ಬಂಟ್ವಾಳ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ವಿಪರೀತ ಅಮಲು ಪದಾರ್ಥ ಸೇವನೆಯ ಚಟ ಹೊಂದಿದ್ದ ಯುವಕನೋರ್ವ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಳ್ನಾಡು ಗ್ರಾಮದ ಕುಲಾಲು ಕಾನ ಎಂಬಲ್ಲಿ ಅ 29 ರಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ದಿನೇಶ್ ಕೆ ಎಚ್ (36) ಎಂದು ಹೆಸರಿಸಲಾಗಿದೆ. ಕೂಲಿ ಕಾರ್ಮಿಕನಾಗಿರುವ ಈತ ವಿಪರೀತ ಅಮಲು ಪದಾರ್ಥ ಸೇವೆನೆಯ ಚಟ ಹೊಂದಿದ್ದ. ಈತ ಕೆಲ ದಿನಗಳಿಂದ ಅಮಲು ಪದಾರ್ಥ ಸೇವಿಸಿ ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡುತ್ತಿದ್ದ. ಅ 28 ರಂದು ಕೆಲಸಕ್ಕೆ ಹೋದ ಈತ ಅ 29 ರಂದು ಮರಳಿ ಮನೆಗೆ ಬಂದು ತಾಯಿ ಭಾಗೀರಥಿ ಅವರೊಂದಿಗೆ ಹಣದ ವಿಚಾರಕ್ಕೆ ಜಗಳ ಮಾಡಿ ಮನೆಯ ಒಳಗೆ ಹೋಗಿ ಒಳಗಿನಿಂದ ಚಿಲಕ ಹಾಕಿದ್ದಾನೆ. ಬಳಿಕ ಅಮ್ಮ ಕರೆದಾಗ ಯಾವುದೇ ಪ್ರತ್ಯುತ್ತರ ಬಾರದೆ ಇದ್ದುದರಿಂದ ಈತನ ಸಹೋದರ ಪದ್ಮನಾಭ ಅವರು ಬಂದು ಮನೆಯ ಎದುರಿನ ಬಾಗಿಲನ್ನು ಒಡೆದು ತೆರೆದು ನೋಡಿದಾಗ ಅಡುಗೆ ಮನೆಯ ಪಕ್ಕದ ಕೋಣೆಯ ಅಡ್ಡ ಪಕ್ಕಾಸಿಗೆ ಸೀರೆಯನ್ನು ನೇಣು ಹಾಕಿಕೊಂಡು ನೇತಾಡಿಕೊಂಡಿರುವುದು ಕಂಡು ಬಂದಿದೆ. ಈತನನ್ನು ಕೆಳಗಿಳಿಸಿ ವಿಟ್ಲ ಸಮುದಾಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮೃತರ ಅಣ್ಣ ಪದ್ಮನಾಭ ಕೆ ಎಚ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ಪ್ರಕರಣ ದಾಖಲಾಗಿದೆ.

















0 comments:
Post a Comment