ಕಡಬ, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಕಡಬ ತಾಲೂಕು ಕೊಯಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಶು ಸಂಗೋಪನೆ ಮತ್ತು ರೇಶ್ಮೆ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ.
ಮಾ 3 ರಂದು ಕೊಯಿಲ ಪಶು ವೈದ್ಯಕೀಯ ಕಾಲೇಜು ಹಾಗೂ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕೊಯಿಲ ಪಶು ವೈದ್ಯಕೀಯ ಕಾಲೇಜು ಕಟ್ಟಡಕ್ಕೆ 2016ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದೆ. ಕಾಲೇಜಿಗೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮಂಜೂರುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ ತರಗತಿಗಳನ್ನು ಪ್ರಾರಂಭಿಸಲು ಗಂಭೀರವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.
ಕಾಲೇಜು, ಹಾಸ್ಟೆಲ್ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು ಈಗಾಗಲೇ ಪೂರ್ಣಗೊಂಡಿದೆ. 13 ಉಪನ್ಯಾಸಕರ ಹುದ್ದೆ, 32 ಇತರೆ ಸಿಬ್ಬಂದಿ ಹುದ್ದೆಗಳು ಮಂಜೂರುಗೊಳಿಸಲಾಗಿದೆ. ಕಾಲೇಜಿಗೆ ಭಾರತೀಯ ಪಶು ವೈದ್ಯಕೀಯ ಪರಿಷತ್ (ವಿ.ಸಿ.ಐ) ಅನುಮತಿ ದೊರಕುವುದು ಬಾಕಿ ಇದ್ದು, ಶೀಘ್ರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದಲ್ಲಿ ಅಪರೂಪದ ಜಾನುವಾರು ತಳಿಗಳನ್ನು ಬೆಳೆಸಲು ಹೆಚ್ಚು ಆದ್ಯತೆ ನೀಡಬೇಕು. ಜಾನುವಾರು ಮತ್ತು ಕುಕ್ಕುಟಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹೆಚ್ಚಿಸಬೇಕು. ಹೊಸ ಹೊಸ ತಳಿಗಳನ್ನು ಪರಿಚಯಿಸಬೇಕು ಎಂದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರು ಸಾಕಾಣಿಕೆ ಸಂಖ್ಯೆಯು ಕುಸಿಯುತ್ತಿರುವುದರಿಂದ ಹೈನುಗಾರಿಕೆಯನ್ನು ಪ್ರೋತ್ಸ್ಸಾಹಿಸಲು ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಿವಿಧೆಡೆ ಮಂಜೂರು ಗೊಂಡಿರುವ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ಜಮೀನು ಲಭ್ಯವಿಲ್ಲದಿದ್ದಲ್ಲಿ ಅದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಇದೇ ವೇಳೆ ಸಚಿವರು ಸೂಚಿಸಿದರು. ಜಾನುವಾರು ವಿಮೆಗಳ ಕ್ಲೈಮ್ ಸಂದರ್ಭದಲ್ಲಿ ವಿಮಾ ಕಂಪೆನಿಗಳು ರೈತರಿಗೆ ಸ್ಪಂದಿಸುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ, ಕೇಂದ್ರ ಕಚೇರಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪುತ್ತೂರಿಗೆ ಪಶು ಸಂಗೋಪನೆ ಪಾಲಿ ಕ್ಲಿನಿಕ್ ಮಂಜೂರಾಗಿದ್ದು, ಶೀಘ್ರದಲ್ಲಿಯೇ ವಿವಿಧ ಕಟ್ಟಡ ಕಾಮಗಾರಿಗೆ ಚಾಲನೆ ನೀಡುವಂತೆ ಸಚಿವ ವೆಂಕಟೇಶ್ ಸೂಚಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿನೋತ್ ಪ್ರಿಯಾ, ಪಶು ಸಂಗೋಪನೆ ಇಲಾಖೆ ಆಯುಕ್ತೆ ಶಿಲ್ಪಾ ನಾಗ್, ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಕೆ.ಸಿ ವೀರಣ್ಣ, ಡಾ. ಸುಶಾಂತ್ ರೈ ಮೊದಲಾದವರು ಜೊತೆಗಿದ್ದರು.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಸಭೆಗೆ ಇಲಾಖಾ ಮಾಹಿತಿ ನೀಡಿದರು. ಜಾನುವಾರು ತಳಿ ಸಂವರ್ಧನ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ಚಿದಾನಂದ ಸ್ವಾಗತಿಸಿದರು. ಇದಕ್ಕೂ ಮೊದಲು ಸಚಿವರು ಪಶು ವೈದ್ಯಕೀಯ ಕಾಲೇಜು ಕಟ್ಟಡ, ಜಿಲ್ಲಾ ಗೋಶಾಲೆ, ಹಾಗೂ ಜಾನುವಾರು ಸಂವರ್ಧನ ತರಬೇತಿ ಕೇಂದ್ರದ ವಿವಿಧ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

















0 comments:
Post a Comment