ಜನವರಿ 10 ರಂದು 4ನೇ ವರ್ಷದ ನರಿಂಗಾನ ಲವ-ಕುಶ ಜೋಡುಕರೆ ಕಂಬಳೋತ್ಸವ : ಡಿಸಿಎಂ ಡಿ.ಕೆ. ಶಿವಕುಮಾರ್ ಸಹಿತ ಹಲವು ಗಣ್ಯರು ಭಾಗಿ
ಮಂಗಳೂರು, ಜನವರಿ 05, 2026 (ಕರಾವಳಿ ಟೈಮ್ಸ್) : ಜಾನಪದ ಕಲೆಯನ್ನು ಪ್ರಚುರಪಡಿಸುವುದರ ಜೊತೆಗೆ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಹಾಗೂ ಸಾಮರಸ್ಯ ಬೆಸೆಯುವ ಮಹತ್ತರ ಉದ್ದೇಶ ಇಟ್ಟುಕೊಂಡು ಕಳೆದ ಮೂರು ವರ್ಷಗಳಿಂದ ನರಿಂಗಾನ ಕಂಬಳೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ 4ನೇ ಲವ-ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವವು ಜನವರಿ 10 ರಂದು ಶನಿವಾರ ನಡೆಯಲಿದೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್, ಮಂಗಳೂರು ಶಾಸಕ ಡಾ ಯು ಟಿ ಖಾದರ್ ಫರೀದ್ ಹೇಳಿದರು.
ಸೋಮವಾರ ಅಪರಾಹ್ನ ಮಂಗಳೂರಿನ ಸಕ್ರ್ಯೂಟ್ ಹೌಸಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಬೆಳಿಗ್ಗೆ 9 ಗಂಟೆಗೆ ಕಂಬಳೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಇದರ ಶ್ರೀ ಗುರುದೇವಾನಂದ ಸ್ವಾಮೀಜಿ ಕಂಬಳೋತ್ಸವ ಉದ್ಘಾಟಿಸಲಿದ್ದು, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ದೀಪ ಪ್ರಜ್ವಲನೆ ಮಾಡುವರು. ನರಿಂಗಾನ ಗ್ರಾ ಪಂ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸುವರು. ಶ್ರೀಕ್ಷೇತ್ರ ಶಾಂತಿಪಳಿಕೆ ಪ್ರಧಾನ ತಂತ್ರಿ ವೇದಮೂರ್ತಿ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯರು, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ರೆ ಫಾ ಡಾ ಪೀಟರ್ ಪಾವುಲ್ ಸಲ್ದಾನಾ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಭಾರಿ, ಮಂಗಳೂರು ವಿವಿ ಕುಲಪತಿ ಪ್ರೊ ಪಿ ಎಲ್ ಧರ್ಮ, ಧಾರವಾಡ ವಿವಿ ಕುಲಪವಿ ಪ್ರೊ ಎ ಎಂ ಖಾನ್ ಮೊದಲಾದ ಗಣ್ಯರು ಗೌರವ ಉಪಸ್ಥಿತರಿರುವರು ಎಂದರು.
