ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಬಂಟ್ವಾಳ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ನೂತನ ರೈಲ್ವೆ ನಿಲ್ದಾಣದ ಅಧಿಕೃತ ಉದ್ಘಾಟನೆ ನಡೆಯಲಿದೆ. ಸುಸಜ್ಜಿತವಾಗಿ ಮೇಲ್ದರ್ಜೆಗೇರಿ ಪುನರ್ ನಿರ್ಮಾಣಗೊಳ್ಳುತ್ತಿರುವ ಬಿ ಸಿ ರೋಡಿನ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ 2 ಫ್ಲ್ಯಾಟ್ ಫಾರಂ, ಪ್ರಯಾಣಿಕರಿಗೆ ಫ್ಲ್ಯಾಟ್ ಫಾರಂ ದಾಟಲು ಲಿಫ್ಟ್ ಹಾಗೂ ಫೂಟ್ ಓವರ್ ಬ್ರಿಡ್ಜ್, ವಿಶಾಲ ಪ್ರಯಾಣಿಕರ ಆಸನದ ವ್ಯವಸ್ಥೆ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ, ಉಪಾಹಾರಗೃಹ, ಶೌಚಾಲಯ, ವಿಶ್ರಾಂತಿ ಕೊಠಡಿ ಸಹಿತ ಎಲ್ಲ ಆಧುನಿಕ ವ್ಯವಸ್ಥೆಗಳನ್ನೂ ಒಳಗೊಂಡು ಹೈಟೆಕ್ ಆಗಿ ರೂಪುಗೊಂಡಿದೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿಶೇಷ ಮುತುವರ್ಜಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ಬಂಟ್ವಾಳ ರೈಲ್ವೆ ನಿಲ್ದಾಣ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಸೌತ್ ವೆಸ್ಟರ್ನ್ ರೈಲ್ವೆ (ಎಸ್ ಡಬ್ಲ್ಯು ಆರ್) ಮೈಸೂರು ವಿಭಾಗದ ಅಧೀನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ರೈಲ್ವೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನೇತೃತ್ವದಲ್ಲಿ ಕಾರ್ಮಿಕರು ಹಗಲು-ರಾತ್ರಿ ಕೆಲಸ ನಿರ್ವಹಿಸುವ ಮೂಲಕ ಇದೀಗ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಂಟ್ವಾಳದ ಹೈಟೆಕ್ ರೈಲ್ವೆ ನಿಲ್ದಾಣ ಜನರಿಗೆ ಅರ್ಪಣೆ ಆಗಲಿದೆ.
ಈ ಮಧ್ಯೆ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಇನ್ನೂ ಕೂಡಾ ಬೆಳಕಿನ ಕೊರೆತ ಇದ್ದು, ಇಲ್ಲಿನ ವಿದ್ಯುತ್ ದೀಪ ಉರಿಯದೆ ಕತ್ತಲಾವರಿಸಿದೆ. ರೈಲ್ವೆ ನಿಲ್ದಾಣಕ್ಕೆ ಪ್ರವೇಶ ಪಡೆಯುವ ಸ್ಥಳದಲ್ಲಿ ನಿತ್ಯವೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರ ಪಾಲಿಗೆ ಅಪಾಯ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಕಂಬಗಳಲ್ಲಿ ಅಳವಡಿಸಲಾಗಿರುವ ವಿದ್ಯುತ್ ದೀಪಗಳನ್ನು ತಕ್ಷಣ ಆನ್ ಮಾಡಿ ಉರಿಯುವಂತೆ ಮಾಡಿ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಮಾಡುವಂತೆ ಜನ ಆಗ್ರಹಿಸಿದ್ದಾರೆ.
























0 comments:
Post a Comment