ಬಂಟ್ವಾಳ, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : “ಇಂದು ನಾವೇ ಬದಲಾವಣೆ ಆರಂಭಿಸೋಣ, ಪ್ಲಾಸ್ಟಿಕ್ ತ್ಯಜಿಸೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಬಿ ಸಿ ರೋಡು ಸಮೀಪದ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದ ಅಭಿಯಾನ ಕೈಗೊಂಡಿದ್ದಾರೆ.
ಕಾರ್ಮೆಲ್ ಪ್ರೌಢಶಾಲೆಯ ಹಸಿರು ಭವಿಷ್ಯ ಪರಿಸರ ಸಂಘ ಆಯೋಜಿಸಿದ “ಇಂದು ನಾವೇ ಬದಲಾವಣೆ ಆರಂಭಿಸೋಣ, ಪ್ಲಾಸ್ಟಿಕ್ ತ್ಯಜಿಸೋಣ” ಜಾಗೃತಿ ಅಭಿಯಾನ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ರೊನಾಲ್ಡ್ ಡಿಸೋಜ ಮಾತನಾಡಿ, ಬದಲಾವಣೆ ಎಂದರೆ ದೊಡ್ಡ ಕೆಲಸವಲ್ಲ. ಅದು ನಮ್ಮ ಮನೆಯಿಂದ, ನಮ್ಮ ಕೈಗಳಿಂದ ಆರಂಭವಾಗಬೇಕು. ಇಂದು ನಾವು ತೀರ್ಮಾನ ಮಾಡಿದರೆ ಪ್ಲಾಸ್ಟಿಕ್ ಚೀಲಕ್ಕೆ “ಇಲ್ಲ” ಎಂದು ಹೇಳಿದರೆ, ಪೇಪರ್ ಅಥವಾ ಬಟ್ಟೆ ಚೀಲ ಬಳಸಿದರೆ, ಅದೇ ದೊಡ್ಡ ಕ್ರಾಂತಿಯ ಮೊದಲ ಹೆಜ್ಜೆಯಾಗುತ್ತದೆ. ನಾವು ನಮ್ಮ ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ತುಂಬಿದ ಭೂಮಿಯನ್ನಲ್ಲ, ಹಸಿರು, ಸ್ವಚ್ಛ ಮತ್ತು ಸುರಕ್ಷಿತ ಭೂಮಿಯನ್ನು ಕೊಡಬೇಕು. ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ನಮ್ಮ ಬದುಕಿಗೆ ಸುಲಭವಾಗಿದ್ದರೂ, ಅದೇ ಪ್ಲಾಸ್ಟಿಕ್ ನಮ್ಮ ಭೂಮಿಗೆ ಅತಿದೊಡ್ಡ ಅಪಾಯವಾಗಿ ಪರಿಣಮಿಸಿದೆ. ಒಂದು ಪ್ಲಾಸ್ಟಿಕ್ ಚೀಲ ಕರಗಲು ನೂರಾರು ವರ್ಷಗಳು ಬೇಕಾಗುತ್ತದೆ. ಆದರೆ ಅದನ್ನು ನಾವು ಬಳಸುವುದು ಕೇವಲ ಕೆಲವೇ ನಿಮಿಷಗಳು. ಪ್ಲಾಸ್ಟಿಕ್ ಮಣ್ಣು, ನೀರು ಮತ್ತು ಗಾಳಿಯನ್ನು ಮಾಲಿನ್ಯಗೊಳಿಸುತ್ತದೆ. ಅನೇಕ ಪ್ರಾಣಿಗಳು ಪ್ಲಾಸ್ಟಿಕ್ ತಿಂದು ತಮ್ಮ ಜೀವ ಕಳೆದುಕೊಳ್ಳುತ್ತಿವೆ. ಇದು ನಮ್ಮ ಆರೋಗ್ಯಕ್ಕೂ ಭಾರಿ ಅಪಾಯವನ್ನು ಉಂಟುಮಾಡುತ್ತಿದೆ. ಇಂತಹ ಸಂದರ್ಭದಲ್ಲಿ, ಪೇಪರ್ ಬ್ಯಾಗುಗಳು ಉತ್ತಮ ಪರ್ಯಾಯವಾಗಿವೆ. ಪೇಪರ್ ಬ್ಯಾಗುಗಳು ಪರಿಸರ ಸ್ನೇಹಿಯಾಗಿವೆ, ಜೈವಿಕವಾಗಿ ಕರಗುತ್ತವೆ, ಮರುಬಳಕೆ ಮಾಡಬಹುದು ಮತ್ತು ನಮ್ಮ ಭೂಮಿಯನ್ನು ರಕ್ಷಿಸಲು ಸಹಾಯ ಮಾಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಭಗಿನಿ ಫೆಲ್ಸಿಟ, ಮುಖ್ಯ ಶಿಕ್ಷಕಿ ಭಗಿನಿ ವೀರ, ವಿಜ್ಞಾನ ಶಿಕ್ಷಕ ರೋಶನ್ ಪಿಂಟೊ ಭಾಗವಹಿಸಿದ್ದರು. ಅಧಿತಿ ರಾವ್ ಸ್ವಾಗತಿಸಿ, ಶಮಂತ್ ವಂದಿಸಿದರು. ರೋಯ್ ಸ್ಟನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ಮಾರ್ಗದರ್ಶಿ ಶಿಕ್ಷಕ ರೋಶನ್ ಪಿಂಟೋ ಅವರು, ದಿನಪತ್ರಿಕೆಗಳನ್ನು ಬಳಸಿ ಯಾವುದೇ ಅಂಟು ಪದಾರ್ಥ ಬಳಸದೆ ಅತ್ಯಂತ ಸುಲಭವಾಗಿ ಕಾಗದ ಚೀಲಗಳನ್ನು ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಮನೆ, ನೆರೆಹೊರೆಯವರಲ್ಲಿ ಉಪಯೋಗಿಸಿದ ದಿನಪತ್ರಿಕೆಗಳನ್ನು ಪಡೆದು ರಜಾ ಅವಧಿಗಳಲ್ಲಿ ಕಾಗದ ಚೀಲಗಳನ್ನು ತಯಾರಿಸಿದ್ದಾರೆ. ಪ್ರತಿ ಕಾಗದ ಚೀಲ 1 ಕೆಜಿ ಸಾಮರ್ಥ್ಯ ಹೊಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಅತ್ಯಧಿಕ ಕಾಗದ ಚೀಲ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ತಯಾರಿಸಿದ 4,894 ಕಾಗದ ಚೀಲಗಳನ್ನು ಸ್ಥಳೀಯ ವ್ಯಾಪಾರಸ್ಥರಿಗೆ ಉಚಿತವಾಗಿ ನೀಡುವುದರ ಮೂಲಕ ಪ್ಲಾಸ್ಟಿಕ್ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಿದರು. “ಪರಿಸರ ಸ್ನೇಹಿ ಜೀವನ ಶೈಲಿ ನಮ್ಮ ಕೈಯಲ್ಲೇ ಇದೆ” ಎಂಬ ಸಂದೇಶ ಸಾರಿದರು.

















0 comments:
Post a Comment