ಸಂಜೆ 4.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಡಾ ಯು ಟಿ ಖಾದರ್ ಫರೀದ್ ಅಧ್ಯಕ್ಷತೆ ವಹಿಸುವರು. ಸಚಿವರಾದ ದಿನೇಶ್ ಗುಂಡೂರಾವ್, ಎಚ್ ಕೆ ಪಾಟೀಲ್, ಸಂತೋಷ್ ಲಾಡ್, ಝಮೀರ್ ಅಹ್ಮದ್ ಖಾನ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜಮೋಹನ್ ಉಣ್ಣಿತ್ತಾನ್, ಮಾಜಿ ಸಚಿವ ಬಿ ರಮಾನಾಥ ರೈ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್, ಡಾ ಯು ಟಿ ಇಫ್ತಿಕಾರ್ ಅಲಿ ಫರೀದ್, ಶಾಸಕರಾದ ಡಾ ಮಂಜುನಾಥ ಭಂಡಾರಿ, ಅಶೋಕ್ ಕುಮಾರ್ ರೈ, ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ಯು ರಾಜೇಶ್ ನಾಯಕ್, ಉಮಾನಾಥ ಕೋಟ್ಯಾನ್, ಭಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಐವನ್ ಡಿ ಸೋಜ, ಎಕೆಎಂ ಅಶ್ರಫ್ ಮಂಜೇಶ್ವರ, ಕಿಶೋರ್ ಕುಮಾರ್ ಬೊಟ್ಯಾಡಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇದೇ ವೇಳೆ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಐಕಳ ಬಾವ, ಝಕರಿಯಾ ಜೋಕಟ್ಟೆ, ಸಹಕಾರ ರತ್ನ ಟಿ.ಜಿ. ರಾಜಾರಾಮ ಭಟ್, ಸಹಕಾರ ರತ್ನ ಭಾಸ್ಕರ ಎಸ್. ಕೋಟ್ಯಾನ್, ಸಹಕಾರ ರತ್ನ ಬಾರ್ಕೂರು ಶಾಂತರಾಮ ಶೆಟ್ಟಿ, ಧನಲಕ್ಷ್ಮಿ ಪೂಜಾರಿ ಕಾರ್ಕಳ, ಕರ್ನಾಟಕ ಕ್ರೀಡಾ ರತ್ನ ಭಾಸ್ಕರ ದೇವಾಡಿಗ, ಗಣೇಶ ಪಂಬದ ಚಿಪ್ಪಾರು ಅವರನ್ನು ಸನ್ಮಾನಿಸಲಾಗುವುದು ಎಂದ ಅವರು, ಕಂಬಳೋತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ, ಚಲನಚಿತ್ರ ನಟರಾದ ರೂಪೇಶ್ ಶೆಟ್ಟಿ, ಅರವಿಂದ ಬೋಳಾರ, ಪ್ರದೀಪ್ ಆಳ್ವ ಕದ್ರಿ, ದೇವದಾಸ ಕಾಪಿಕಾಡು, ಮಂಜು ಎಂ ರೈ, ಭೋಜರಾಜ ವಾಮಂಜೂರು ಅವರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಇದೇ ವೇಳೆ ಮಾತನಾಡಿದ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಕಂಬಳ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲ್ಲಾ ಕಡೆ ವಿಜೇತ ಕೋಣಗಳ ಮಾಲಕರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಮಾತ್ರ ನಿಗದಿಯಾಗುತ್ತಿದ್ದರೆ, ನರಿಂಗಾನ ಕಂಬಳೋತ್ಸವದಲ್ಲಿ ತೃತೀಯ ಹಾಗೂ ಚತುರ್ಥ ಸ್ಥಾನಕ್ಕೂ ಪದಕ ನೀಡಿ ಪೆÇ್ರೀತ್ಸಾಹಿಸಲಾಗುವುದು. ಅಲ್ಲದೆ ಬಹುಮಾನದ ಚಿನ್ನದಲ್ಲೂ ಹೆಚ್ಚಳ ಮಾಡಲಾಗಿದೆ ಎಂದರು.
ರಾಜ್ಯ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಫರೀದ್ ಅವರ ಅಧ್ಯಕ್ಷತೆಯ ನರಿಂಗಾನ ಕಂಬಳ ಸಮಿತಿಯ ಆಶ್ರಯದಲ್ಲಿ ನಡೆಯುತ್ತಾ ಬರುತ್ತಿರುವ ಈ ಕಂಬಳೋತ್ಸವದಲ್ಲಿ ಯಾವುದೇ ಪ್ರೋತ್ಸಾಹಕ ಕ್ರಮಗಳು ಕಡಿಮೆಯಾಗಬಾರದು ಎಂಬ ಅವರ ಸೂಚನೆ ಮೇರೆಗೆ ಈ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಸ್ಪೀಕರ್ ಅವರ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದ್ದು, ಕಂಬೋಳತ್ಸವದ ಯಶಸ್ಸಿಗೆ ಕಂಬಳ ಸಮಿತಿಯ ಎಲ್ಲ ಸದಸ್ಯರುಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದರು.
ಈ ಸಂದರ್ಭ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಝ್ ನರಿಂಗಾನ, ಕಂಬಳ ಸಮಿತಿ ಉಪಾಧ್ಯಕ್ಷ ಮ್ಯಾಕ್ಸಿಂ ಡಿಸೋಜ ಜೊತೆಗಿದ್ದರು.



















0 comments:
Post a Comment