ಬಂಟ್ವಾಳ, ಮಾರ್ಚ್ 25, 2026 (ಕರಾವಳಿ ಟೈಮ್ಸ್) : ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ಟಿಪ್ಪರ್ ಚಲಾಯಿಸಿ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಅಪಘಾತ ಪಡಿಸಿದ್ದಲ್ಲದೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಸಾರಿಗೆ ಆದಾಯದ 3 ಸಾವಿರ ರೂಪಾಯಿ ಹಣವನ್ನು ಎಗರಿಸಿದ ಘಟನೆ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಮಾ 24 ರಂದು ಬೆಳಿಗ್ಗೆ ಸಂಭವಿಸಿದೆ.
ಹಲ್ಲೆಗೊಳಗಾದ ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕನನ್ನು ಕಡಬ ತಾಲೂಕು, ಕೊನಾಲು ಗ್ರಾಮದ ಕಾರ್ಯತ್ತಡ್ಕ ನಿವಾಸಿ ಪ್ರಶಾಂತ್ ಎಂದು ಹೆಸರಿಸಲಾಗಿದ್ದು, ಆರೋಪಿ ಟಿಪ್ಪರ್ ಚಾಲಕನನ್ನು ಅಳಿಕೆ ಗ್ರಾಮದ ಉಕ್ಕುಡ-ದರ್ಬೆ ನಿವಾಸಿ ಬಿಲಾಲ್ ಎಂದು ಹೆಸರಿಸಲಾಗಿದೆ. ಇವರು ಗಣೇಶ್ ಎಂಬವರು ಚಾಲಕರಾಗಿ ಚಲಾಯಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ನಿರ್ವಾಹಕರಾಗಿ ಮಾ 24 ರಂದು ಬೆಳಿಗ್ಗೆ 7.20ಕ್ಕೆ ಮಕಳಕುಂಜ ಎಂಬಲ್ಲಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಧರ್ಮಸ್ಥಳಕ್ಕೆ ಹೊರಡುವರೇ ವಿಟ್ಲ ಮಾರ್ಗವಾಗಿ ಬರುತ್ತಿರುವ ವೇಳೆ 7.55ಕ್ಕೆ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ತಲುಪಿದಾಗ ಕುದ್ದುಪದವು ಕಡೆಯಿಂದ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಬಂದ ಚಾಲಕ ಬಿಲಾಲ್ ಎಂಬವರು ತಿರುವು ರಸ್ತೆಯಲ್ಲಿ ದುಡುಕುತನದಿಂದ ಚಲಾಯಿಸಿ ಬಸ್ಸಿಗೆ ಅಪಘಾತ ಪಡಿಸಿದ್ದಾರೆ. ಈ ಸಂದರ್ಭ ನಿರ್ವಾಹಕ ಪ್ರಶಾಂತ್ ಅವರು ಬಸ್ಸಿನಿಂದ ಇಳಿದು ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸುತ್ತಿದ್ದ ವೇಳೆ ಆರೋಪಿ ಲಾರಿ ಚಾಲಕ ಬಸ್ ಚಾಲಕನ ಗಣೇಶ್ ಅವರ ಕೈ ಹಿಡಿದು ಎಳೆದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದಾಗ ನಿರ್ವಾಹಕ ಪ್ರಶಾಂತ್ ಪ್ರಶ್ನಿಸಿದ್ದಾರೆ. ಈ ಸಂದರ್ಭ ಲಾರಿ ಚಾಲಕ ಬಸ್ ನಿರ್ವಾಹಕಗೆ ಹಲ್ಲೆ ನಡೆಸಿ ಸಮವಸ್ತ್ರದ ಅಂಗಿಯನ್ನು ಹಿಡೆದೆಳೆದು ಎಳೆದಾಡಿದ್ದಾನೆ. ಅಲ್ಲದೆ ನಿರ್ವಾಹನ ಜೇಬಿನಲ್ಲಿದ್ದ 3 ಸಾವಿರ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ಬಳಿಕ ಬಸ್ಸಿನಲ್ಲಿದ್ದ ಪ್ರಯಾಣಿಕರು ಜಗಳ ಬಿಡಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಬಸ್ ನಿರ್ವಾಹಕ ಪ್ರಶಾಂತ್ ಅವರು ಬಳಿಕ ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಿಲಾಲ್ ಅವರು ಪ್ರತಿದೂರು ನೀಡಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕರಾದ ಪ್ರಶಾಂತ್ ಹಾಗೂ ಗಣೇಶ್ ಅವರ ಮೇಲೂ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment