ಬಂಟ್ವಾಳ, ನವೆಂಬರ್ 17, 2025 (ಕರಾವಳಿ ಟೈಮ್ಸ್) : ಹಿರಿಯ ನಾಗರೀಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಕಾನೂನಾತ್ಮವಾಗಿ ಅಲ್ಲದೇ ಭಾವನಾತ್ಮಕವಾಗಿಯೂ ಪರಿಹಾರ ಕಂಡುಕೊಳ್ಳಬೇಕು. ಇಂದು ಕೂಡು ಕುಟುಂಬಗಳಿಲ್ಲದೇ ಹಿರಿಯ ನಾಗರಿಕರು ಸಮಸ್ಯೆಗಳನ್ನೆದುರಿಸುತ್ತಿದ್ದಾರೆ. ಆದ ಕಾರಣ ಯುವಕರು ಇದರ ಕುರಿತು ಜಾಗೃತರಾಗಬೇಕು ಎಂದು ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಅನಿಲ್ ಪ್ರಕಾಶ್ ಎಂ ಪಿ ಹೇಳಿದರು.
ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ (ರಿ), ಬಂಟ್ವಾಳ ಪೋಲೀಸ್ ಇಲಾಖೆ, ಬಂಟ್ವಾಳ ಎಸ್ ವಿ ಎಸ್ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಸ್ ವಿ ಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನ ಮತ್ತು ಕಾನೂನನ್ನು ಅರಿಯಬೇಕಾದ ಅಗತ್ಯತೆ ಇದೆ. ಇಂದಿನ ಯುವಕರು ಮುಂದೊಂದು ದಿನ ಹಿರಿಯರಾಗುತ್ತೀರೆಂಬ ಪರಿಜ್ಞಾನದಿಂದ ನಡೆಯಬೇಕು. ಹಿರಿಯರ ಅನುಭವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ವಿಯಾಗಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ನ್ಯಾಯವಾದಿ ಗಣೇಶ್ ಪೈ ಬಿ ಅವರು ಮಾತನಾಡಿ, ‘ಮಾತೃದೇವೋ ಭವ, ಪಿತೃದೇವೋ ಭವ’ ಎಂಬ ತತ್ವಗಳ ಆಚರಣೆ ಕೊರತೆಯಿಂದ ಪೋಷಕರು ಸಮಸ್ಯೆಗಳಿಗೊಳಗಾಗುತ್ತಿದ್ದಾರೆ. ವಿದ್ಯಾಭ್ಯಾಸ ಹೆಚ್ಚಾದಂತೆ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿದೆ. ಪೋಷಕರ ಕಷ್ಟದ ಅರಿವಾಗುವುದು ಪೋಷಕರಾದಾಗಲೇ ಎಂದರು.
ಅತಿಥಿಯಾಗಿದ್ದ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಮಾತನಾಡಿ, ಕಬ್ಬಿಣದ ಕಡಲೆ ಎಂದುಕೊಂಡಿರುವ ಕಾನೂನನ್ನು ವಿದ್ಯಾರ್ಥಿ ಹಂತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ತಿಳಿಯಲು ಸಾಧ್ಯ. ಇಂದಿನ ಯುವಕರು ಪೋಷಕರು ಮತ್ತು ಶಿಕ್ಷಕರ ನಿಯಂತ್ರಣ ಮೀರಿದಾಗ ಆರಕ್ಷಕರು ಪ್ರವೇಶ ಪಡೆಯುತ್ತಾರೆ. ಕಾನೂನಿನ ಅರಿವಿಲ್ಲ ಎಂದು ಹೇಳದೇ ತಿಳಿದುಕೊಳ್ಳಬೇಕು ಎಂದರು.
ಬಂಟ್ವಾಳ ವಕೀಲರ ಸಂಘದ ಕಾರ್ಯದರ್ಶಿ ನರೇಂದ್ರನಾಥ್ ಭಂಡಾರಿ ಭಾಗವಹಿಸಿದ್ದರು. ಎಸ್ ವಿ ಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ ಸ್ವಾಗತಿಸಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಇ ಎಲ್ ಸಿ ಸಂಯೋಜಕ ಡಾ ವಿನಾಯಕ ಕೆ ಎಸ್ ವಂದಿಸಿದರು. ಸಂಸ್ಕøತ ವಿಭಾಗದ ಮುಖ್ಯಸ್ಥ ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಕಾರ್ಯಕ್ರಮ ನಿರೂಪಿಸಿದರು. ಕು ಪೃಥ್ವಿ ಹಾಗೂ ತಂಡದವರು ಪ್ರಾರ್ಥಿಸಿದರು.













0 comments:
Post a Comment