ಬಂಟ್ವಾಳ, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿ ಮಾದಕ ವಸ್ತು ಸೇವಿಸಿದ ನಶೆಯಲ್ಲಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದು, ಇತರ ಮೂವರು ಪರಾರಿಯಾದ ಘಟನೆ ಮಾರ್ಚ್ 30 ರಂದು ಸಂಜೆ ಸಂಭವಿಸಿದೆ.
ಬಂಧಿತ ಆರೋಪಿಯನ್ನು ಸಜಿಪಮೂಡ ಗ್ರಾಮದ ನಿವಾಸಿ ಶಾಕೀರ್ (28) ಹಾಗೂ ಪರಾರಿಯಾದವರನ್ನು ಅಸೀಪ್, ಸಿದ್ದಿಕ್ ಮತ್ತು ಇರ್ಷಾದ್ ಎಂದು ಹೆಸರಿಸಲಾಗಿದೆ.
ಮಾ 30 ರಂದು ಸಂಜೆ ನರಿಕೊಂಬು ಗ್ರಾಮದ ನೆಹರೂ ನಗರ ಎಂಬಲ್ಲಿ ಕೆಲವು ವ್ಯಕ್ತಿಗಳು ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವದ ಪೊಲೀಸರು ಸ್ಥಳಕ್ಕೆ ತೆರಳಿದಾಗ ಅಲ್ಲೇ ಮೈದಾನದಲ್ಲಿ ನಿಂತಿದ್ದ ಕೆಎ19 ಎಇ6387 ನೋಂದಣಿ ಸಂಖ್ಯೆಯ ಕಾರಿನಲ್ಲಿ ಜನರಿದ್ದು, ಪೊಲೀಸರನ್ನು ಕಂಡು ಪರಾರಿಯಾಗಿರುತ್ತಾರೆ. ಅವರುಗಳ ಪೈಕಿ ಓರ್ವನನ್ನು ಹಿಡಿದು ವಿಚಾರಿಸಿದಾಗ ಆತ ಸಜಿಪ ಮೂಡ ಗ್ರಾಮದ ನಿವಾಸಿ ಶಾಕೀರ್ (28 ) ಎಂದು ತಿಳಿದು ಬಂದಿದೆ. ಆತನನ್ನು ವಿಚಾರಿಸಿದಾಗ ತಾನು ಹಾಗೂ ತನ್ನೊಂದಿಗಿದ್ದ ಅಸೀಪ್, ಸಿದ್ದಿಕ್ ಮತ್ತು ಇರ್ಷಾದ್ ಎಂಬವರುಗಳು ಒಟ್ಟಿಗೆ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾನೆ. ಈ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಶಾಕೀರ್ ಮಾದಕವಸ್ತು ಸೇವಿಸಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2026 ಕಲಂ 27(ಎ) ಎನ್ ಡಿ ಪಿ ಎಸ್ ಕಾಯ್ದೆ 1985ರಂತೆ ಪ್ರಕರಣ ದಾಖಲಾಗಿದೆ.











0 comments:
Post a Comment