ಬಿ.ಸಿ.ರೋಡು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಂದ್ ಆಗಿದ್ದ ಪಾರ್ಕಿಂಗ್ ಸ್ಥಳ ಓಪನ್ : ಕರಾವಳಿ ಟೈಮ್ಸ್ ವರದಿ ಫಲಶ್ರುತಿ - Karavali Times ಬಿ.ಸಿ.ರೋಡು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಂದ್ ಆಗಿದ್ದ ಪಾರ್ಕಿಂಗ್ ಸ್ಥಳ ಓಪನ್ : ಕರಾವಳಿ ಟೈಮ್ಸ್ ವರದಿ ಫಲಶ್ರುತಿ - Karavali Times

728x90

7 April 2026

ಬಿ.ಸಿ.ರೋಡು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಂದ್ ಆಗಿದ್ದ ಪಾರ್ಕಿಂಗ್ ಸ್ಥಳ ಓಪನ್ : ಕರಾವಳಿ ಟೈಮ್ಸ್ ವರದಿ ಫಲಶ್ರುತಿ

ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ಕಳೆದ ಏಳೆಂಟು ವರ್ಷಗಳ ಹಿಂದೆ ಬಹಳಷ್ಟು ಸುಂದರವಾಗಿ ನಿರ್ಮಾಣಗೊಂಡಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗೆ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವ ಬಗ್ಗೆ ಕರಾವಳಿ ಟೈಮ್ಸ್ ಫೆಬ್ರವರಿ 20 ರ ಸಂಚಿಕೆಯಲ್ಲಿ ಸಮಗ್ರ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡ ಅಧಿಕಾರಿಗಳು ಇಲ್ಲಿನ ನಿಲ್ದಾಣದ ತಳ ಅಂತಸ್ತಿನಲ್ಲಿ ಗೇಟು ಹಾಕಿ ಮುಚ್ಚಿದ್ದ ವಾಹನ ನಿಲುಗಡೆ ಪ್ರದೇಶವನ್ನು ತೆರೆದು ಪೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದಾರೆ. 

ಬಸ್ ನಿಲ್ದಾಣದ ತಳ ಅಂತಸ್ತಿನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು, ಇಲ್ಲಿ ವಾಹನ ನಿಲುಗಡೆ ಎಂಬ ನಾಮಫಲಕ ಅಳವಡಿಸಲಾಗಿತ್ತಾದರೂ ಅಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶ ಇಲ್ಲದೆ ಗೇಟು ಹಾಕಿ ಬಂದ್ ಮಾಡಲಾಗಿತ್ತು. ಈ ಬಗ್ಗೆ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು. ಇಲ್ಲಿರುವ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಪೇ ಪಾರ್ಕಿಂಗ್ ಸಹಿತ ನಿಲ್ದಾಣದಲ್ಲಿರುವ ಅಂಗಡಿಗಳನ್ನು ತೆರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಿ ನಿಗಮಕ್ಕೆ ಆದಾಯ ತರುವ ಸಾಕಷ್ಟು ಮಾರ್ಗಗಳಿದ್ದರೂ ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿಗಮ ನಷ್ಟ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಿ ಮೇಲಧಿಕಾರಿಗಳ ಗಮನ ಸೆಳೆದಿತ್ತು. 

