ಕೇರಳದಲ್ಲಿ ಈ ಬಾರಿ ಯುಡಿಎಫ್ ಸರಕಾರ ನಿಶ್ಚಿತ, ಮಂಜೇಶ್ವರದಲ್ಲಿ ಎಕೆಎಂ ಅಶ್ರಫ್ ಅವರನ್ನು ಚುನಾಯಿಸಿ ಆಡಳಿತ ಪಕ್ಷದ ಶಾಸಕರನ್ನು ಕಳಿಸಲು ಅಬ್ಬಾಸ್ ಅಲಿ ಮನವಿ - Karavali Times ಕೇರಳದಲ್ಲಿ ಈ ಬಾರಿ ಯುಡಿಎಫ್ ಸರಕಾರ ನಿಶ್ಚಿತ, ಮಂಜೇಶ್ವರದಲ್ಲಿ ಎಕೆಎಂ ಅಶ್ರಫ್ ಅವರನ್ನು ಚುನಾಯಿಸಿ ಆಡಳಿತ ಪಕ್ಷದ ಶಾಸಕರನ್ನು ಕಳಿಸಲು ಅಬ್ಬಾಸ್ ಅಲಿ ಮನವಿ - Karavali Times

728x90

31 March 2026

ಕೇರಳದಲ್ಲಿ ಈ ಬಾರಿ ಯುಡಿಎಫ್ ಸರಕಾರ ನಿಶ್ಚಿತ, ಮಂಜೇಶ್ವರದಲ್ಲಿ ಎಕೆಎಂ ಅಶ್ರಫ್ ಅವರನ್ನು ಚುನಾಯಿಸಿ ಆಡಳಿತ ಪಕ್ಷದ ಶಾಸಕರನ್ನು ಕಳಿಸಲು ಅಬ್ಬಾಸ್ ಅಲಿ ಮನವಿ

 ಬಂಟ್ವಾಳ, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ಕೇರಳ ರಾಜ್ಯದಲ್ಲಿ ಈ ಬಾರಿ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸ್ಪಷ್ಟ ವಾತಾವರಣ ಕಂಡು ಬಂದಿದ್ದು, ಈ ಹಂತದಲ್ಲಿ ಮಂಜೇಶ್ವರದ ಜನ ಆಡಳಿತ ಪಕ್ಷದ ಶಾಸಕರನ್ನು ಆಯ್ಕೆಮಾಡಿ ಕಳಿಸಬೇಕಾದ ಜಬಾಬ್ದಾರಿಯಿಂದ ಮತ ಚಲಾಯಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮನವಿ ಮಾಡಿದರು. 

ಕ್ಷೇತ್ರದ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿ ಎ ಕೆ ಎಂ ಅಶ್ರಫ್ ಅವರ ಪರವಾಗಿ ಬಂಟ್ವಾಳ ತಾಲೂಕಿನ ಗಡಿ ಪ್ರದೇಶಗಳಾಗಿರುವ ಪಾತೂರು, ಬಾಕ್ರಬೈಲು, ತಲೆಕ್ಕಿ ಮೊದಲಾದ ಪರಿಸರಗಳಲ್ಲಿ ಮತಯಾಚಿಸಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿ ಕೂರುವ ಶಾಸಕ ನಮಗೆ ಬೇಕಾಗಿಲ್ಲ ಎಂಬುದನ್ನು ಮಂಜೇಶ್ವರ ಪ್ರಬುದ್ದ ಜನ ನಿರ್ಣಯಿಸಬೇಕಾಗಿದೆ ಎಂದರು. 

ಜಿ ಪಂ ಸದಸ್ಯ ಹರ್ಷದ್ ವರ್ಕಾಡಿ ಮಾತನಾಡಿ, ಕ್ಷೇತ್ರದಲ್ಲಿ ಸುಸಜ್ಜಿತ ಕ್ರೀಡಾಂಗಣ ಸಹಿತ ಬೀದಿ ಬೀದಿಗಳನ್ನು ಬೆಳಗಿಸುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿರುವ ಅಶ್ರಫ್ ಅವರನ್ನು ಈ ಬಾರಿಯೂ ಜನ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದರು. 

