ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ತಾಲೂಕಿನ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಅಮ್ಟೂರು ಗ್ರಾಮದ ಕೆದಿಲ-ಕೇಶವ ನಗರ ರಸ್ತೆಯು ಕಿಲೋ ಮೀಟರ್ ಉದ್ದಕ್ಕೆ ತೀವ್ರ ಹದಗೆಟ್ಟಿದ್ದು, ವಾಹನ-ಜನ ಸಂಚಾರ ದುಸ್ತರವಾಗಿದೆ. ಇಲ್ಲಿನ ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ನಾಗರಿಕರು ಸಂಬಂಧಪಟ್ಟ ಪಂಚಾಯತ್ ಸಹಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗಕ್ಕೆ ಆಗ್ರಹಿಸಿದ್ದರೂ ಸ್ಪಂದನೆ ಮಾತ್ರ ಶೂನ್ಯ ಎನ್ನುತ್ತಾರೆ ಸ್ಥಳೀಯರು. ಈ ರಸ್ತೆಯ ಹಿಂದೆ ಹಾಗೂ ಮುಂದಿನ ಭಾಗದಲ್ಲಿ ಈಗಾಗಲೇ ಕಾಂಕ್ರಿಟೀಕರಣಗೊಂಡಿದ್ದು, ಮಧ್ಯದ ಒಂದು ಭಾಗ ಕೇಶವ ನಗರದಲ್ಲಿ ಮಾತ್ರ ಕಳೆದ ಹಲವು ವರ್ಷಗಳಿಂದ ನಾದುರಸ್ತಿಯಲ್ಲಿದೆ. ಮಳೆಗಾಲದಂತೂ ಈ ರಸ್ತೆಯು ಗುಂಡಿಗಳಲ್ಲಿ ಮಳೆ ನೀರು ನಿಂತು ರಸ್ತೆಯ ಹೊಂಡ-ಗುಂಡಿಗಳು ಗಮನಕ್ಕೆ ಬಾರದೆ ವಾಹನ ಸವಾರರು ತೀವ್ರ ಅಪಾಯವನ್ನು ಎದುರಿಸುತ್ತಿದ್ದಾರೆ.
ಈ ರಸ್ತೆ ಸುರಿಬೈಲು-ಬೋಳಂತೂರು ಮಾರ್ಗವಾಗಿ ಕಲ್ಲಡ್ಕ ಪೇಟೆಯನ್ನು ಸಂಪರ್ಕಿಸುತ್ತಿದ್ದು, ಇಲ್ಲಿನ ಗ್ರಾಮೀಣ ಪ್ರದೇಶದ ಜನ ಪ್ರತಿಯೊಂದು ವಹಿವಾಟಿಗೂ ಕಲ್ಲಡ್ಕ ಪೇಟೆಯನ್ನೇ ಆಶ್ರಯಿಸಿಕೊಂಡಿದ್ದಾರೆ. ಗ್ರಾಮದ ಜನ ಕಲ್ಲಡ್ಕ ಪೇಟೆ ಸಂಪರ್ಕಿಸಲು ಇರುವ ಅವಶ್ಯ ರಸ್ತೆಯಾಗಿರುವ ಈ ಅಮ್ಟೂರು-ಕೇಶವ ನಗರ ರಸ್ತೆಯನ್ನು ಸೂಕ್ತ ರೀತಿಯಲ್ಲಿ ದುರಸ್ತಿ ಮಾಡಿ ಇಲ್ಲಿನ ಜನರ ಹಿತ ಕಾಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಮತ್ತೆ ಗ್ರಾಮ ಪಂಚಾಯತ್ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿದ್ದು, ಮತ ಯಾಚಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನೆ ಬಾಗಿಲಿಗೆ ಬರುವುದಕ್ಕಿಂತ ಮುಂಚಿತವಾಗಿ ಗ್ರಾಮದ ಜನರ ಮೂಲಭೂತ ಅವಶ್ಯಕತೆಯಾಗಿರುವ ರಸ್ತೆಯ ಬಗ್ಗೆ ಗಮನ ಹರಿಸುವಂತೆಯೂ ಇಲ್ಲಿನ ಗ್ರಾಮದ ಜನ ಸಂಬಂಧಪಟ್ಟವರಿಗೆ ಟಾಸ್ಕ್ ನೀಡಿದ್ದಾರೆ.






















0 comments:
Post a Comment