ಬ್ರಹ್ಮರಕೂಟ್ಲು ಟೋಲ್ ಗೇಟಿಗೆ ಹಳೆಯ ಹೆದ್ದಾರಿಯೇ ಸರ್ವಿಸ್ ರಸ್ತೆ : ಇನ್ನೂ ಅಳವಡಿಕೆಯಾದ ಮೂಲಭೂತ ವ್ಯವಸ್ಥೆಗಳು - Karavali Times ಬ್ರಹ್ಮರಕೂಟ್ಲು ಟೋಲ್ ಗೇಟಿಗೆ ಹಳೆಯ ಹೆದ್ದಾರಿಯೇ ಸರ್ವಿಸ್ ರಸ್ತೆ : ಇನ್ನೂ ಅಳವಡಿಕೆಯಾದ ಮೂಲಭೂತ ವ್ಯವಸ್ಥೆಗಳು - Karavali Times

728x90

9 March 2026

ಬ್ರಹ್ಮರಕೂಟ್ಲು ಟೋಲ್ ಗೇಟಿಗೆ ಹಳೆಯ ಹೆದ್ದಾರಿಯೇ ಸರ್ವಿಸ್ ರಸ್ತೆ : ಇನ್ನೂ ಅಳವಡಿಕೆಯಾದ ಮೂಲಭೂತ ವ್ಯವಸ್ಥೆಗಳು

ಬಂಟ್ವಾಳ, ಮಾರ್ಚ್ 09, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಎಂಬ ಕಿಷ್ಕಿಂಧೆ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಹೆದ್ದಾರಿ ಶುಲ್ಕ ವಸೂಲಿ ಕೇಂದ್ರವೊಂದು ಕಾರ್ಯಾಚರಣೆ ನಡೆಸುತ್ತಾ ವಾಹನ ಸವಾರರಿಂದ ಕೇವಲ ವಸೂಲಿ ಮಾತ್ರ ನಡೆಸುತ್ತಾ ಬರುತ್ತಿದೆ. ಆದರೆ ಟೋಲ್ ಪ್ಲಾಝಾಗೆ ಇರಬೇಕಾದ ಯಾವುದೇ ಮೂಲಭೂತ ವ್ಯವಸ್ಥೆಗಳು ವರ್ಷಾನುಟ್ಟಲೆ ಕಳೆದರೂ ಇದುವರೆಗೂ ಅಳವಡಿಸಲಾಗಿಲ್ಲ ಎಂಬುದೇ ವಿಪರ್ಯಾಸ.

ಬ್ರಹ್ಮರಕೂಟ್ಲು ಟೋಲ್ ಕೇಂದ್ರದಲ್ಲಿ ತುರ್ತು ವಾಹನ ಸಂಚಾರಕ್ಕೆ ರಸ್ತೆಯೇ ಇಲ್ಲ ಎಂಬುದು ಪ್ರಮುಖ ಸಮಸ್ಯೆಯಾಗಿದ್ದು, ಅಂಬ್ಯುಲೆನ್ಸ್ ವಾಹನಗಳೇನಾದರೂ ಬಂದರೆ ಇಲ್ಲಿ ನಿತ್ಯವೂ ಚಡಪಡಿಸುತ್ತಿರುವ ದೃಶ್ಯಗಳೇ ಕಣ್ಣಿಗೆ ಬೀಳುತ್ತಿದೆ. ಸರ್ವಿಸ್ ರಸ್ತೆ ಎಂಬುದೇ ಇಲ್ಲಿಲ್ಲ. ಹಿಂದಿನ ಹೆದ್ದಾರಿಯನ್ನೇ ಸರ್ವಿಸ್ ರಸ್ತೆಯನ್ನಾಗಿ ಒಂದು ಬದಿಯಲ್ಲಿ ಉಳಿಸಿಕೊಳ್ಳಲಾಗಿದೆಯಾದರೂ ಅದಕ್ಕಾದರೂ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆಯೇ ಎಂದರೆ ಅದೂ ಇಲ್ಲ. ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರಕ್ಕೂ ವ್ಯವಸ್ಥೆ ಇಲ್ಲ, ಶೌಚಾಲಯ ಇಲ್ಲ, ಬೀದಿ ದೀಪಗಳೂ ಸಮರ್ಪಕವಾಗಿ ಅಳವಡಿಕೆಯಾಗಿಲ್ಲ. ಇವೇ ಮೊದಲಾದ ಇಲ್ಲಗಳ ಆಗರವಾಗಿ ಬ್ರಹ್ಮರಕೂಟ್ಲು ಟೋಲ್ ಗೇಟ್ ಹಲವು ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಲೇ ಬರುತ್ತಿದೆ. 