ಮಂಜೇಶ್ವರದಲ್ಲಿ ಜಿಲ್ಲಾ ಪಂಚಾಯತ್ ಸಹಿತ ಎಲ್ಲ ಸ್ಥಳೀಯಾಡಳಿತಗಳು ಯುಡಿಎಫ್ ಕೈಯಲ್ಲಿದೆ. ಮಂಜೇಶ್ವರ ಗಡಿ ಪ್ರದೇಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಜನರ ಜೀವನ ಸಮೃದ್ಧಗೊಳಿಸಿದೆ. ಕೇರಳದಲ್ಲೂ ಯುಡಿಎಫ್ ಮೈತ್ರಿಕೂಟ ಈಗಾಗಲೇ 5 ಇಂದಿರಾ ಗ್ಯಾರಂಟಿ ಯೋಜನೆಗಳ ಪ್ರಕಟಣೆಯ ಮೂಲಕ ಜನಪರ ಯೋಜನೆಗಳನ್ನು ಘೋಷಿಸಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕ್ಷೇಮ ಪಿಂಚಣಿ, ಆರೋಗ್ಯ ವಿಮೆ, ವಿದ್ಯಾರ್ಥಿನಿಯರಿಗೆ ಮಾಸಿಕ ವೇತನ, ಯುವಕರಿಗೆ ಸ್ವ ಉದ್ಯೋಗಕ್ಕಾಗಿ ಐದು ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ, ಮೆಡಿಕಲ್ ಕಾಲೇಜು ಸ್ಥಾಪನೆ, ಇಪ್ಪತ್ತೈದು ಲಕ್ಷದವರೆಗೆ ಆರೋಗ್ಯ ಇನ್ಸೂರೆನ್ಸ್ ಯೋಜನೆ ಮೊದಲಾದ ಯೋಜನೆಗಳನ್ನು ಈಗಾಗಲೇ ಘೋಷಿಸಿದೆ. ಇದರಿಂದ ಯುಡಿಎಎಫ್ ಸರಕಾರ ಬಂದರೆ ಜನರ ಜೀವನ ಸಮೃದ್ದ ಎಂದರು. 

ದ ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಸ್ಮಾ ಅವರು ಮಾತನಾಡಿ, ಮಂಜೇಶ್ವರ ಶಾಸಕರಾಗಿರುವ ಎ ಕೆ ಎಂ ಅಶ್ರಫ್ ಅವರು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರ ಪ್ರತಿರೂಪದಂತಿದ್ದು, ಅವರ ಅದೇ ಮಾದರಿಯಲ್ಲಿ ಪಾದರಸ ಚಲನೆಯ ಮೂಲಕ ಜನಸೇವೆ ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮಳೆಗಾಲದಲ್ಲಿ ನಡೆದ ಟ್ರಕ್ ದುರಂತದಲ್ಲಿ ನದಿಯಲ್ಲಿ ಮುಳುಗಿದ್ದ ಅರ್ಜುನ್ ಪರವಾಗಿ ಅಲ್ಲೇ ಬೀಡುಬಿಟ್ಟು ನಡೆಸಿದ ಕಾರ್ಯಾಚರಣೆ ನಿಜಕ್ಕೂ ಮಾದರಿ ನಿರ್ವಹಣೆ ಎಂದವರು ಶ್ಲಾಘಿಸಿದರು.

ಅಭ್ಯರ್ಥಿ ಎ ಕೆ ಎಂ ಅಶ್ರಫ್ ಮಾತನಾಡಿ, ಎಸ್ ಐ ಆರ್ ಮೂಲಕ ಜನರ ಪೌರತ್ವ ಪ್ರಶ್ನಿಸಿದ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮೊದಲ ಪೆಟ್ಟು ಕೇರಳದ ಜನತೆ ನೀಡಬೇಕು ಎಂದು ಕರೆ ನೀಡಿದರು. 

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ಎ ಬಿ ಅಬ್ದುಲ್ಲಾ, ಕರೋಪಾಡಿ ಗ್ರಾ ಪಂ ಅಧ್ಯಕ್ಷ ಅನ್ವರ್ ಕರೋಪಾಡಿ, ಮಂಜೇಶ್ವರ ಜಿ ಪಂ ಸದಸ್ಯ ಸೋಮಶೇಖರ್, ಸಯ್ಯಿದ್ ಸೈಫುಲ್ಲಾ ತಂಙಳ್, ಮಜೀದ್ ತಲೆಕ್ಕಿ, ಶರೀಫ್ ತಲೆಕ್ಕಿ, ಅಶ್ರಫ್ ಸಾಲೆತ್ತೂರು ಮೊದಲಾದವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕೇರಳದಲ್ಲಿ ಈ ಬಾರಿ ಯುಡಿಎಫ್ ಸರಕಾರ ನಿಶ್ಚಿತ, ಮಂಜೇಶ್ವರದಲ್ಲಿ ಎಕೆಎಂ ಅಶ್ರಫ್ ಅವರನ್ನು ಚುನಾಯಿಸಿ ಆಡಳಿತ ಪಕ್ಷದ ಶಾಸಕರನ್ನು ಕಳಿಸಲು ಅಬ್ಬಾಸ್ ಅಲಿ ಮನವಿ Rating: 5 Reviewed By: karavali Times
Scroll to Top