ಬಂಟ್ವಾಳ, ಎಪ್ರಿಲ್ 13, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ಮಾಜಿ ಉಪಾಧ್ಯಕ್ಷ, ನಿಕಟಪೂರ್ವ ಸದಸ್ಯ ಮುಹಮ್ಮದ್ ನಂದರಬೆಟ್ಟು (66) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ (ಎಪ್ರಿಲ್ 13) ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಂಟ್ವಾಳ ಪುರಸಭೆಗೆ ಮೂರು ಅವಧಿಗೆ ಸದಸ್ಯರಾಗಿ ಚುನಾಯಿತರಾಗಿದ್ದ ಇವರು ಒಂದು ಬಾರಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ನಂದರಬೆಟ್ಟು ಅನ್ಸಾರಿಯಾ ಇಸ್ಲಾಮಿಕ್ ಮದರಸ ಹಾಗೂ ಮದೀನಾ ಜುಮಾ ಮಸೀದಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು ನಿರಂತರ 16 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ಥಳೀಯವಾಗಿ ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಘಟನೆಗಳಲ್ಲೂ ಅವರು ಸಕ್ರಿಯರಾಗಿದ್ದರು. ಕಾಲೇಜು ಹಂತದಲ್ಲೇ ಉತ್ತಮ ವಾಲಿಬಾಲ್ ಪಟುವೂ ಆಗಿದ್ದ ಇವರು ರಾಷ್ಟ್ರೀಯ ಮಟ್ಟದ ಆಟಗಾರರಾಗಿ ಗುರುತಿಸಿಕೊಂಡಿದ್ದರು.
ಮೃತರ ದಫನ ಕ್ರಿಯೆಯು ಮಂಗಳವಾರ ಮುಂಜಾನೆ ವೇಳೆಗೆ ಪರ್ಲಿಯಾ ಅರಫಾ ಜುಮಾ ಮಸೀದಿಯ ವಠಾರದಲ್ಲಿರುವ ಮಿತ್ತಬೈಲು ಕೇಂದ್ರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮುಹಮ್ಮದ್ ನಂದರಬೆಟ್ಟು ಅವರ ಅಗಲಿಕೆಗೆ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾ ನಿಕಟಪೂರ್ವ ಅಧ್ಯಕ್ಷ ಬಿ ವಾಸು ಪೂಜಾರಿ ಸಹಿತ ಹಲವು ಮಂದಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.




















0 comments:
Post a Comment