ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಕ್ರಮಕ್ಕೆ ಸರಕಾರದ ಅಧಿಕೃತ ಮುದ್ರೆ : ಟೆಂಡರ್ ಅವಧಿ ಮುಗಿದ ಸಿಬ್ಬಂದಿ ವಿಲೇವಾರಿಗೆ ಸರಕಾರ ಆದೇಶ - Karavali Times ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಕ್ರಮಕ್ಕೆ ಸರಕಾರದ ಅಧಿಕೃತ ಮುದ್ರೆ : ಟೆಂಡರ್ ಅವಧಿ ಮುಗಿದ ಸಿಬ್ಬಂದಿ ವಿಲೇವಾರಿಗೆ ಸರಕಾರ ಆದೇಶ - Karavali Times

728x90

7 April 2026

ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಕ್ರಮಕ್ಕೆ ಸರಕಾರದ ಅಧಿಕೃತ ಮುದ್ರೆ : ಟೆಂಡರ್ ಅವಧಿ ಮುಗಿದ ಸಿಬ್ಬಂದಿ ವಿಲೇವಾರಿಗೆ ಸರಕಾರ ಆದೇಶ

ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ನೇಮಕಗೊಂಡ ತೀರ್ಥಪ್ರಸಾದ್ ಅವರು ಅಧಿಕಾರ ಸ್ವೀಕರಿಸುತ್ತಲೇ ಟೆಂಡರ್ ಅವಧಿ ಮುಗಿದು ಹಲವು ವರ್ಷಗಳ ಕಾಲ ನಿಯಮ ಬಾಹಿರವಾಗಿ ಪುರಸಭೆಯಲ್ಲಿ ಬೀಡು ಬಿಟ್ಟಿದ್ದ ಹೊರ ಗುತ್ತಿಗೆ ಆಧಾರಿತ ಎಲ್ಲ ಹೆಚ್ಚುವರಿ ಸಿಬ್ಬಂದಿಗಳನ್ನು ಕೆಲಸದಿಂದ ವಿಲೇವಾರಿ ಮಾಡಿ ಸಂಪತ್ತು ಸೋರಿಕೆಗೆ ಕಡಿವಾಣ ಹಾಕಿದ್ದರು. ಇದರಿಂದ ಇಲ್ಲಿನ ಪುರಸಭೆಯ ಕೆಲ ಮಾಜಿ ಸದಸ್ಯರುಗಳ ಕುಮ್ಮಕ್ಕಿನಿಂದ ಪ್ರತಿಭಟನೆ ಮೊದಲಾದ ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದವು. ಆದರೆ ಮುಖ್ಯಾಧಿಕಾರಿ ಯಾವುದೇ ಒತ್ತಡಕ್ಕೂ ಮಣಿಯದೆ ಸರಕಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. 

ಇದೀಗ ಮುಖ್ಯಾಧಿಕಾರಿ ಅವರ ಕ್ರಮವನ್ನು ರಾಜ್ಯ ಸರಕಾರವೇ ಎತ್ತಿ ಹಿಡಿದಿದೆ. ಈ ಸಂಬಂಧ ರಾಜ್ಯ ಸರಕಾರದ ಆರ್ಥಿಕ ಇಲಾಖೆ ಮಾರ್ಚ್ 24 ರಂದು ಆದೇಶವೊಂದನ್ನು ಹೊರಡಿಸಿದೆ. ರಾಜ್ಯದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಲ್ಲಿ ಸರಟೆಂಡರ್/ ಒಪ್ಪಂದ ಅವಧಿ ಪೂರ್ಣಗೊಂಡ ನಂತರ ಹೊರಗುತ್ತಿಗೆ/ ಒಪ್ಪಂದ ಆಧಾರಿತ ಸಿಬ್ಬಂದಿಗಳನ್ನು ವಿಲೇವಾರಿ ಮಾಡುವಂತೆ ಎಲ್ಲಾ ಇಲಾಖಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. 