ಪತ್ರಿಕಾ ವರದಿಯ ಪರಿಣಾಮವಾಗಿ ಇದೀಗ ಬಿ ಸಿ ರೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ತಳ ಅಂತಸ್ತಿನಲ್ಲಿರುವ ವಾಹನ ನಿಲುಗಡೆ ಪ್ರದೇಶವನ್ನು ಪೇ ಪಾರ್ಕಿಂಗ್ ಆಗಿ ಸಾರ್ವಜನಿಕರಿಗೆ ತೆರೆಯಲಾಗಿದ್ದು, ವಾಹನ ಸುರಕ್ಷತೆ ಕಾಯ್ದುಕೊಳ್ಳಲು ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಇದರಿಂದ ಬಸ್ ನಿಲ್ದಾಣದ ಗೇಟಿನ ಮುಂಭಾಗ ಬೇಕಾಬಿಟ್ಟಿ ನಿಲುಗಡೆ ಮಾಡುವ ವಾಹನಗಳಿಗೂ ಬ್ರೇಕ್ ಬಿದ್ದಂತಾಗಿದೆ. ಅಲ್ಲದೆ ಇಲ್ಲಿ ವಾಹನ ನಿಲುಗಡೆಗೆ ಇರುವ ಶುಲ್ಕವೂ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು ಯಾವುದೇ ರೀತಿಯಲ್ಲಿ ವಾಹನ ಸವಾರರಿಗೆ ಹೊರೆಯಾಗದಂತಿದೆ. ನಾಲ್ಕು ಚಕ್ರದ ವಾಹನಗಳಿಗೆ ಕೇವಲ 20 ರೂಪಾಯಿ ಹಾಗೂ ದ್ವಿಚಕ್ರ ವಾಹನಗಳಿಗೆ ಕೇವಲ 10 ರೂಪಾಯಿ ಶುಲ್ಕ ಮಾತ್ರ ನಿಗದಿಪಡಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಇದಕ್ಕೆ ಸಮಯ ಮಿತಿ ನಿಗದಿಪಡಿಸಲಾಗಿದೆ. ರಾತ್ರಿ 10 ಗಂಟೆಗೆ ಪಾರ್ಕಿಂಗ್ ಬಂದ್ ಆಗಲಿದ್ದು, ಆ ಬಳಿಕ ವಾಹನ ಪಡೆಯಲು ಅವಕಾಶ ಇಲ್ಲ. ವಾಹನ ನಿಲ್ಲಿಸಿ ಹೋಗಿ ರಾತ್ರಿ 10 ಗಂಟೆವರೆಗೂ ಬರಲು ಸಾಧ್ಯವಾಗದವರು ಮರು ದಿನ ಎರಡು ದಿನಗಳ ಶುಲ್ಕ ಪಾವತಿಸಿ ವಾಹನ ಪಡೆದುಕೊಂಡು ಹೋಗಲು ಅವಕಾಶ ಕಲ್ಪಿಸಿ ನಾಮಫಲಕ ಅಳವಡಿಸಲಾಗಿದೆ. 

ಇದರಿಂದ ಬಿ ಸಿ ರೋಡಿನಲ್ಲಿ ಎಲ್ಲೆಂದರಲ್ಲಿ ರಾಜ ರಸ್ತೆಗಳಲ್ಲಿ ಅಥವಾ ನೋ ಪಾರ್ಕಿಂಗ್ ಏರಿಯಾಗಳಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿ ಅಗತ್ಯ ಕಾರ್ಯಗಳಿಗೆ ಇತರ ಊರುಗಳಿಗೆ ತೆರಳುವ ಸಾರ್ವಜನಿಕರು ಇಲ್ಲಿನ ಸುರಕ್ಷಿತ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬಹುದು. 

ಇಲ್ಲಿನ ಬಸ್ ನಿಲ್ದಾಣಕ್ಕೆ ಮಂಗಳೂರಿನಿಂದ ಬರುವ ಬಸ್ಸುಗಳು ಪ್ರವೇಶ ಪಡೆಯದೆ ನೇರವಾಗಿ ಬಿ ಸಿ ರೋಡು ಜಂಕ್ಷನ್ನಿನಲ್ಲಿ ಹೆದ್ದಾರಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗುತ್ತಿದೆ. ಮಂಗಳೂರಿನ ಬಸ್ಸುಗಳನ್ನು ಕೂಡಾ ಬಸ್ ನಿಲ್ದಾಣಕ್ಕೆ ಪ್ರವೇಶ ಪಡೆಯುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದೇ ಆದಲ್ಲಿ ಬಸ್ ನಿಲ್ದಾಣ ಮತ್ತಷ್ಟು ಜೀವಂತಿಕೆ ಪಡೆದು ಇಲ್ಲಿನ ಅಂಗಡಿ ಮುಂಗಟ್ಟು ಸಹಿತ ವ್ಯಾಪಾರ-ವಹಿವಾಟು ಕೇಂದ್ರಗಳು ಕೂಡಾ ಜೀವಂತಿಕೆ ಪಡೆದು ನಿಗಮ ಖಜಾನೆಗೆ ಇನ್ನಷ್ಟು ಆದಾಯ ಹರಿದು ಬರುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ನಿಗಮದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಂದ್ ಆಗಿದ್ದ ಪಾರ್ಕಿಂಗ್ ಸ್ಥಳ ಓಪನ್ : ಕರಾವಳಿ ಟೈಮ್ಸ್ ವರದಿ ಫಲಶ್ರುತಿ Rating: 5 Reviewed By: karavali Times
Scroll to Top