ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಫ್ಲೈ ಓವರ್ ಬದಿಯ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕ ಪಡೆಯುವ ಹಂತದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ಲಾಣದ ಮುಂಭಾಗದಲ್ಲಿ ಹೆದ್ದಾರಿ ರಸ್ತೆಯು ತೀವ್ರ ಅವ್ಯವಸ್ಥೆಯಿಂದ ಕೂಡಿದ್ದು, ವಾಹನ ಸವಾರರ ಪಾಲಿಗೆ ಅಪಾಯವನ್ನು ತಂದೊಡ್ಡುವ ರೀತಿಯಲ್ಲಿದೆ. ಸರ್ವಿಸ್ ರಸ್ತೆ ಹಾಗೂ ಹೆದ್ದಾರಿಯ ಜೋಡಣೆಯ ತುದಿಗಳು ಏರುಪೇರಾಗಿದ್ದು, ದ್ವಿಚಕ್ರ ವಾಹನ ಸಹಿತ ಲಘು ವಾಹನ ಸವಾರರು ಆಯತಪ್ಪುವ ಸಂಧಿಗ್ದ ಪರಿಸ್ಥಿತಿಗಳು ಹೆಚ್ಚಾಗಿ ಕಂಡು ಬರುತ್ತಿದೆ. ರಾತ್ರಿ ವೇಳೆ ಇಲ್ಲಿನ ರಸ್ತೆ ಅವ್ಯವಸ್ಥೆಯಿಂದಾಗಿ ದ್ವಿಚಕ್ರ ವಾಹನ ಸವಾರರು ನಿತ್ಯ ರಸ್ತೆಯಲ್ಲಿ ಬಿದ್ದು ಏಳುತ್ತಿರುವ ದೃಶ್ಯಗಳೂ ಕಂಡು ಬರುತ್ತಿದೆ. ಗಂಭೀರ ಅಪಘಾತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಂಡು ಇಲ್ಲಿನ ರಸ್ತೆ ಅವ್ಯವಸ್ಥೆಗೆ ಸೂಕ್ತ ಕಾಯಕಲ್ಪ ಒದಗಿಸಿಕೊಡಬೇಕು. ಅಲ್ಲದೆ ಇದೇ ರಸ್ತೆಯ ಒದಷ್ಟು ಮುಂದಕ್ಕೆ ಟೆಕ್ಸ್ ಟೈಲ್ಸ್ ಅಂಗಡಿಯೊಂದರ ಮುಂಭಾಗದಲ್ಲಿ ಚರಂಡಿ ಸ್ಲ್ಯಾಬ್‍ಗಳು ಎದ್ದು ಹೋಗಿದ್ದು, ಅದನ್ನು ಹೆದ್ದಾರಿ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಸಮರ್ಪಕವಾಗಿ ಜೋಡಿಸದೆ ಹಾಗೇ ಬಿಟ್ಟು ಬಿಡಲಾಗಿದೆ. ಇದೂ ಕೂಡಾ ವಾಹನ ಸವಾರರು ಹಾಗೂ ಪಾದಚಾರಿಗಳ ಪಾಲಿಗೆ ಗಂಭೀರ ಅಪಾಯವನ್ನು ಆಹ್ವಾನಿಸುವಂತಿದೆ. ಇಲ್ಲಿನ ರಸ್ತೆಯ ಎಲ್ಲಾ ಅವ್ಯವಸ್ಥೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಜನರಿಗೆ ಅಪಾಯದಿಂದ ರಕ್ಷಣೆ ಒದಗಿಸುವಂತೆ ಪಟ್ಟಣ ವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
7 April 2026
- Blogger Comments
- Facebook Comments
Subscribe to:
Post Comments (Atom)




















0 comments:
Post a Comment