ರಾಜ್ಯದಲ್ಲಿ ಅಟೋ ಗ್ಯಾಸ್ ಕೊರತೆ ಇದೆ ಎಂಬುದು ವದಂತಿ ಮಾತ್ರ : ತಪ್ಪು ಮಾಹಿತಿಗೆ ಕಿವಿಗೊಡದಿರಲು ಆಹಾರ ಇಲಾಖೆ ಮನವಿ - Karavali Times ರಾಜ್ಯದಲ್ಲಿ ಅಟೋ ಗ್ಯಾಸ್ ಕೊರತೆ ಇದೆ ಎಂಬುದು ವದಂತಿ ಮಾತ್ರ : ತಪ್ಪು ಮಾಹಿತಿಗೆ ಕಿವಿಗೊಡದಿರಲು ಆಹಾರ ಇಲಾಖೆ ಮನವಿ - Karavali Times

728x90

8 April 2026

ರಾಜ್ಯದಲ್ಲಿ ಅಟೋ ಗ್ಯಾಸ್ ಕೊರತೆ ಇದೆ ಎಂಬುದು ವದಂತಿ ಮಾತ್ರ : ತಪ್ಪು ಮಾಹಿತಿಗೆ ಕಿವಿಗೊಡದಿರಲು ಆಹಾರ ಇಲಾಖೆ ಮನವಿ

ಮಂಗಳೂರು, ಎಪ್ರಿಲ್ 08, 2026 (ಕರಾವಳಿ ಟೈಮ್ಸ್) : ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್ ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್ ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಪಡಿಸಿದೆ.

ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡು ಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ.

ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ. 

ಕಳೆದ ಐದು ದಿನಗಳ ಪೂರೈಕೆ ವಿವರ

     ಕಳೆದ ಎಪ್ರಿಲ್ 2 ರಿಂದ 6 ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬರುತ್ತದೆ. ಎಪ್ರಿಲ್ 2 ರಂದು 87.78 ಮೆಟ್ರಿಕ್ ಟನ್, ಎಪ್ರಿಲ್ 3 ರಂದು 86.05 ಮೆಟ್ರಿಕ್ ಟನ್, ಎಪ್ರಿಲ್ 4 ರಂದು 84.80 ಮೆಟ್ರಿಕ್ ಟನ್, ಎಪ್ರಿಲ್ 5 ರಂದು ಗರಿಷ್ಠ 94.11 ಮೆಟ್ರಿಕ್ ಟನ್ ಹಾಗೂ ಎಪ್ರಿಲ್ 6 ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ.

ಆದ್ದರಿಂದ, ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಇಂತಹ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‍ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಸರ್ಕಾರ ಮನವಿ ಮಾಡಿದೆ. ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಅಟೋ ಗ್ಯಾಸ್ ಕೊರತೆ ಇದೆ ಎಂಬುದು ವದಂತಿ ಮಾತ್ರ : ತಪ್ಪು ಮಾಹಿತಿಗೆ ಕಿವಿಗೊಡದಿರಲು ಆಹಾರ ಇಲಾಖೆ ಮನವಿ Rating: 5 Reviewed By: karavali Times
Scroll to Top