ಈ ಹಿಂದೆ ಈ ಟೋಲ್ ಗೇಟ್ ಪಾಣೆಮಂಗಳೂರು ಸಮೀಪದ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿನ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಬೇಕಾದಷ್ಟು ಸ್ಥಳಾವಕಾಶ ಇಲ್ಲ ಎಂಬ ಕಾರಣಕ್ಕೆ ಇದನ್ನು ಅಲ್ಲಿಂದ ಬ್ರಹ್ಮರಕೂಟ್ಲು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಸ್ಥಳಾಂತರಗೊಂಡು ಹಲವು ವರ್ಷಗಳೇ ಕಳೆದರೂ ಇದುವರೆಗೂ ಇಲ್ಲಿ ಕನಿಷ್ಠ ವ್ಯವಸ್ಥೆಗಳನ್ನು ಕಲ್ಪಿಸಲು ಕೂಡಾ ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ. ಆದರೆ ಸುಂಕ ವಸೂಲಿ ಮಾತ್ರ ಅಬಾಧಿತವಾಗಿ ಮುಂದುವರಿಸಿದೆ. 

ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಸರ್ವಿಸ್ ರಸ್ತೆಯಾಗಿ ಹಳೆ ಹೆದ್ದಾರಿಯನ್ನೇ ಬಳಸಲಾಗುತ್ತಿದೆಯಾದರೂ ಈ ಹಳೆ ಹೆದ್ದಾರಿಯ ಅವ್ಯವಸ್ಥೆ ಮಾತ್ರ ಹೇಳತೀರದಂತಿದೆ. ಇಲ್ಲಿನ ರಸ್ತೆ ವ್ಯವಸ್ಥೆ ಸರಿಯಾಗಿಲ್ಲ. ಕೆಲವೊಂದು ಕಡೆ ರಸ್ತೆ ಸಂಪೂರ್ಣ ಕಡಿತಗೊಂಡ ಸ್ಥಿತಿಯಲ್ಲಿದೆ. ಚೇಂಬರ್‍ಗಳು ರಸ್ತೆ ಮಧ್ಯದಲ್ಲೇ ಕಂಡು ಬರುತ್ತಿದೆ. ಚರಂಡಿ ಸ್ಲ್ಯಾಬ್‍ಗಳು ಕೂಡಾ ಬಾಯಿ ತೆರೆದ ಸ್ಥಿತಿಯಲ್ಲಿದೆ. ರಸ್ತೆ ಬದಿಯ ಎಲ್ಲೆಂದರಲ್ಲಿ ಕಸ-ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದರ ವಿಲೇವಾರಿಗೂ ಯಾವುದೇ ಕ್ರಮ ಇಲ್ಲ. 

ಇಂತಹ ಅವ್ಯವಸ್ಥೆಯ ಟೋಲ್ ಗೇಟ್ ಕೇಂದ್ರವನ್ನು ಇಲ್ಲಿನ ಜನ ಇಷ್ಟು ವರ್ಷಗಳಿಂದಲೂ ಸಹಿಸಿಕೊಂಡು ಬಂದಿದ್ದರಲ್ಲದೆ ನಿರಂತರವಾಗಿ ಸರಕಾರಕ್ಕಾಗಿ ಎಂಬ ದೃಷ್ಟಿಯಿಂದ ಸುಂಕವನ್ನೂ ನೀಡುತ್ತಾ ಬರುತ್ತಿದ್ದರು ಎಂಬುದೇ ಇಲ್ಲಿನ ಜನರ ಸಜ್ಜನಿಕೆಗೆ ತಾಳ್ಮೆಗೆ ಹಿಡಿದ ಕನ್ನಡಿಯಾಗಿದೆ. ಇದೀಗ ಕೇರಳದ ಜನರನ್ನು ಮಾದರಿಯಾಗಿಸಿಕೊಂಡು ಇಲ್ಲಿನ ಜನ ಕೂಡಾ ಬ್ರಹ್ಮರಕೂಟ್ಲು ಟೋಲ್ ಗೇಟ್ ಕೇಂದ್ರದ ಅವ್ಯವಸ್ಥೆ ವಿರುದ್ದ ಸಿಡಿದೆದ್ದಿದ್ದು, ಸಮಿತಿ ರಚಿಸಿಕೊಂಡು ಹೋರಾಟಕ್ಕಿಳಿದಿದ್ದಾರೆ ಮಾತ್ರವಲ್ಲ ನಿಯಮ ಮೀರಿದ ಈ ಸುಂಕ ವಸೂಲಿ ಕೇಂದ್ರವನ್ನು ಸಂಪೂರ್ಣ ರದ್ದು ಮಾಡದೆ ವಿರಮಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ರಂಗಕ್ಕಿಳಿದಿದ್ದಾರೆ. 

ಜನ ಚಳುವಳಿ ಉಗ್ರ ರೂಪ ತಾಳುವ ಮುನ್ನ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಇಲ್ಲಿನ ಟೋಲ್ ಪ್ಲಾಝ್ ತೆರವುಗೊಳಿಸಿ ನಿಯಮ ಬಾಹಿರವಾಗಿ ಟೋಲ್ ಕೇಂದ್ರ ನಿರ್ಮಿಸಿದ ಅಧಿಕಾರಿಗಳ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬ್ರಹ್ಮರಕೂಟ್ಲು ಟೋಲ್ ಗೇಟಿಗೆ ಹಳೆಯ ಹೆದ್ದಾರಿಯೇ ಸರ್ವಿಸ್ ರಸ್ತೆ : ಇನ್ನೂ ಅಳವಡಿಕೆಯಾದ ಮೂಲಭೂತ ವ್ಯವಸ್ಥೆಗಳು Rating: 5 Reviewed By: karavali Times
Scroll to Top