ಕೈಕುಂಜೆ ಮನೆಯಲ್ಲಿ ಕಳ್ಳರ ಕೈಚಳಕ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು - Karavali Times ಕೈಕುಂಜೆ ಮನೆಯಲ್ಲಿ ಕಳ್ಳರ ಕೈಚಳಕ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು - Karavali Times

728x90

10 March 2026

ಕೈಕುಂಜೆ ಮನೆಯಲ್ಲಿ ಕಳ್ಳರ ಕೈಚಳಕ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ, ಮಾರ್ಚ್ 10, 2026 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಕೈಕುಂಜೆ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಮಾರ್ಚ್ 9 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. 

ಈ ಬಗ್ಗೆ ಪುತ್ತೂರು ತಾಲೂಕು, ಕಬಕ ಗ್ರಾಮದ ಪೋಳ್ಯ-ಕೆದುವಡ್ಕ ಲುಂಬಿಣಿ ನಿಲಯ ನಿವಾಸಿ ಕಿರಣ್ ರಾಜ್ ಅವರ ಪತ್ನಿ ಅನಿಷಾ ಕೆ (31) ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಇವರು ಮಂಗಳೂರಿನ ಕಾಗ್ನಿಸೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ವರ್ಕ್ ಫ್ರಂ ಹೋಂ ಕೆಲಸ ಮಾಡಿಕೊಂಡಿರುವುದಾಗಿರುತ್ತದೆ. ಇವರ ತಾಯಿ ಮನೆ ಬಿ ಮೂಡ ಕೈಕುಂಜ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. 

ತಾಯಿ ಮನೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ಮಾರ್ಚ್ 6 ರಂದು ತಾಯಿ ಮನೆಗೆ ಬಂದಿರುವುದಾಗಿದೆ. ಮಾ 7 ರಂದು ನೆಂಟರು ಕೂಡ ಮನೆಗೆ ಬಂದಿದ್ದರು. ಮಾ 8 ರಂದು ತಾಯಿ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ  ರಾತ್ರಿ 11.50 ರವರೆಗೆ ಇದ್ದು, ನಂತರ ಮನೆಯ ಬಾಗಿಲುಗಳನ್ನು ಹಾಕಿ ಮಲಗಿದ್ದರು. 

ಮಾ 9 ರಂದು ಮನೆಯಲ್ಲಿದ್ದ ಚಿಕ್ಕಮ್ಮನ ಮಗಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗಿದ್ದು ಅವಳನ್ನು ಚಿಕ್ಕಮ್ಮ  ಮನೆಯ ಎದುರಿನ ಬಾಗಿಲು ತೆಗೆದು ಶಾಲೆಗೆ ಕಳುಹಿಸಿರುತ್ತಾರೆ. ತಾಯಿ ಬೆಳಿಗ್ಗೆ 6.30 ಗಂಟೆಗೆ ಎದ್ದು ಮನೆ ಕೆಲಸ ಮಾಡುತ್ತಿದ್ದರು. ಅನಿಷಾ ಅವರು ಬೆಳಿಗ್ಗೆ 9 ಗಂಟೆಗೆ ಎದ್ದು ಮಗಳನ್ನು ಶಾಲೆಗೆ ಕಳುಹಿಸಿ ಬೆಳಿಗ್ಗೆ 9.30 ಗಂಟೆಗೆ ಮನೆಯ ಸೋಪಾದಲ್ಲಿ ಕುಳಿತುಕೊಂಡಾಗ ಸೋಪಾದಲ್ಲಿ ತನ್ನ ಮಗಳ ಕಿವಿಯ ಚಿನ್ನ ಇಟ್ಟಿರುವ ಖಾಲಿ ಬಾಕ್ಸ್ ಇದ್ದು ಅದನ್ನು ನೋಡಿ ತಾಯಿಯಲ್ಲಿ ಈ ಬಾಕ್ಸ್ ಯಾರು ಇಲ್ಲಿ ಇಟ್ಟಿದ್ದು ಇದರ ಚಿನ್ನ ಎಲ್ಲಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ತಾಯಿ ಹೇಳಿದ್ದಾರೆ. ಇದರಿಂದ ಗಾಬರಿಗೊಂಡು ಮನೆಯ ಟಿವಿ ಶೋಕೇಸಿನಲ್ಲಿ ಇಟ್ಟಿದ್ದ ಚಿನ್ನವನ್ನು ನೋಡಿದಾಗ ಬಾಕ್ಸ್ ಗಳಲ್ಲಿ ಚಿನ್ನ ಇಟ್ಟಿದ್ದ ಬಾಕ್ಸ್ ಗಳು ಖಾಲಿಯಾಗಿತ್ತು. ಒಂದು ಬಾಕ್ಸ್ ನಲ್ಲಿ ಸುಮಾರು 14 ಗ್ರಾಂ ತೂಕದ ಸಪಾಯ ಚಿನ್ನದ ನೆಕ್ಲೇಸ್, ಇನ್ನೊಂದರಲ್ಲಿ 28 ಗ್ರಾಂ ತೂಕದ ಬಳೆಗಳು, ಇನ್ನೊಂದು ಬಾಕ್ಸ್ ನಲ್ಲಿ 8 ಗ್ರಾಂ ತೂಕದ ಕರಿಮಣಿ ಸರ, ಮತ್ತೊಂದರಲ್ಲಿ ಮಗುವಿನ 3 ಗ್ರಾಂ ತೂಕದ ಸ್ಟಡ್, 8 ಗ್ರಾಂ ತೂಕದ ಒಂದು ಜೊತೆ ಜುಮ್ಕಿ ಇದ್ದು ಎಲ್ಲವೂ ಕಳವು ಆಗಿರುವುದು ಗೊತ್ತಾಗಿದೆ.

ಮನೆಯ ರೂಮಿಗೆ ಹೋದಾಗ ರೂಮಿನ ಡ್ರಾಯರನ್ನು ಎಳೆದು ನೋಡಿದ್ದು ಅಲ್ಲದೆ ಲ್ಯಾಪ್ ಟಾಪ್ ಬ್ಯಾಗನ್ನು ತೆರೆದು ನೋಡಿರುವುದು ಕಂಡು ಬಂದಿದೆ. ಮನೆಯ ಹಿಂಬದಿ ಹೋದಾಗ ಹಿಂಬದಿ ಬಾಗಿಲಿನ ಪಕ್ಕದ ಕಿಟಕಿಯ ಚಿಲಕವನ್ನು ತೆರೆದು ಬಾಗಿಲಿನ ಚಿಲಕವನ್ನು ಯಾವುದೋ ಸಾಧನದಿಂದ ಮುರಿದು ಮನೆಯ ಒಳಗೆ ಬಂದು ಕಳವು ಮಾಡಿಕೊಂಡು ಹೋಗಿರುವ ಸಾದ್ಯತೆ ಕಂಡು ಬಂದಿದೆ. ಒಟ್ಟು 7 ಲಕ್ಷ ರೂಪಾಯಿ ಮೌಲ್ಯದ 61 ಗ್ರಾಂ ಚಿನ್ನಾಭರಣ ಕಳವಾಗಿದೆ. ಈ ಬಗ್ಗೆ ಅನಿಷಾ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೈಕುಂಜೆ ಮನೆಯಲ್ಲಿ ಕಳ್ಳರ ಕೈಚಳಕ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು Rating: 5 Reviewed By: karavali Times
Scroll to Top