ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿರುವ ಸರಕಾರದ ಕ್ರಮ ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ಲೆನಿನ್ ವಾದಿ) ಲಿಬರೇಶನ್ ವತಿಯಿಂದ ಪ್ರತಿಭಟನೆ
ಮಂಗಳೂರು, ಎಪ್ರಿಲ್ 20, 2026 (ಕರಾವಳಿ ಟೈಮ್ಸ್) : ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ಲೆನಿನ್ ವಾದಿ) ಲಿಬರೇಶನ್ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸರ್ಕಾರದ ನಿರ್ಧಾರ ಜನರ ಹಕ್ಕುಗಳ ಮೇಲೆ ದಾಳಿಯಾಗಿದೆ ಎಂದು ಆರೋಪಿಸಿದರು.
ಜನಸಾಮಾನ್ಯರ ಆರೋಗ್ಯವನ್ನು ರಕ್ಷಿಸಬೇಕಾದ ಸರ್ಕಾರವೇ ಇಂದು ಖಾಸಗಿ ಆಸ್ಪತ್ರೆಗಳ ಲಾಭದಾಸೆಗೆ ತಲೆಬಾಗುತ್ತಿದ್ದು, ಸರಕಾರಿ ಆಸ್ಪತ್ರೆಗಳನ್ನೇ ಹಂತ ಹಂತವಾಗಿ ಖಾಸಗೀಕರಣದ ಹಾದಿಗೆ ಒಯ್ಯುತ್ತಿದೆ. ಇದು ಬಡಜನರ ಬದುಕಿನ ಮೇಲೆ ನಡೆಸುತ್ತಿರುವ ದಾಳಿಯಾಗಿದ್ದು ಈ ಒಪ್ಪಂದ ಹಿಂಪಡೆಯುವವರೆಗೂ ನಿರಂತರ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಚಿಕಿತ್ಸೆ ಎಂಬ ಹೆಸರಿನಲ್ಲಿ ಸಾವಿರಾರು ರೂಪಾಯಿಗಳನ್ನು ಕಿತ್ತುಕೊಳ್ಳುವ ವ್ಯವಸ್ಥೆಗೆ ಈಗ ಸರ್ಕಾರವೇ ಕಾನೂನುಬದ್ಧ ಬಲ ನೀಡುತ್ತಿದೆ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು ಸರ್ಕಾರದ ಮೊದಲ ಕರ್ತವ್ಯ. ಆದರೆ ಅದನ್ನು ಬಿಟ್ಟು ಖಾಸಗೀಕರಣದ ದಾರಿಗೆ ಹೋಗುವುದು ಎಂದರೆ, ಬಡವರನ್ನು ಆರೋಗ್ಯ ಸೇವೆಯಿಂದ ದೂರ ತಳ್ಳುವುದು ಅನ್ಯಾಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಬಹುಕಾಲದಿಂದ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಅದನ್ನು ಕಡೆಗಣಿಸಿ ಇರುವ ವ್ಯವಸ್ಥೆಯನ್ನೇ ಕುಸಿತಗೊಳಿಸುತ್ತಿದೆ. ಇದು ಜನತೆಗೆ ಮಾಡಿರುವ ದ್ರೋಹವಾಗಿದೆ ಎಂದು ರಾಮಣ್ಣ ಆರೋಪಿಸಿದರು.
ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ಮೋಹನ್ ಕೊಡಗು ಮಾತನಾಡಿ, ಸರಕಾರಿ ಆಸ್ಪತ್ರೆಗಳು ಜನರ ಹಕ್ಕು ಅದು ಸಂವಿಧಾನಿಕ ಹಕ್ಕು. ಆದರೆ, ಆ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಪಾರ್ ಜಸ್ಟೀಸ್ (ಎಐಎಲ್‍ಎಜೆ) ಮುಖಂಡ ಅಡ್ವಕೇಟ್ ಮಹಮ್ಮದ್ ಲುಕ್ಮಾನ್ ಮಾತನಾಡಿ, ಸೌಲಭ್ಯಗಳ ಕೊರತೆ ಎಂಬ ನೆಪದಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಎಂದರೆ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಹಾಗೂ ಇದು ಸರಕಾರದ ಜನಪರ ನೀತಿಯಲ್ಲ. ಬದಲಾಗಿ ಬಂಡವಾಳ ಶಾಹಿಗಳ ಪರ ನೀತಿಯಾಗಿದೆ ಎಂದು ಆರೋಪಿಸಿದರು.
ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಸಮಿತಿ ಸದಸ್ಯ ಅಡ್ವಕೇಟ್ ತುಳಸೀದಾಸ್ ಆರ್ ಮಾತನಾಡಿ, ಸರಕಾರಿ ಆಸ್ಪತ್ರೆಗಳಿಗೆ ಸೂಕ್ತ ಸೌಲಭ್ಯಗಳನ್ನು ನೀಡಬೇಕಾದ ಸರಕಾರ ಖಾಸಗಿಯವರ ಲಾಬಿಗೆ ಮಣಿದಿದ್ದು ಇದನ್ನು ವಿರೋಧಿಸಬೇಕಾದ ವಿರೋಧ ಪಕ್ಷಗಳು ಕೂಡಾ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಕಾರ್ಮಿಕ ಮುಖಂಡ ಮಹಮ್ಮದ್ ಅನ್ಸಾರ್ ಬಜಾಲ್ ಮಾತನಾಡಿ, ಬೆಳ್ತಂಗಡಿ, ಮೂಡಬಿದ್ರೆ, ಬಂಟ್ವಾಳ, ವಿಟ್ಲ ಪ್ರದೇಶಗಳಲ್ಲಿನ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ವಹಿಸಿರುವುದರಿಂದ ಲಾಭವಾಗುವುದು ಜನರಿಗೆ ಅಲ್ಲ, ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾತ್ರ, ಇಂದು ಖಾಸಗಿ ಆಸ್ಪತ್ರೆಗಳು ಹೇಗೆ ಜನರನ್ನು ಸುಲಿಗೆ ಮಾಡುತ್ತಿವೆ ಎಂಬುದಕ್ಕೆ ನಿದರ್ಶನವಾಗಿದೆ ಎಂದರು.
ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಮುಖಂಡೆ ಸುಧಾ ರಾವ್ ಬೆಳ್ತಂಗಡಿ ಅವರು ಮಾತನಾಡಿದರು. ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ ಇ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರ್ಥಿ ಮುಖಂಡ ಪ್ರಜ್ವಲ್, ಪ್ರಮುಖರಾದ ಸಂಜೀವ ಬೆಳ್ತಂಗಡಿ, ರವಿ ಕೊಡಗು, ವಿಲ್ಲಿ ವಿಲ್ಸನ್, ಸರಸ್ವತಿ ಕಡೇಶಿವಾಲಯ, ಜಿಲಾನಿ ಮಂಗಳೂರು, ದೀಕ್ಷಾ ಬಜಾಲ್, ಸುಹೈಲ್, ಶೇಖರ ಪುತ್ತೂರು, ಸುಧಾ ಜಿ ರಾವ್ ಬೆಳ್ತಂಗಡಿ, ಕುಸುಮಾವತಿ ಬೆಳ್ತಂಗಡಿ, ಅಚ್ಯುತ ಕಟ್ಟೆ, ಬದ್ರುದ್ದೀನ್, ಅಝೀಂ, ಇಬ್ರಾಹಿಂ, ಹರೀಶ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

















0 comments:
Post a Comment