ಬಂಟ್ವಾಳ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತಿ ನೌಕರರು, ಸಾಧಕರಿಗೆ ಅಭಿನಂದನಾ ಸಮಾರಂಭ
ಬಂಟ್ವಾಳ, ಫೆಬ್ರವರಿ 03, 2026 (ಕರಾವಳಿ ಟೈಮ್ಸ್) : ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ 4 ಮಂದಿಯ ಕರ್ತವ್ಯವನ್ನು ಒಬ್ಬನೇ ನಿರ್ವಹಿಸಬೇಕಾದ ಅನಿವಾರ್ಯತೆ ಇದ್ದು, ಇದರಿಂದಾಗಿ ಸರಕಾರಿ ನೌಕರರು ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಬಿ ಸಿ ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ 1 ರಂದು ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯ 2023-24 ಮತ್ತು 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಸರಕಾರಿ ನೌಕರರ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ ಎಂದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಅವರು ಮಾತನಾಡಿ, ಸಂಘಟನಾ ಶಕ್ತಿ ಇಲ್ಲದೇ ಜಯಗಳಿಸಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ ರಾಜ್ಯಕ್ಕೆ ಮಾದರಿಯಾಗುವಂತಹ ಸಂಘಟನೆಗೆ ಉಮನಾಥ ರೈ ಅವರು ಮೇಲ್ಪಂಕ್ತಿ ಹಾಕಿದ್ದು, ಅದೇ ದಾರಿಯಲ್ಲಿ ಸಂಘಟನೆಯನ್ನು ಮುನ್ನಡೆಸುವುದಾಗಿ ತಿಳಿಸಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸರಕಾರಿ ನೌಕರರ ಮಕ್ಕಳನ್ನು ಅಭಿನಂದಿಸಲಾಯಿತು. ಪ್ರಶಸ್ತಿ ಪುರಸ್ಕೃತ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸರಕಾರಿ ನೌಕರರನ್ನು ಅಭಿನಂದಿಸಲಾಯಿತು. ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸರಕಾರಿ ನೌಕರರನ್ನು ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಉಮಾನಾಥ ರೈ ಮೇರಾವು ಅವರನ್ನು ಸನ್ಮಾನಿಸಲಾಯಿತು.
ಪಿಂಚಣಿದಾರರ ಸಂಘದ ಅಧ್ಯಕ್ಷ ಪಿ ಲೋಕನಾಥ ಶೆಟ್ಟಿ, ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶಶಿಕಲಾ, ಸಂಘದ ಗೌರವಾಧ್ಯಕ್ಷ ಶಮಂತ್ ಕುಮಾರ್, ಹಿರಿಯ ಉಪಾಧ್ಯಕ್ಷ ನಂದನ್ ಶೆಣೈ, ಉಪಾಧ್ಯಕ್ಷ ಸೀತಾರಾಮ ಪೂಜಾರಿ, ನಿವೃತ್ತ ಉಪನ್ಯಾಸಕ ಅಂಬಾಪ್ರಸಾದ್, ಜನಾರ್ಧನ್, ನವೀನ್ ಪಿ ಎಸ್ ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿ, ಖಜಾಂಚಿ ಬಸಯ್ಯ ಅಲಿಮಟ್ಟಿ ವಂದಿಸಿದರು. ಶಿಕ್ಷಕರಾದ ಜಯರಾಂ ಕಾರ್ಯಕ್ರಮ ನಿರೂಪಿಸಿದರು.































0 comments:
Post a Comment