ಕೈಕುಂಜೆ : ಮನೆಯಲ್ಲಿ ಬೆಂಕಿ ಅವಘಡ, ಮನೆ ಯಜಮಾನಗೆ ಗಾಯ, ಸೊತ್ತುಗಳು ಸಂಪೂರ್ಣ ಸುಟ್ಟು ಭಸ್ಮ - Karavali Times ಕೈಕುಂಜೆ : ಮನೆಯಲ್ಲಿ ಬೆಂಕಿ ಅವಘಡ, ಮನೆ ಯಜಮಾನಗೆ ಗಾಯ, ಸೊತ್ತುಗಳು ಸಂಪೂರ್ಣ ಸುಟ್ಟು ಭಸ್ಮ - Karavali Times

728x90

2 February 2026

ಕೈಕುಂಜೆ : ಮನೆಯಲ್ಲಿ ಬೆಂಕಿ ಅವಘಡ, ಮನೆ ಯಜಮಾನಗೆ ಗಾಯ, ಸೊತ್ತುಗಳು ಸಂಪೂರ್ಣ ಸುಟ್ಟು ಭಸ್ಮ

ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಸಮೀಪದ ಕೈಕುಂಜೆ-ಬಳಕ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಮನೆ ಯಜಮಾನ ಗಾಯಗೊಂಡಿರುವುದಲ್ಲದೆ ಮನೆಯ ಸೊತ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. 

ಇಲ್ಲಿನ ನಿವಾಸಿ ಚಾರ್ಲಿ ಡಿಸೋಜಾ ಎಂಬವರ ಮಾಲಕತ್ವದ ಮನೆಯಲ್ಲಿ ವಿಜಯ ಹಾಗೂ ಪುಷ್ಪಾ ದಂಪತಿಗಳು ಮಕ್ಕಳೊಂದಿಗೆ ವಾಸವಾಗಿದ್ದರು. ಮನೆಯಲ್ಲಿ ಸೋಮವಾರ ಬೆಳಿಗ್ಗೆ 9.30 ರ ವೇಳೆಗೆ ಈ ಬೆಂಕಿ ಅವಘಡ ಸಂಭವಿಸಿದೆ. ಅವಘಡದ ಸಂದರ್ಭ ಮನೆಯಲ್ಲಿ ಯಜಮಾನ ವಿಜಯ್ ಹಾಗೂ ಅವರ ಮಗಳು ಮಾತ್ರ ಇದ್ದರು. ವಿಜಯ್ ಅವರ ಮಗಳು ಮನೆಯಲ್ಲೇ ಟೈಲರಿಂಗ್ ವೃತ್ತಿ ನಡೆಸುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಬರೆಗಳು ಮನೆಯಲ್ಲಿದ್ದವು ಎನ್ನಲಾಗಿದೆ. ಎಲ್ಲವೂ ಬೆಂಕಿಯ ಕೆನ್ನಾಲೆಗೆ ತುತ್ತಾಗಿದ್ದು, ಜೊತೆಗೆ ಗೃಹೋಪಯೋಗಿ ವಸ್ತುಗಳೂ ಕೂಡಾ ಸುಟ್ಟು ಬೂದಿಯಾಗಿದೆ. ಮನೆಯ ಯಜಮಾನ ವಿಜಯ್ ಅವರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಗ್ನಿ ಅವಘಡ ಸಂಭವಿಸಿದ ಮನೆಗೆ ತಕ್ಷಣ ಸಂಪರ್ಕಿಸಲು ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ ಅಗ್ನಿಶಾಮಕ ವಾಹನ ಸಕಾಲದಲ್ಲಿ ತಲುಪಲಾಗದೆ ಬೆಂಕಿ ನಂದಿಸಲು ಸಮಸ್ಯೆಯಾಗಿದೆ ಎಂದು ಸ್ಥಳೀಯ ಅಭಿಪ್ರಾಯಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ವಿಜಯ ಮತ್ತು ಪುಷ್ಪಾ ದಂಪತಿ ಮೂರು ಮಂದಿ ಹೆಣ್ಣು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು, ಮಗಳ ಟೈಲರಿಂಗ್ ವೃತ್ತಿಯೇ ಕುಟುಂಬದ ಜೀವನಕ್ಕೆ ಆಧಾರ ಸ್ಥಂಭವಾಗಿತ್ತು. ಆಕಸ್ಮಿಕ ಬೆಂಕಿ ಅವಘಡದಿಂದ ಎಲ್ಲವೂ ಬೆಂಕಿ ಪಾಲಾಗಿದ್ದು, ಕುಟುಂಬ ಸಂಪೂರ್ಣ ಕಂಗಾಲಾಗಿದೆ. ಅನಾರೋಗ್ಯಪೀಡಿತ ಕುಟುಂಬದ ಯಜಮಾನ ವಿಜಯ ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಕುಟುಂಬ ಅತಂತ್ರವಾಗಿದೆ. ಕುಟುಂಬದ ಪುನರ್ವಸತಿ, ಚಿಕಿತ್ಸಾ ವೆಚ್ಚ ಹಾಗೂ ಜೀವನೋಪಾಯ ಪುನರ್ ಸ್ಥಾಪನೆಗಾಗಿ ಮಾನವೀಯ ನೆಲೆಯಲ್ಲಿ ಸಹೃದಯಿಗಳು ಸಹಾಯ-ಸಹಕಾರ ನೀಡುವಂತೆ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಸಾರ್ವಜನಿಕರಲ್ಲಿ ವಿನಂತಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೈಕುಂಜೆ : ಮನೆಯಲ್ಲಿ ಬೆಂಕಿ ಅವಘಡ, ಮನೆ ಯಜಮಾನಗೆ ಗಾಯ, ಸೊತ್ತುಗಳು ಸಂಪೂರ್ಣ ಸುಟ್ಟು ಭಸ್ಮ Rating: 5 Reviewed By: karavali Times
Scroll to Top