾರೆ.
ದಕ್ಷಿಣ ಕನ್ನಡ ಟ್ವೇಕಾಂಡೋ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಇಸ್ಮಾಯಿಲ್ ನಂದಾವರ ಹಾಗೂ ಕೋಚ್ ಮೆಹುಲ್ ಬಂಗೇರಾ ಅವರ ನೇತೃತ್ವದಲ್ಲಿ ಎಕ್ಸ್ಟ್ರೀಂ ಫಿಟ್ ಆಂಡ್ ಫೈಟ್ ಕ್ಲಬ್ ಸಂಸ್ಥೆಯಲ್ಲಿ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಅಧಿಕಾರಿ ಪ್ರದೀಪ್ ಡಿ ಸೋಜಾ ಅವರು ಶುಭ ಹಾರೈಸಿದ್ದಾರೆ.
























0 comments:
Post a Comment