ಒಣಗಿ ಸೊರಗಿದ ಕದ್ರಿ ವಾಟರ್ ಪಾರ್ಕ್ : ಪ್ರವೇಶಕ್ಕೆ ಶುಲ್ಕ ವಿಧಿಸಲಾಗಿದ್ದರೂ ಒಳಗೆ ಮಾತ್ರ ಎಲ್ಲವೂ ಶೂನ್ಯ - Karavali Times ಒಣಗಿ ಸೊರಗಿದ ಕದ್ರಿ ವಾಟರ್ ಪಾರ್ಕ್ : ಪ್ರವೇಶಕ್ಕೆ ಶುಲ್ಕ ವಿಧಿಸಲಾಗಿದ್ದರೂ ಒಳಗೆ ಮಾತ್ರ ಎಲ್ಲವೂ ಶೂನ್ಯ - Karavali Times

728x90

7 April 2026

ಒಣಗಿ ಸೊರಗಿದ ಕದ್ರಿ ವಾಟರ್ ಪಾರ್ಕ್ : ಪ್ರವೇಶಕ್ಕೆ ಶುಲ್ಕ ವಿಧಿಸಲಾಗಿದ್ದರೂ ಒಳಗೆ ಮಾತ್ರ ಎಲ್ಲವೂ ಶೂನ್ಯ

ಮಂಗಳೂರು, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ನಗರದ ಕದ್ರಿ ಸಾರ್ವಜನಿಕ ಉದ್ಯಾವನದ ಮುಂಭಾಗದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ನಿರ್ಮಿಸಲಾಗಿದ್ದ ವಾಟರ್ ಪಾರ್ಕ್ ಇದೀಗ ನೀರಿಲ್ಲದೆ, ಸೌಂದರ್ಯ ಇಲ್ಲದೆ ಒಣಗಿ ಸೊರಗಿ ಹೋಗಿದ್ದು, ಪ್ರವಾಸಿಗರ ಪಾಲಿಗೆ ಅತೀವ ನಿರಾಸೆಯನ್ನುಂಟು ಮಾಡುತ್ತಿದೆ. ರಾಜ್ಯ ಸರಕಾರದ ತೋಟಗಾರಿಕಾ ಇಲಾಖೆ ವತಿಯಿಂದ ಈ ವಾಟರ್ ಪಾರ್ಕ್ ಕಳೆದ ಕೆಲ ವರ್ಷಗಳ ಹಿಂದೆ ಆರಂಭಿಸಲಾಗಿದ್ದು, ಇದು ಪ್ರವಾಸಿಗರ ಕಣ್ಮನ ಸೆಳೆದಿತ್ತು. ವಿದ್ಯುದ್ದೀಪಾಲಂಕಾರಗಳಿಂದ ಇಲ್ಲಿ ಕಲರ್ ಫುಲ್ ನೀರಿನ ಕಾರಂಜಿಗಳನ್ನು ಅಳವಡಿಸಲಾಗಿ ಪ್ರವಾಸಿಗರ ಮನಸ್ಸಿಗೆ ಬಹಳಷ್ಟು ಮುದ ನೀಡುವಂತಿತ್ತು. 

ಆದರೆ ಇದೀಗ ತೀರಾ ಇತ್ತೀಚೆಗಿನ ದಿನಗಳಲ್ಲಿ ಈ ನೀರಿನ ಪಾರ್ಕ್ ನೀರೂ ಇಲ್ಲದೆ, ವಿದ್ಯುದೀಪಾಲಂಕಾರವೂ ಇಲ್ಲದೆ ಕಳೆ ಗಿಡಗಳು ತುಂಬಿ ಒಣಗಿ ಸೊರಗಿ ಹೋಗಿದೆ. ಪಾರ್ಕ್ ಸಂಪೂರ್ಣ ಒಣಗಿ ಸೊರಗಿ ಹೋಗಿದ್ದರೂ ಒಳ ಪ್ರವೇಶಿಸಲು ಇರುವ ಪ್ರವೇಶ ಶುಲ್ಕದ ನಾಮಫಲಕ ಮಾತ್ರ ಕ್ರಮಬದ್ದವಾಗಿ ಅಳವಡಿಸಿರುವುದು ಕಂಡು ಬಂದಿದೆ. ಕೇವಲ ಒಳಗೆ ಪ್ರವೇಶಿಸಲು ವಯಸ್ಕರಿಗೆ 10 ರೂಪಾಯಿ ಹಾಗೂ ಮಕ್ಕಳಿಗೆ 5 ರೂಪಾಯಿ ಶುಲ್ಕ ವಿಧಿಸಲಾಗಿದ್ದು, ಇನ್ನು ಫೋಟೋಗ್ರಫಿಗೆ 500 ರೂಪಾಯಿ ಹಾಗೂ ವೀಡಿಯೋಗ್ರಫಿಗೆ ಬರೋಬ್ಬರಿ 5 ಸಾವಿರ ರೂಪಾಯಿಗಳ ಶುಲ್ಕ ವಿಧಿಸಿ ನಾಮಪಲಕದಲ್ಲಿ ನಮೂದಿಸಲಾಗಿದೆ. ಇದೇ ಪಾರ್ಕಿನ ಮುಂಭಾಗದಲ್ಲಿರುವ ಉಚಿತ ಪ್ರವೇಶದ ಪಾರ್ಕಿನಲ್ಲಿ ಸಕಲ ವ್ಯವಸ್ಥೆಗಳೂ ಮೇಳೈಸಿದೆ. ಮಕ್ಕಳ ಆಟಕ್ಕೆ ಹಾಗೂ ಮನೋರಂಜನೆಗೆ ಬೇಕಾದ ಸಕಲ ವ್ಯವಸ್ಥೆಗಳು, ವಯಸ್ಕರ ವ್ಯಾಯಾಮಕ್ಕೆ ಬೇಕಾಗಿರುವ ವ್ಯವಸ್ಥೆಗಳು, ಪಾರ್ಕ್ ಸುತ್ತಲೂ ಸುತ್ತಾಡಿ ಬರಲು ಇಲೆಕ್ಟ್ರಿಕಲ್ ರೈಲಿನ ವ್ಯವಸ್ಥೆ ಸಹಿತ ಎಲ್ಲ ರೀತಿಯ ವ್ಯವಸ್ಥೆಗಳು ಇಲ್ಲಿದ್ದರೂ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಇದರಿಂದಾಗಿ ಇಲ್ಲಿಗೆ ನಿತ್ಯವೂ ನೂರಾರು ಸಂಖ್ಯೆಯ ಜನ ಮನೋ ಉಲ್ಲಾಸಕ್ಕಾಗಿ, ವ್ಯಾಯಾಮಕ್ಕಾಗಿ ಈ ಪಾರ್ಕನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ತೋಟಗಾರಿಕಾ ಇಲಾಖೆಯ ವಾಟರ್ ಪಾರ್ಕಿಗೆ ಮಾತ್ರ ಕೇಳುವ ಸ್ಥಿತಿ ಇಲ್ಲದಂತಾಗಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಇಲ್ಲಿನ ಸಿಬ್ಬಂದಿಗಳಲ್ಲಿ ಪ್ರಶ್ನಿಸಿದರೆ ಇಲ್ಲಿನ ವ್ಯವಸ್ಥೆಗಳ ದರುಸ್ತಿಗೆ ಭಾರೀ ದುಬಾರಿ ಮೊತ್ತದ ಅವಶ್ಯಕತೆ ಇದ್ದು ಅದಕ್ಕಾಗಿ ಇದರ ದುರಸ್ತಿ ವಿಳಂಬ ಆಗುತ್ತಿದೆ ಎನ್ನುವ ಉತ್ತರ ದೊರೆಯುತ್ತಿದೆ. 

ಸ್ಮಾರ್ಟ್ ಸಿಟಿಯಾಗಿ ಅಭಿವೃದ್ದಿ ಹೊಂದುತ್ತಿರುವ ಮಂಗಳೂರಿನಲ್ಲಿರುವ ಇರುವ ಈ ವಾಟರ್ ಪಾರ್ಕನ್ನು ಸಮಪರ್ಕವಾಗಿ ನಿರ್ವಹಣೆ ಮಾಡುವ ಮೂಲಕ ಜನರ ಮನೋ ಉಲ್ಲಾಸಕ್ಕಾಗಿ ಇವುಗಳನ್ನು ಮತ್ತೆ ದುರಸ್ತಿ ಪಡಿಸಿ ಕನಿಷ್ಠ ಶುಲ್ಕದಲ್ಲಿ ಜನರಿಗೆ ಅರ್ಪಿಸುವಂತೆ ನಗರವಾಸಿಗಳು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಒಣಗಿ ಸೊರಗಿದ ಕದ್ರಿ ವಾಟರ್ ಪಾರ್ಕ್ : ಪ್ರವೇಶಕ್ಕೆ ಶುಲ್ಕ ವಿಧಿಸಲಾಗಿದ್ದರೂ ಒಳಗೆ ಮಾತ್ರ ಎಲ್ಲವೂ ಶೂನ್ಯ Rating: 5 Reviewed By: karavali Times
Scroll to Top