ರಾಜ್ಯ ಸರಕಾರದ ವಿವಿಧ ಇಲಾಖೆಗಳು, ಅಂಗ ಸಂಸ್ಥೆಗಳಲ್ಲಿ ಟೆಂಡರ್/ ಒಪ್ಪಂದ ನಿಯಮ ಹೊರಗುತ್ತಿಗೆ/ ಒಪ್ಪಂದ ಆಧಾರಿತ ಸಿಬ್ಬಂದಿಗಳನ್ನು ಅವಧಿ ಮೀರಿ ಮುಂದುವರಿಸಲಾಗುತ್ತಿರುವ ಬಗ್ಗೆ ಸರಕಾರದ ಗಮನಕ್ಕೆ ಬಂದಿದ್ದು, ಇದು ಹಣಕಾಸಿನ ಶಿಸ್ತಿಗೆ ವಿರುದ್ದವಾಗಿದ್ದು, ಸರಕಾರದ ನಿಯಮಗಳ ಉಲ್ಲಂಘನೆಯಾಗಿದೆ ಎಂದಿರುವ ಸರಕಾರ ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿದೆ. ಸರಕಾರದ ಆದೇಶದಲ್ಲಿ ಟೆಂಡರ್ ಅವಧಿ ಮುಗಿದ ಸಿಬ್ಬಂದಿಗಳನ್ನು ಯಾವುದೇ ಪೂರ್ವ ಸೂಚನೆ ಅಥವಾ ನೋಟೀಸ್ ನೀಡದೆ ತಕ್ಷಣ ಸೇವೆಯಿಂದ ವಿಲೇವಾರಿ ಮಾಡಬೇಕು ಎಂದು ಸೂಚಿಸಿದೆ. ಅವಧಿ ಮೀರಿ ಸಿಬ್ಬಂದಿ ಕೆಲಸ ನಿರ್ವಹಿಸಿದ್ದಕ್ಕೆ ನೀಡಿದ ಸಂಬಳ ಅನಧಿಕೃತ ಖರ್ಚು ಎಂದು ಪರಿಗಣಿಸಲಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸಂಬಂಧಿತ ಅಧಿಕಾರಿಗಳಿಂದಲೇ ವೈಯುಕ್ತಿಕವಾಗಿ ವಸೂಲಿ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಸದ್ರಿ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಹಾಗೂ ಎಲ್ಲಾ ಇಲಾಖೆಗಳು, ಅಧೀನ ಕಚೇರಿಗಳು, ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಬಂಟ್ವಾಳ ಪುರಸಭೆಯಲ್ಲಿ ಮುಖ್ಯಾಧಿಕಾರಿ ಈ ಆದೇಶವನ್ನು ಆರಂಭದಿಂದಲೇ ಪಾಲಿಸಿಕೊಂಡು ಬಂದಿದ್ದು, ಅನಧಿಕೃತ ಸಿಬ್ಬಂದಿಗಳನ್ನು ವಿಲೇವಾರಿ ಮಾಡಿ ಹೊಸ ಟೆಂಡರ್ ಮೂಲಕ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಂಡಿದ್ದಾರೆ. ಮುಖ್ಯಾಧಿಕಾರಿಗಳ ಈ ಕ್ರಮ ಪುರಸಭೆಗೆ ಲಕ್ಷಾಂತರ ರೂಪಾಯಿಯ ಹಣಕಾಸಿನ ಸೋರಿಕೆಗೆ ತಡೆ ನೀಡಿದೆ. ಈ ಮೂಲಕ ಪುರಸಭೆಗೆ ಪರಿಣಾಮಕಾರಿ ಆದಾಯಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಬಂಟ್ವಾಳ ಪುರಸಭೆಯಲ್ಲಿ ಆರ್ಥಿಕ ಶಿಸ್ತು ಉಂಟಾಗಿದ್ದು, ರಾಜಧನ ಸಂಗ್ರಹದಲ್ಲೂ ಶಿಸ್ತು ಪಾಲನೆ ಆಗುತ್ತಿದೆ. ಪೈಪ್ ಲೈನ್ ಲೀಕೇಜ್ ಹಾಗೂ ದುರಸ್ತಿ ಸಂಬಂಧ ಈ ಹಿಂದೆ ಆಗುತ್ತಿದ್ದ ಲಕ್ಷಾಂತರ ಮೊತ್ತದ ಭಾರ ಕಡಿಮೆ ಆಗಿ ಕೇವಲ ನೂರು-ಸಾವಿರ ರೂಪಾಯಿ ಮೊತ್ತದಲ್ಲಿ ರಿಪೇರಿ ಕಾಮಗಾರಿಗಳು ನಡೆಯುತ್ತಿದೆ. ಜನನ-ಮರಣ ಪ್ರಮಾಣ ಪತ್ರ ವಿಲೇವಾರಿ ಶುಲ್ಕ ಕೂಡಾ ಈ ಹಿಂದೆ ಗುತ್ತಿಗೆ ಆಧಾರಿತ ಸಿಬ್ಬಂದಿ ಮೂಲಕ ಸಂಗ್ರಹ ಆಗುತ್ತಿದ್ದು, ಅದು ಅಂದಂದೇ ಸರಕಾರದ ಖಜಾನೆಗೆ ಪಾವತಿಯಾಗದೆ ತಿಂಗಳಿಗೊಮ್ಮೆ ಪಾವತಿಯಾಗುತ್ತಿತ್ತು ಎನ್ನಲಾಗುತ್ತಿದೆ. ಇದರ ಲೆಕ್ಕಾಚಾರ ಕೂಡಾ ಸಮರ್ಪಕವಾಗಿರಲಿಲ್ಲ ಎನ್ನಲಾಗಿದೆ. ಇದೀಗ ಈ ಮೊತ್ತ ದೈನಂದಿನ ಜಮೆ ಆಗುತ್ತಿದ್ದು, ಸಮಪರ್ಕಕ ಲೆಕ್ಕಾಚಾರ ಸಿಗುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಹಿಂದೆ ಗುತ್ತಿಗೆ ಆಧಾರಿತ ಸಿಬ್ಬಂದಿಯ ಕೈಯಲ್ಲಿ ಸರಕಾರದ ಖಜಾನೆಗೆ ಅಂದೇ ಜಮೆಯಾಗಬೇಕಿದ್ದ ಮೊತ್ತವನ್ನು ಇಟ್ಟುಕೊಳ್ಳಲು ಆದೇಶ ನೀಡಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಪುರವಾಸಿಗಳು ಆಗ್ರಹಿಸುತ್ತಿದ್ದಾರೆ.

