ಬಂಟ್ವಾಳ, ಎಪ್ರಿಲ್ 28, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಅವೈಜ್ಞಾನಿಕ ಟೋಲ್ ಗೇಟ್ ವ್ಯವಸ್ಥೆಯಿಂದ ಮಂಗಳವಾರವೂ ಅಪಘಾತವೊಂದು ಸಂಭವಿಸಿ ವಾಹನ ಚಾಲಕರ ಮಧ್ಯೆ ಕೆಲ ಕಾಲ ಮಾತಿನ ಚಕಮಕಿಗೆ ಕಾರಣವಾಯಿತು. ಇಲ್ಲಿನ ಟೋಲ್ ಪ್ಲಾಝಾ ಬಳಿ ನಿಧಾನವಾಗಿ ಚಲಿಸುತ್ತಿದ್ದ ಗೂಡ್ಸ್ ಲಾರಿ ಹಾಗೂ ಕಾರಿನ ಮಧ್ಯೆ ಸಣ್ಣ ಅಪಘಾತ ನಡೆದಿದೆ. ಟೋಲ್ ಪ್ಲಾಝಾದಿಂದ ಹೊರಗೆ ಚಾಚಲ್ಪಟ್ಟ ತಗಡು ಶೀಟಿಗೆ ತಾಗುವುದನ್ನು ನಿಯಂತ್ರಿಸುತ್ತಾ ನಿಧಾನಕ್ಕೆ ಸಾಗುತ್ತಿದ್ದ ಲಾರಿಯ ಚಾಲನೆ ಅಂದಾಜಿಸುವಲ್ಲಿ ಕಾರು ಚಾಲಕ ವಿಫಲನಾದ್ದರಿಂದ ಕಾರಿನ ಒಂದು ಬದಿ ಲಾರಿಗೆ ತಾಗಿದೆ. ಇದರಿಂದ ಸಣ್ಣ ಪ್ರಮಾಣದಲ್ಲಿ ಜಖಂ ಸಂಭವಿಸಿದೆ. ಚಾಲಕರ ಮಧ್ಯೆ ಈ ಘಟನೆ ಸ್ವಲ್ಪ ಹೊತ್ತು ತಕರಾರಿಗೂ ಕಾರಣವಾಯಿತು. ಈ ಸಂದರ್ಭ ಪ್ರತಿಭಟನೆ ಹಿನ್ನಲೆಯಲ್ಲಿ ಅಲ್ಲೇ ಬಂದೋಬಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ಚಾಲಕರ ಚಕಮಕಿಗೆ ಬ್ರೇಕಿದ್ದು, ಎರಡೂ ವಾಹನಗಳನ್ನು ಬದಿಗೆ ಸರಿಸಿ ವಿಚಾರಣೆ ಆರಂಭಿಸಿದ್ದಾರೆ.
ಟೋಲ್ ವಸೂಲಿ ಕೇಂದ್ರದಲ್ಲಿನ ತಗಡು ಶೀಟಿನಂತಹ ಅವ್ಯವಸ್ಥೆಯಿಂದಾಗಿ ಇಲ್ಲಿ ನಿತ್ಯವೂ ಒಂದಿಲ್ಲೊಂದು ಇಂತಹ ವಿಷಮ ಪರಿಸ್ಥಿತಿಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಅಲ್ಲಿಗೇ ಮುಗಿದು ಹೋದರೆ, ಇನ್ನು ಕೆಲವು ದೊಡ್ಡ ಮಟ್ಟದ ಘರ್ಷಣೆಗೂ ಕಾರಣವಾಗುತ್ತಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆಯೂ ಎದುರಾಗುತ್ತಿದೆ.













0 comments:
Post a Comment