ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಯಾಗಿರುವ ಪಾಣೆಮಂಗಳೂರು ಪೇಟೆಯಲ್ಲಿ ಪುರಸಭಾ ನಿಧಿಯಿಂದ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ ಇನ್ನೂ ಉದ್ಘಾಟನಾ ಭಾಗ್ಯ ಒದಗಿ ಬರದೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿಯಲ್ಲೇ ಇದರ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ಮನಸ್ಸು ತೋರದ ಪರಿಣಾಮ ಉದ್ಘಾಟನೆಗೊಳ್ಳದೆ ಪ್ರತಿನಿಧಿಗಳ ಆಡಳಿತ ಕೊನೆಗೊಂಡಿದೆ. ಬಳಿಕ ಆಡಳಿತಾಧಿಕಾರಿ ನೇಮಕಗೊಂಡರೂ ಇಲ್ಲಿನ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆಗೊಳಿಸಲು ಸಾಧ್ಯವಾಗಿಲ್ಲ.
ಪುರಸಭಾ ನಿಧಿಯಿಂದ ಸುಸಜ್ಜಿತವಾಗಿ ಪಾಣೆಮಂಗಳೂರು ಪೇಟೆಯ ಸೂಕ್ತ ಪ್ರದೇಶದಲ್ಲಿ ಈ ಶೌಚಾಲಯ ನಿರ್ಮಾಣಗೊಂಡು ಉದ್ಘಾಟನೆಗೆ ಸಕಲ ರೀತಿಯಲ್ಲು ಸಜ್ಜುಗೊಂಡಿದ್ದರೂ ಇನ್ನೂ ಲೋಕಾರ್ಪಣಾ ಭಾಗ್ಯ ಕಾಣದೆ ಹಾಗೇ ಉಳಿದುಕೊಂಡಿದೆ. ಪಾಣೆಮಂಗಳೂರು ಪೇಟೆಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಎಲ್ಲಿಯೂ ಸಮರ್ಪಕ ಶೌಚಾಲಯ ಇಲ್ಲದೆ ಇದ್ದು, ಇದೇ ನೂತನ ಶೌಚಾಲಯ ಉದ್ಘಾಟನೆಯನ್ನು ಜನ ಎದುರು ನೋಡುತ್ತಿದ್ದಾರೆ. ಇದೀಗ ಪುರಸಭೆಗೆ ಪೂರ್ಣಕಾಲಿಕ ನೂತನ ಮುಖ್ಯಾಧಿಕಾರಿ ನೇಮಕೊಂಡಿದ್ದು, ಪುರಸಭೆಯ ವ್ಯವಸ್ಥೆಗಳು ಸುಲಲಿತವಾಗಿ ನೆರವೇರುತ್ತಿರುವುದರಿಂದ ನೂತನ ಮುಖ್ಯಾಧಿಕಾರಿಗಳು ಇಲ್ಲಿನ ಶೌಚಾಲಯಕ್ಕೆ ಉದ್ಘಾಟನಾ ಭಾಗ್ಯ ಕಲ್ಪಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸುವರೇ ಎಂದು ಪೇಟೆಯ ನಾಗರಿಕರು ಎದುರು ನೋಡುತ್ತಿದ್ದಾರೆ.



















0 comments:
Post a Comment