ಅದೇ ರೀತಿ ಪುರಸಭಾ ವ್ಯಾಪ್ತಿಯ ನೀರಿನ ಸಮಗ್ರ ನಿರ್ವಹಣೆಯನ್ನು ನಗರ ನೀರು ಸರಬರಾಜು ಮಂಡಳಿಗೆ ವಹಿಸಕೊಡುವಂತೆಯೂ ಜನರ ಆಗ್ರಹ ಕೇಳಿ ಬರುತ್ತಿದೆ. ಪುರಸಭಾ ವ್ಯಾಪ್ತಿಯಲ್ಲಿ ಪೈಪ್ ಲೈನ್ ಅಳವಡಿಸುವ ಕಾರ್ಯವನ್ನು ನೀರು ಸರಬರಾಜು ಮಂಡಳಿ ಕೈಗೆತ್ತಿಕೊಳ್ಳುತ್ತಿದ್ದು, ಇದಕ್ಕೆ ಹಾನಿ ಸಂಭವಿಸಿದಲ್ಲಿ ರಿಪೇರಿ ಮಾಡುವ ಜವಾಬ್ದಾರಿ ಮಾತ್ರ ಪುರಸಭೆಗೆ ವಹಿಸಲಾಗುತ್ತಿರುವುದರಿಂದ ಇದು ಪುರಸಭೆಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿ ಪ್ಲಂಬರ್‍ಗಳ ಮೂಲಕ ಬೇಕಾಬಿಟ್ಟಿ ಬಿಲ್ ಸಂಗ್ರಹಕ್ಕೆ ಅನುವು ಮಾಡಿಕೊಟ್ಟಂತಾಗುತ್ತಿದೆ. ಈ ಕಾರಣಕ್ಕಾಗಿ ಪೈಪ್ ಲೈನಿನ ಸಮಗ್ರ ನಿರ್ವಹಣೆ ಮಂಡಳಿಗೆ ವಹಿಸಿಕೊಟ್ಟಲ್ಲಿ ಪುರಸಭೆಗೆ ತಗಲುವ ಹೆಚ್ಚುವರಿ ಹೊರೆಯನ್ನು ನಿಯಂತ್ರಿಸಿದಂತಾಗುತ್ತದೆ ಎಂಬ ಅಭಿಪ್ರಾಯ ಪುರವಾಸಿಗಳಿಂದ ಕೇಳಿ ಬರುತ್ತಿದೆ.

