ಬಂಟ್ವಾಳ, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ಮನೆ ಮಂದಿ ಜಾತ್ರೋತ್ಸವಕ್ಕೆ ಹೋಗಿ ಬರುವಷ್ಟರಲ್ಲಿ ಒಳನುಗ್ಗಿದ ಕಳ್ಳರು ಮನೆ ಜಾಲಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಳವುಗೈದ ಘಟನೆ ಬಾಳ್ತಿಲ ಗ್ರಾಮದ ಕಾಂಪ್ರಬೈಲು ಎಂಬಲ್ಲಿ ಫೆಬ್ರವರಿ 4 ರಂದು ರಾತ್ರಿ ವೇಳೆ ಸಂಭವಿಸಿದೆ.
ಇಲ್ಲಿನ ಶ್ರೀ ಲಕ್ಷ್ಮೀ ನಿಲಯ ನಿವಾಸಿ ಸತೀಶ್ ಶೆಣೈ ಅವರು ಪತ್ನಿ ಕಸ್ತೂರಿ ಹಾಗೂ ಮಗ ಸಂದೀಪ್ ಶೆಣೈ ಜೊತೆ ವಾಸವಾಗಿದ್ದು, ಕೃಷಿಕರಾಗಿದ್ದಾರೆ. ಫೆ 4 ರಂದು ಸಂಜೆ 6.45ರ ವೇಳೆಗೆ ಇವರು ಮನೆಗೆ ಬೀಗ ಹಾಕಿ ಪತ್ನಿ ಹಾಗೂ ಮಗನೊಂದಿಗೆ ಕಶೇಕೋಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಜಾತ್ರೋತ್ಸವಕ್ಕೆ ತೆರಳಿದ್ದವರು ಉತ್ಸವ ಮುಗಿಸಿ ರಾತ್ರಿ 10.30ರ ವೇಳೆಗೆ ವಾಪಾಸು ಬರುವಷ್ಟರಲ್ಲಿ ಮನೆಯಲ್ಲಿ ಕಳವು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಹಿಂಬದಿಯ ಬಾಗಿಲು ತೆರೆದು ಒಳಪ್ರವೇಶಿಸಿದ ಕಳ್ಳರು ಕೋಣೆಯಲ್ಲಿದ್ದ ಕಪಾಟನ್ನು ಯಾವುದೋ ಸಾಧನದಿಂದ ಮೀಟಿ ತೆರೆದು ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಕಪಾಟಿನ ಲಾಕರಿನಲ್ಲಿಟ್ಟಿದ್ದ ಸ್ಟೀಲ್ ಡಬ್ಬಿಗಳಲ್ಲಿಡಲಾಗಿದ್ದ ಸುಮಾರು 5 ಪವನ್ ತೂಕದ ಹವಳದ ಮಾಲೆ, ಸುಮಾರು ಎರಡೂವರೆ ಪವನ್ ತೂಕದ ಮುತ್ತಿನ ಸರ, ಸುಮಾರು ಒಂದೂವರೆ ಪವನ್ ತೂಕದ 1 ಜೊತೆ ಬೆಂಡೋಲೆ ಮತ್ತು ಜುಂಕಿ ಹಾಗೂ ಪ್ಲಾಸ್ಟಿಕ್ ತೊಟ್ಟೆಯಲ್ಲಿದ್ದ 5 ಸಾವಿರ ರೂಪಾಯಿ ನಗದು ಹಣ ಕಳವುಗೈಯಲಾಗಿದೆ. ಕಳವಾಗಿರುವ ಒಟ್ಟು ಸುಮಾರು 9 ಪವನ್ ಚಿನ್ನದ ಮೌಲ್ಯ 8 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸತೀಶ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment