ಬಂಟ್ವಾಳ, ಎಪ್ರಿಲ್ 12, 2026 (ಕರಾವಳಿ ಟೈಮ್ಸ್) : ನೇರಳಕಟ್ಟೆ ಸಹಕಾರಿ ಸಂಘದ ಸಿಬ್ಬಂದಿ ಮಹಿಳೆಗೆ ಕರ್ತವ್ಯ ನಿರ್ವಹಿಸಬಾರದು ಎಂದು ತಿಳಿಸಿದ್ದಲ್ಲದೆ ಅವರನ್ನು ಕೈಯಿಂದ ತಳ್ಳಿ ಜಾತಿ ನಿಂದನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಂಘದ ಪ್ರಭಾರ ವ್ಯವಸ್ಥಾಪಕರ ಹಾಗೂ ಪದಾಧಿಕಾರಿಗಳ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಟ್ಲಮುಡ್ನೂರು ನಿವಾಸಿ ಸೇಸಮ್ಮ (47) ಅವರು ಪರಿಶಿಷ್ಠ ಜಾತಿಗೆ ಸೇರಿದವರಾಗಿದ್ದು, ನೇರಳಕಟ್ಟೆಯಲ್ಲಿರುವ ಸಹಕಾರ ಸಂಘದ ಸಿಬ್ಬಂದಿಯಾಗಿದ್ದಾರೆ. ಎಪ್ರಿಲ್ 2 ರಂದು ಇವರು ಸಂಘದಲ್ಲಿ ಕರ್ತವ್ಯದಲ್ಲಿದ್ದಾಗ, ಶಾಖೆಯ ಪ್ರಭಾರ ವ್ಯವಸ್ಥಾಪಕ ಆರೋಪಿ ಯತೀಶ್ ಡಿ ಗೌಡ ಎಂಬವರು ಬಂದು ಏಕಾಏಕಿ ಮಹಿಳೆಗೆ ಕರ್ತವ್ಯ ನಿರ್ವಹಿಸಬಾರದು ಎಂದು ತಿಳಿಸಿದ್ದು, ಅದಕ್ಕೆ ಮಹಿಳೆ ಆಕ್ಷೇಪಿಸಿದಾಗ, ಆರೋಪಿಯು ಅವರನ್ನು ಕೈಯಿಂದ ತಳ್ಳಿ ಜಾತಿ ನಿಂದನೆ ಮಾಡಿರುತ್ತಾನೆ.
ಬಳಿಕ ಎಪ್ರಿಲ್ 7 ರಂದು ಬೆಳಿಗ್ಗೆ, ಸೇಸಮ್ಮ ಅವರು ಪುನಃ ಕರ್ತವ್ಯಕ್ಕೆ ಹಾಜರಾದಾಗ ಆರೋಪಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಇದರಿಂದ ಸೇಸಮ್ಮ ಅವರು ಮನನೊಂದು ಅಸ್ವಸ್ಥಳಾಗಿ ಕಚೇರಿಯಲ್ಲಿ ಬಿದ್ದಿದ್ದಾರೆ. ಅವರನ್ನು ಕಚೇರಿಯ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಸದ್ರಿ ಸಂಘದ ಪದಾಧಿಕಾರಿಗಳಾದ ಯಶೋಧ, ಪುಷ್ಪರಾಜ್ ಚೌಟ ಹಾಗೂ ಯತೀಶ್ ಡಿ ಗೌಡ ಎಂಬವರ ವಿರುದ್ಧ ಸೇಸಮ್ಮ ಅವರು ಎಪ್ರಿಲ್ 11 ರಂದು ನೀಡಿದ ದೂರಿನ ಮೇರೆಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2026 ಕಲಂ 74, 49 ಬಿ ಎನ್ ಎಸ್-2023 ಮತ್ತು ಕಲಂ 3(1) (ಆರ್) (ಎಸ್), 3(2)(ವಿಎ) ದಿ ಎಸ್ ಟಿ ಆಂಡ್ ಎಸ್ ಟಿ (ಪ್ರಿವೆನ್ಷನ್ ಆಫ್ ಅಟ್ರೋಸಿಟೀಸ್) ಎಮೆಂಡ್ ಮೆಂಟ್ ಆಕ್ಟ್ 2015 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


















0 comments:
Post a Comment