ಗೋವಾ : ಪಾರ್ಲಿಮೆಂಟರಿ ಎಸೋಸಿಯೇಶನ್ ಸಮ್ಮೇಳನದಲ್ಲಿ ಕರ್ನಾಟಕ ಸ್ಪೀಕರ್ ಡಾ. ಯು.ಟಿ. ಖಾದರ್ ಭಾಷಣ - Karavali Times ಗೋವಾ : ಪಾರ್ಲಿಮೆಂಟರಿ ಎಸೋಸಿಯೇಶನ್ ಸಮ್ಮೇಳನದಲ್ಲಿ ಕರ್ನಾಟಕ ಸ್ಪೀಕರ್ ಡಾ. ಯು.ಟಿ. ಖಾದರ್ ಭಾಷಣ - Karavali Times

728x90

13 April 2026

ಗೋವಾ : ಪಾರ್ಲಿಮೆಂಟರಿ ಎಸೋಸಿಯೇಶನ್ ಸಮ್ಮೇಳನದಲ್ಲಿ ಕರ್ನಾಟಕ ಸ್ಪೀಕರ್ ಡಾ. ಯು.ಟಿ. ಖಾದರ್ ಭಾಷಣ

ಮಂಗಳೂರು, ಎಪ್ರಿಲ್ 13, 2026 (ಕರಾವಳಿ ಟೈಮ್ಸ್) : ಗೋವಾದ ಪಣಜಿಯಲ್ಲಿ ನಡೆದ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ) ಭಾರತ ವಲಯ-7 ಪ್ರಥಮ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಸ್ಪೀಕರ್ ಡಾ ಯು.ಟಿ ಖಾದರ್ ಅವರು ಭಾಗವಹಿಸಿದರು. 

ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, “ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಯುವ-ನಾಯಕತ್ವ ಎಂಬ ಪದ ಹೆಚ್ಚು ಬಳಸಲಾಗುತ್ತದೆ. ಆದರೆ ಯುವ ಶಾಸಕರನ್ನು ಕೇವಲ ವಯಸ್ಸಿನ ಆಧಾರದ ಮೇಲೆ ವ್ಯಾಖ್ಯಾನಿಸುವುದು ಸರಿಯಲ್ಲ. ಅವರನ್ನು ಮನಸ್ಥಿತಿಯಿಂದ ವ್ಯಾಖ್ಯಾನಿಸಲಾಗುತ್ತದೆ. ಹಳೆಯ ಮನೋಭಾವ, ದೃಷ್ಟಿಕೋನ, ನಾವೀನ್ಯತೆಗೆ ಒಗ್ಗಿಕೊಳ್ಳಲಾರದ ಮನಸ್ಥಿತಿಯನ್ನು ಹೊಂದಿರುವವರು ಯುವಕರಲ್ಲ, ಬದಲಾಗಿ ಹೊಸ ಆಲೋಚನೆಗಳು, ನವೀನ ದೃಷ್ಟಿಕೋನ ಹೊಂದಿರುವವರು ನಿಜವಾಗಿಯೂ ಯುವಕರು ಎಂದರು.

ರಾಜಕೀಯದಲ್ಲಿ ಯುವಕರನ್ನು ಎರಡು ಆಯಾಮಗಳಲ್ಲಿ ನೋಡಬಹುದು, ವಯೋವೃದ್ಧರು ಮತ್ತು ಜ್ಞಾನ ವೃದ್ದರು. ಭಾರತದಲ್ಲಿ ಸುಮಾರು 15-20 ಶೇಕಡಾ ಶಾಸಕರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಆದರೆ ನಿಜವಾದ ಪ್ರಶ್ನೆ, ಎಷ್ಟು ಜನರು ನಾವೀನ್ಯತೆ, ಧೈರ್ಯ ಮತ್ತು ಜವಾಬ್ದಾರಿಯೊಂದಿಗೆ ಯೋಚಿಸುತ್ತಾರೆ ಎಂಬುವುದಾಗಿದೆ ಎಂದ ಅವರು, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು, ಅವರ ವಯಸ್ಸೇನಾಗಿರಲಿ, ಹೊಸ ಚಿಂತನೆ, ಕಡಿಮೆ ಪೂರ್ವಾಗ್ರಹ ಮತ್ತು ಹೆಚ್ಚಿನ ಪ್ರಯೋಗಶೀಲ ಮನೋಭಾವವನ್ನು ಹೊಂದಿರುತ್ತಾರೆ. ಸರಿಯಾದ ಮಾರ್ಗದರ್ಶನ ಮತ್ತು ವ್ಯವಸ್ಥಿತ ತರಬೇತಿ ದೊರೆತರೆ, ಇವರು ಸಮಾಜ ಪರಿವರ್ತನೆಯ ಶಕ್ತಿಶಾಲಿ ಚಾಲಕರಾಗಬಹುದು. ಈ ನಿಟ್ಟಿನಲ್ಲಿ ಬೆಂಗಳೂರಿನ ಕ್ಷೇಮವನದಲ್ಲಿ ಮೊದಲ ಬಾರಿಗೆ ನಡೆದ ಶಾಸಕರ ಬೂಟ್ ಕ್ಯಾಂಪ್ ಹೊಸ ಶಾಸಕರಿಗೆ ಮಾರ್ಗದರ್ಶನ ನೀಡಿ ಹೊಸ ಆಯಾಮವನ್ನು ಪರಿಚಯಿಸಿದ ಅತ್ಯಂತ ಪ್ರಭಾವಶಾಲಿ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಅವರಿಗೆ ಕಾನೂನು ರಚನೆ, ತಂತ್ರಜ್ಞಾನ ಬಳಕೆ, ಕ್ಷೇತ್ರ ನಿರ್ವಹಣೆ ಮತ್ತು ನೈತಿಕ ಆಡಳಿತದ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ರಾಜ್ಯಗಳಲ್ಲೂ ಹೆಚ್ಚು ಹೆಚ್ಚು ನಡೆಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. 