ಈಗಾಗಲೇ ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಗ್ರ ನಿರ್ವಹಣೆ ನಗರ ನೀರು ಸರಬರಾಜು  

ಬಂಟ್ವಾಳ ಪುರಸಭೆಯ ಸಿಬ್ಬಂದಿ ಕೊರತೆ ತುಂಬಿಸಲು ಆಗ್ರಹ

ಬಂಟ್ವಾಳ ಪುರಸಭೆಯಲ್ಲಿದ್ದ ಹೆಚ್ಚುವರಿ ಹಾಗೂ ಅನಧಿಕೃತ ಗುತ್ತಿಗೆ ಸಿಬ್ಬಂದಿಗಳನ್ನು ವಿಲೇವಾರಿ ಮಾಡಿದ ಮುಖ್ಯಾಧಿಕಾರಿಗಳ ಕ್ರಮದಿಂದ ಈಗಾಗಲೇ ಪುರಸಭೆಯಲ್ಲಿ ಆರ್ಥಿಕ ಶಿಸ್ತು ಉಂಟಾಗಿದ್ದು, ಇನ್ನು ಪುರಸಭೆಯ ಸೇವೆಗಳನ್ನು ತ್ವರಿತಗತಿಯಲ್ಲಿ ಮಾಡುವ ನಿಟ್ಟಿನಲ್ಲಿ ಇಲ್ಲಿ ಖಾಲಿ ಇರುವ ಖಾಯಂ ನೌಕರರ ಹುದ್ದೆಗಳಾದ ಆರೋಗ್ಯಾಧಿಕಾರಿ, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕ, ಮ್ಯಾನೇಜರ್ ಸಹಿತ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸರಕಾರ ತಕ್ಷಣ ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಈ ಎಲ್ಲಾ ಖಾಯಂ ಹುದ್ದೆಗಳನ್ನು ಸರಕಾರ ತಕ್ಷಣ ನೇಮಕ ಮಾಡಿದರೆ ಹೊರ ಗುತ್ತಿಗೆ ಆಧಾರಿತ ಸಿಬ್ಬಂದಿಗಳ ಉಡಾಫೆ ವರ್ತನೆಗಳಿಗೂ ಕಡಿವಾಣ ಹಾಕಲು ಸಾಧ್ಯವಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಮಾಜಿ ಮಂತ್ರಿಗಳು ಸರಕಾರಿ ಮಟ್ಟದಲ್ಲಿ ಗಮನ ಸೆಳೆದು ಬಂಟ್ವಾಳ ಪುರಸಭೆಯ ಖಾಲಿ ಖಾಯಂ ಹುದ್ದೆಗಳನ್ನು ತಕ್ಷಣ ತುಂಬಿಸಲು ಪ್ರಯತ್ನಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಕ್ರಮಕ್ಕೆ ಸರಕಾರದ ಅಧಿಕೃತ ಮುದ್ರೆ : ಟೆಂಡರ್ ಅವಧಿ ಮುಗಿದ ಸಿಬ್ಬಂದಿ ವಿಲೇವಾರಿಗೆ ಸರಕಾರ ಆದೇಶ Rating: 5 Reviewed By: karavali Times
Scroll to Top