ಬಂಟ್ವಾಳ, ಫೆಬ್ರವರಿ 19, 2026 (ಕರಾವಳಿ ಟೈಮ್ಸ್) : ನರೇಗಾ ಯೋಜನೆ ಹಲವು ಬಾರಿ ಹೆಸರು ಪರಿವರ್ತನೆ ಆಗಿದೆ. ನರೇಗಾದಲ್ಲಿರುವ ಕುಂದುಕೊರತೆ ನಿವಾರಿಸಿ ಯೋಜನೆ ಪರಿಷ್ಕರಿಸಲಾಗಿದೆ. 100 ದಿನ ಇದ್ದ ಉದ್ಯೋಗ 125 ದಿನ ಆಗಿರುವುದು ಲಾಭವಾ ನಷ್ಟವಾ ಎಂದು ಜನರು ತಿಳಿದುಕೊಳ್ಳಬೇಕು ಎಂದು ಬಂಟ್ವಾಳ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಂಟ್ವಾಳ ಮಂಡಲದ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಲು ಹಾಗೂ ಕೇಂದ್ರ ಸರಕಾರದ ಹೊಸ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಿ ಸಿ ರೋಡಿನಲ್ಲಿ ಫೆ 18 ರಂದು ಹಮ್ಮಿಕೊಂಡ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಜೊತೆಗೆ ಭ್ರಷ್ಟಾಚಾರವನ್ನು ಕಡಿಮೆ ಮಾಡುವುದೇ ಕೇಂದ್ರ ಸರಕಾರದ ಗುರಿಯಾಗಿದೆ. ರಾಜ್ಯಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದಿಯೇ ಹೊರತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಜನಪರವಾದ ಯೋಜನೆಗಳಿಗೆ ಸಹಕಾರವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರಲ್ಲಿನ ಬಹುತೇಕ ಗ್ರಾ ಪಂ ಗಳಲ್ಲಿ ಜಿ ರಾಮ್ ಜಿ ಕಾಯ್ದೆಯೇ ಬೇಕು ಎಂದು ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿದ್ದಾರೆ ಇದು ಅತ್ಯಂತ ಸಂತಸದ ವಿಚಾರ ಎಂದ ಅವರು, ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮ ಪಂಚಾಯತಿಗಳಿಗೆ ತೆರಳಿ ಹೊಸ ಕಾಯ್ದೆಯ ಮೂಲಕ ಗ್ರಾಮೀಣ ಬಡಜನರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಹತಾಶೆ ಭಾವನೆಯಿಂದ ಕಾಂಗ್ರೆಸ್ ಪಕ್ಷ ಜಿ ರಾಮ್ ಜಿ ಯನ್ನು ವಿರೋಧ ಮಾಡುತ್ತಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಯಾಗುತ್ತಿದ್ದು, ಕುರ್ಚಿಯನ್ನು ಉಳಿಸಿಕೊಳ್ಳಲು ಅಭಿಯಾನವೇ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ನೆಪದಲ್ಲಿ ಜನರನ್ನು ಮೋಸ ಮಾಡಿದ್ದಾರೆ.ಸರಕಾರ ಭ್ರಷ್ಟಾಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದೆ. ಗ್ರಾಮೀಣ ಜನರ ಬಗ್ಗೆ ಮೋದಿಗಿರುವ ನಂಬಿಕೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಿದ ಕಾಂಗ್ರೆಸ್ ಗಾಂಧಿಯವರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದೆ ಎಂದರು.
ಕೈಕಂಬ ಪೆÇಳಲಿ ದ್ವಾರದಿಂದ ಬಿ ಸಿ ರೋಡುವರೆಗೆ ಬೃಹತ್ ಪಾದಯಾತ್ರೆ ನಡೆಯಿತು. ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪಕ್ಷದ ಪ್ರಮುಖರಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ದಿನೇಶ್ ಅಮ್ಟೂರು, ಮಾದವ ಮಾವೆ, ಸುಲೋಚನ ಜಿ ಕೆ ಭಟ್, ಸಂದೇಶ್ ಶೆಟ್ಟಿ, ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಡೊಂಬಯ್ಯ ಅರಳ, ರಾಮದಾಸ ಬಂಟ್ವಾಳ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಕಮಲಾಕ್ಷಿ ಪೂಜಾರಿ, ದಿನೇಶ್ ಶೆಟ್ಟಿ ದಂಬೆ, ದಿನೇಶ್ ಭಂಡಾರಿ ಮೊದಲಾದವರು ಪಾದಯಾತ್ರೆ ನೇತೃತ್ವ ವಹಿಸಿದ್ದರು.














0 comments:
Post a Comment