ಮಂಗಳೂರು, ಮಾರ್ಚ್ 12, ಮಾರ್ಚ್, 2026 (ಕರಾವಳಿ ಟೈಮ್ಸ್) : ಪ್ರಸಕ್ತ ಕೊಲ್ಲಿ ರಾಷ್ಟ್ರ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಎಲ್ ಪಿ ಜಿ ಸರಬರಾಜು ಬಗ್ಗೆ, ಸಮರ್ಪಕವಾದ ಪರಿಹಾರ ಕಂಡುಕೊಳ್ಳುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ಕ್ರಮಗಳನ್ನು ಕೈಗೊಂಡಿರುತ್ತದೆ.
ರಾಜ್ಯ ಸರ್ಕಾರವು ತೈಲ ಕಂಪೆನಿ ಅಧಿಕಾರಿಗಳೊಂದಿಗೆ (ಐಒಸಿ, ಬಿಪಿಸಿ, ಎಚ್ ಪಿ ಸಿ) ಸಭೆ ನಡೆಸಿ ಗೃಹ ಬಳಕೆಯ ಎಲ್ ಪಿ ಜಿ ಸಿಲಿಂಡರ್‍ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಇಲ್ಲದಂತೆ ತೈಲ ಕಂಪೆನಿ ಅಧಿಕಾರಿಗಳಿಂದ ಭರವಸೆ ಪಡೆದುಕೊಂಡಿದೆ.
ದೇಶದಲ್ಲಿ ಪ್ರಸಕ್ತ ಉಂಟಾಗಿರುವ ದೆಹಲಿಯ ಎಲ್ ಪಿ ಜಿ ದಾಸ್ತಾನು ಗೃಹ ಬಳಕೆ ಗ್ರಾಹಕರಿಗೆ ಅಗತ್ಯವಿರುವ ಬಗ್ಗೆ ತೈಲ ಕಂಪೆನಿಗಳು ಮಾಹಿತಿ ನೀಡಿದ್ದು, ರಾಜ್ಯದ ಎಲ್ಲಾ ಗೃಹ ಬಳಕೆ ಎಲ್ ಪಿ ಜಿ ಸರಬರಾಜಿನ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಗ್ರಾಹಕರು ಆತಂಕಪಟ್ಟು ಹೆಚ್ಚುವರಿ ಬುಕ್ಕಿಂಗ್ ಮಾಡುವುದು, ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆ ಸೃಷ್ಟಿಯಾಗುವಂತ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದೆ.
ಅಗತ್ಯ ಸೇವೆಗಳನ್ನು ಒದಗಿಸುವ ಸಾರ್ವಜನಿಕ ಸಂಸ್ಥೆಗಳಿಗೆ ಸಂಬಂಧಿಸಿದ ಸರ್ಕಾರಿ ಆಸ್ಪತ್ರೆಗಳು, ವಿದ್ಯಾಭ್ಯಾಸ ಸಂಸ್ಥೆಗಳು, ಅಂಗನವಾಡಿ, ಶಾಲೆ, ಕಾಲೇಜು, ಕಾರಾಗೃಹ ಇತ್ಯಾದಿ ಸಂಸ್ಥೆಗಳಿಗೆ ಯಾವುದೇ ಅಡಚಣೆಯಾಗದಂತೆ ಎಲ್ ಪಿ ಜಿ ಸರಬರಾಜನ್ನು ಒದಗಿಸುವಂತೆ ತೈಲ ಕಂಪೆನಿಗಳಿಗೆ ಸೂಚನೆಯನ್ನು ನೀಡಲಾಗಿದೆ.
ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್‍ಗಳನ್ನು ಅಕ್ರಮ ದಾಸ್ತಾನು/ ಸಂಗ್ರಹಣೆ/ ರಿಫಿಲ್ಲಿಂಗ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅಗತ್ಯ ಸರಕುಗಳ ಕಾಯ್ದೆ ಹಾಗೂ ಪೆಟ್ರೋಲಿಯಂ ಕಾಯ್ದೆಯಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಈ ಬಗ್ಗೆ ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಮತ್ತು ತೈಲ ಕಂಪೆನಿಗಳು ಪರಿಸ್ಥಿತಿಯನ್ನು ನಿಗಾ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












0 comments:
Post a Comment