ಮಂಗಳೂರು, ಮಾರ್ಚ್ 17, ಮಾರ್ಚ್, 2026 (ಕರಾವಳಿ ಟೈಮ್ಸ್) : ಕುಟುಂಬ ಸಮಸ್ಯೆ ಇದ್ದ ಮಹಿಳೆಯರ ನಡುವಿನ ಜಗಳದಲ್ಲಿ ಮೂಡಬಿದ್ರೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸಂದೇಶ್ ಪಿ ಜಿ ಅವರು ಮಹಿಳೆಯರ ಜೊತೆ ಅಸಭ್ಯವಾಗಿ ಮಾತನಾಡಿದ ಆರೋಪದಲ್ಲಿ ಅಮಾನತು ಶಿಕ್ಷೆಗೊಳಗಾಗಿದ್ದಾರೆ.
ಇನ್ಸ್ ಪೆಕ್ಟರ್ ಸಂದೇಶ್ ಅವರು ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಮಹಿಳೆಯ ಧ್ವನಿ ಹಾಗೂ ವೀಡಿಯೋ ಸಂದೇಶಗಳು ಹರಿದಾಡಿದ್ದು, ಈ ಬಗ್ಗೆ ಮಹಿಳಾ ಆಯೋಗ ನೀಡಿದ ದೂರಿನಂತೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಇದೀಗ ವರದಿ ಒಪ್ಪಿಸಿದೆ.
ಸುಮತಿ ನಾಯಕ್ ಮತ್ತು ಅವರ ಸಹೋದರಿಯ ನಡುವೆ ಕುಟುಂಬ ಸಮಸ್ಯೆಗಳಿದ್ದು, ಸುಮತಿ ನಾಯಕ್ ವಿರುದ್ಧ ಎರಡು ಪ್ರಕರಣಗಳು ಹಾಗೂ ಅವರ ಸಹೋದರಿಯ ವಿರುದ್ಧವೂ ಎರಡು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಇನ್ಸ್‍ಪೆಕ್ಟರ್ ವಿರುದ್ಧವೂ ಅವರ ದೂರು ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಒಂದು ಪ್ರಕರಣ ತನಿಖೆಯಲ್ಲಿದ್ದು, ಉಳಿದ ಎಲ್ಲಾ ಪ್ರಕರಣಗಳು ಉಚ್ಚ ನ್ಯಾಯಾಲಯದಲ್ಲಿ ಸ್ಥಗಿತಗೊಂಡಿದ್ದು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾಗಿದೆ.
ಅವಿತಾ ಮಿನೇಜಸ್ ಅವರು ಇನ್ಸ್ ಪೆಕ್ಟರ್ ವಿರುದ್ಧ ಮಾಧ್ಯಮ ಹೇಳಿಕೆ ನೀಡಿದ ಮತ್ತೊಬ್ಬ ಮಹಿಳೆ. ಅವರ ಗಂಡನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒಂದು ಪ್ರಕರಣದಲ್ಲಿ ಅವನು ಖುಲಾಸೆಯಾಗಿದ್ದಾನೆ. ಉಳಿದ ಪ್ರಕರಣಗಳಲ್ಲಿ ಒಂದರಲ್ಲಿ, ಬಡ ವ್ಯಕ್ತಿಯ ಕಿಡ್ನಿ ಚಿಕಿತ್ಸೆಗೆ ಸಂಗ್ರಹಿಸಿದ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಅವಿತಾ ಮತ್ತು ಅವರ ಗಂಡನ ವಿರುದ್ಧ ಪ್ರಕರಣ ದಾಖಲಾಗಿ, ಸಾಕ್ಷ್ಯ ಸಂಗ್ರಹದ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಅವರ ವಿರುದ್ಧ ಯಾವುದೇ ಹಲ್ಲೆ ಅಥವಾ ಕಿರುಕುಳದ ಸಾಕ್ಷ್ಯ ದೊರಕಿಲ್ಲ. ಇನ್ಸ್ ಪೆಕ್ಟರ್ ಅವರು ಅವಿತಾ ಅವರಿಗೆ ಅವಮಾನಕರವಾಗಿ ವರ್ತಿಸಿದರು ಹಾಗೂ ಲಂಚ ಕೇಳಿದರು ಎಂದು ಹೇಳಲಾದ ಸ್ಥಳದಲ್ಲಿ ಸಿಸಿಟಿವಿ ವ್ಯವಸ್ಥೆಯಿದ್ದು, ಅವರು ಮಾತನಾಡುವ ಸಂದರ್ಭದಲ್ಲಿ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ಒಬ್ಬ ವಕೀಲರು ಇದ್ದರು. ಅವರು ಯಾವುದೇ ರೀತಿಯ ಲಂಚ ಬೇಡಿಕೆ ಅಥವಾ ಕಿರುಕುಳ ನಡೆದಿಲ್ಲವೆಂದು ಹೇಳಿದ್ದಾರೆ.
ಆದರೆ ವಿಡಿಯೋ ಮತ್ತು ಆಡಿಯೋದಲ್ಲಿ ಇನ್ಸ್ ಪೆಕ್ಟರ್ ಅವರ ವರ್ತನೆ ಪ್ರಶ್ನಾರ್ಹವಾಗಿದ್ದು, ದೂರವಾಣಿ ಸಂಭಾಷಣೆಯಲ್ಲಿಯೂ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿರುವುದು ಹಾಗೂ ದುರ್ವರ್ತನೆ ನಡೆಸಿದ ಬಗ್ಗೆ ಗೋಚರಿಸಿದ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದ್ದು, ಘಟನೆ ಬಗ್ಗೆ ವಿಸ್ತøತ ತನಿಖೆ ಮುಂದುವರಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.












0 comments:
Post a Comment