ಮಂಗಳೂರು, ಫೆಬ್ರವರಿ 07, 2026 (ಕರಾವಳಿ ಟೈಮ್ಸ್) : ಬಜ್ಪೆ ಠಾಣಾ ವ್ಯಾಪ್ತಿಯ ಕೆಂಜಾರು-ಜೋಕಟ್ಟೆ ಮನೆ ಕಳವು ಪ್ರಕರಣ ಬೇಧಿಸಿರುವ ಪೊಲೀಸರು ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ ಸಹಿತ ಇಬ್ಬರನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಲತಃ ಬಾಳ ಗ್ರಾಮದ ಕಳವಾರು ಚರ್ಚ್ ಬಳಿ ನಿವಾಸಿ, ಪ್ರಸ್ತುತ ಬಜ್ಪೆ ಗ್ರಾಮದ ಜರಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಯೂಸುಫ್ ಎಂಬವರ ಪುತ್ರ ಅಬ್ದುಲ್ ನಾಸರ್ ಅಲಿಯಾಸ್ ನಾಸಿರ್ ಅಲಿಯಾಸ್ ನಾಚಿ (31) ಹಾಗೂ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಎಂದು ಹೆಸರಿಸಲಾಗಿದೆ.
ಕಳೆದ ಸೆಪ್ಟೆಂಬರ್ 23 ರಂದು ಬಜಪೆ ಪೆÇಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆ ನಿವಾಸಿ ಮೊಹಮ್ಮದ್ ಶರೀಫ್ ಎಂಬವರು ತನ್ನ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋದಾಗ ರಾತ್ರಿ ಮನೆಯಲ್ಲಿದ್ದ ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1.25 ಲಕ್ಷ ರೂಪಾಯಿ ನಗದು ಹಣ ಕಳ್ಳತನವಾಗಿದ್ದು, ಈ ಬಗ್ಗೆ ಬಜಪೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಅಬ್ದುಲ್ ನಾಸರ್ ಅಲಿಯಾಸ್ ನಾಸಿರ್ ಅಲಿಯಾಸ್ ನಾಚಿ ಎಂಬಾತನು ಕಳ್ಳತನ ಮಾಡಿ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಎಲ್ ಒ ಸಿ ಹೊರಡಿಸಲಾಗಿರುತ್ತದೆ. ಅಬ್ದುಲ್ ನಾಸೀರ್ ಅಲಿಯಾಸ್ ನಾಚಿ ಎಂಬಾತನನ್ನು ಎಲ್ ಒ ಸಿಯಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಪ್ರಕರಣದ ಮನೆ ಮಾಲಿಕ ಮೊಹಮ್ಮದ್ ಷರೀಫ್ ಅವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆರೋಪಿತರಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20 ಸಾವಿರ ರೂಪಾಯಿ ನಗದು ಹಣ, ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಸ್ಕೂಟರ್ ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.















0 comments:
Post a Comment