ಇಂದಿನ ಆಡಳಿತ ವ್ಯವಸ್ಥೆ ಅತ್ಯಂತ ಸಂಕೀರ್ಣವಾಗಿದೆ. ಆದ್ದರಿಂದ ಪ್ರತಿಯೊಂದು ವಿಧಾನಸಭೆಯೂ ನಿರಂತರ ಕಲಿಕೆಯ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕು. ಕೇವಲ ಅನುಭವಕ್ಕೆ ಸೀಮಿತವಾಗಿರದೆ, ಕಾರ್ಪೊರೇಟ್ ನಾಯಕರು ತರಬೇತಿ ಪಡೆಯುವಂತೆಯೇ, ಶಾಸಕರು ಕೃತಕ ಬುದ್ಧಿಮತ್ತೆ (ಎಐ), ಸೈಬರ್ ಭದ್ರತೆ, ಡೇಟಾ ಆಡಳಿತ ಮತ್ತು ಆರ್ಥಿಕ ನೀತಿ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಪಡೆಯುವುದು ಅವಶ್ಯಕ. ಇಂದಿನ ಕಾಲದಲ್ಲಿ ಕೃತಕ ಬುದ್ಧಿಮತ್ತೆಯನ್ನು ಕೇವಲ ತಂತ್ರಜ್ಞಾನವಾಗಿ ನೋಡದೇ, ಮೂಲಸೌಕರ್ಯವಾಗಿ ಅರ್ಥಮಾಡಿಕೊಳ್ಳಬೇಕು. ಭವಿಷ್ಯ ಸೂಚಕ ಪೆÇಲೀಸ್ ವ್ಯವಸ್ಥೆ, ಬೆಳೆ ಮುನ್ಸೂಚನೆ, ಸಂಚಾರ ನಿರ್ವಹಣೆ ಮತ್ತು ಆರೋಗ್ಯ ಸೇವೆಗಳಂತಹ ಸಾರ್ವಜನಿಕ ವ್ಯವಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ನೀತಿಗಳನ್ನು ರೂಪಿಸುವುದು ಶಾಸಕರ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ಯು.ಟಿ ಖಾದರ್ ಹೇಳಿದರು.

ಭಾರತದ ಬೆಳವಣಿಗೆಗೆ ಈಗ ಪ್ರತಿಕ್ರಿಯಾತ್ಮಕ ಆಡಳಿತದಿಂದ ಭವಿಷ್ಯ ಸೂಚಕ ಆಡಳಿತದತ್ತ ಸಾಗುವ ಅಗತ್ಯವಿದೆ. ಡೇಟಾ ಆಧಾರಿತ ನಿರ್ಧಾರಗಳು, ನೈಜ-ಸಮಯದ ವಿಶ್ಲೇಷಣೆ ಮತ್ತು ತಂತ್ರಜ್ಞಾನ ಬಳಕೆ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ಬಜೆಟ್ ಹಂಚಿಕೆಗಳು ಊಹೆಗಳ ಮೇಲೆ ಅಲ್ಲ, ನಿಖರ ಡೇಟಾದ ಮೇಲೆ ಆಧಾರಿತವಾಗಿರಬೇಕು. ಇದೇ ಸಮಯದಲ್ಲಿ ರೂಪಾಯಿಯ ಬಲವರ್ಧನೆಗಾಗಿ ದೀರ್ಘಾವಧಿಯ ದೃಷ್ಟಿಕೋನ ಅಗತ್ಯ. ರಫ್ತು ಸಾಮಥ್ರ್ಯವನ್ನು ಹೆಚ್ಚಿಸುವುದು, ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ರೂಪಾಯಿ ಆಧಾರಿತ ವ್ಯವಹಾರಗಳನ್ನು ಪ್ರೋತ್ಸಾಹಿಸುವುದು ಆರ್ಥಿಕ ಸ್ವಾವಲಂಬನೆಗೆ ದಾರಿಯಾಗುತ್ತದೆ ಎಂದರು.

ಭಾರತದ ಮಾನವ ಸಂಪತ್ತು ಭವಿಷ್ಯಕ್ಕೆ ಸಿದ್ಧವಾಗಿರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಸಾಕ್ಷರತೆ, ಆರ್ಥಿಕ ಅರಿವು ಮತ್ತು ವಿಮರ್ಶಾತ್ಮಕ ಚಿಂತನೆಗೆ ಆದ್ಯತೆ ನೀಡಬೇಕು. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಜಾಗತಿಕ ಬೇಡಿಕೆಗಳಿಗೆ ಹೊಂದಿಕೊಳ್ಳಬೇಕು. ಆಡಳಿತದಲ್ಲಿಯೂ ಸ್ಟಾರ್ಟ್ ಅಪ್ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಪೈಲಟ್ ಯೋಜನೆಗಳು, ತ್ವರಿತ ಪ್ರತಿಕ್ರಿಯೆ ಮತ್ತು ವಿಸ್ತರಣೆ ಸಾಮಥ್ರ್ಯವು ಸಾಮಾನ್ಯವಾಗಬೇಕು ಎಂದು ಸ್ಪೀಕರ್ ಹೇಳಿದರು.

ನಮ್ಮ ಗುರಿ ಕೇವಲ ಅಭಿವೃದ್ಧಿಯಲ್ಲ, ನಾಯಕತ್ವ. 2047ರೊಳಗೆ ಭಾರತವು ಜಗತ್ತಿನ ಮಾದರಿಗಳನ್ನು ಅನುಸರಿಸುವ ದೇಶವಲ್ಲ, ಹೊಸ ಮಾದರಿಗಳನ್ನು ಸೃಷ್ಟಿಸುವ ರಾಷ್ಟ್ರವಾಗಬೇಕು. ಇದಕ್ಕಾಗಿ ವಯಸ್ಸಿನಲ್ಲಿ ಯುವಕರಾಗಿರಲಿ ಅಥವಾ ಚಿಂತನೆಗಳಲ್ಲಿ ಯುವಕರಾಗಿರಲಿ, ಶಾಸಕರು ಧೈರ್ಯ, ಸಾಮಥ್ರ್ಯ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ಮುಂದಾಳತ್ವ ವಹಿಸಬೇಕು ಎಂದರು. 

ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಛತ್ತೀಸ್ ಗಢ, ಹರಿಯಾಣ, ಕರ್ನಾಟಕ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಅಧ್ಯಕ್ಷರು, ಗೋವಾದ ಕೇಂದ್ರ ಸಚಿವರು, ಸಂಸದರು ಹಾಗೂ ವಿವಿಧ ರಾಜ್ಯಗಳ ಶಾಸಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಎರಡು ದಿನಗಳ ಈ ಸಮ್ಮೇಳನದಲ್ಲಿ 2047ರೊಳಗೆ ಅಭಿವೃದ್ಧಿಶೀಲ ಭಾರತ ನಿರ್ಮಾಣದಲ್ಲಿ ಯುವ ಶಾಸಕರ ಪಾತ್ರ ಮತ್ತು ವಲಯ-7 ರಾಜ್ಯಗಳ ವ್ಯಾಪಾರ, ಪ್ರವಾಸೋದ್ಯಮ, ನಗರೀಕರಣ, ಪರಿಸರ ಹಾಗೂ ಕರಾವಳಿ ಸಂಪರ್ಕತೆ ಎಂಬ ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.

ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೋವಾ ರಾಜ್ಯಪಾಲ ಪುಸಪಾಟಿ ಅಶೋಕ್ ಗಜಪತಿ ರಾಜು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಮೊದಲಾದ ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಗೋವಾ : ಪಾರ್ಲಿಮೆಂಟರಿ ಎಸೋಸಿಯೇಶನ್ ಸಮ್ಮೇಳನದಲ್ಲಿ ಕರ್ನಾಟಕ ಸ್ಪೀಕರ್ ಡಾ. ಯು.ಟಿ. ಖಾದರ್ ಭಾಷಣ Rating: 5 Reviewed By: karavali Times
Scroll to Top