ಮಂಗಳೂರು, ಎಪ್ರಿಲ್ 13, 2026 (ಕರಾವಳಿ ಟೈಮ್ಸ್) : ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ಕಾರ್ಯಾಲಯ ಇವರ ಪರವಾಗಿ ಜನಗಣತಿ ಕಾಯ್ದೆ-1948ರ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು 2 ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ.
ಈ ಪೈಕಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಲು ಅವಕಾಶಗಳನ್ನು ನೀಡಲಾಗಿರುತ್ತದೆ. ಅದರಂತೆ ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ ಹೆಸರು ಮತ್ತು ಗುರುತುಗಳ ಗೌಪ್ಯವಾಗಿ ಇರಿಸಲಾಗುತ್ತದೆ. ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ. ಇದನ್ನು ಸುರಕ್ಷಿತವಾಗಿ ಇರಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಎಪ್ರಿಲ್ 1 ರಿಂದ 15 ರವರೆಗೆ ನಿರ್ದೇಶನಾಲಯದಿಂದ ನೀಡಿರುವ ಸರಳವಾದ ಹಂತಗಳನ್ನು ಅನುಸರಿಸುವುದರ ಮೂಲಕ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು ಪಡೆಯಬಹುದಾಗಿರುತ್ತದೆ. ಪರಿಶೀಲನೆಗೆ ಬರುವ ಗಣತಿದಾರರಗೆ ಐಡಿಯನ್ನು ಒದಗಿಸಿ ಮನೆ ಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿರುತ್ತದೆ.
ಸ್ವಯಂ ಗಣತಿಯಲ್ಲಿ ಜಿಲ್ಲೆಯ 57466 ಮನೆಗಳು ನಮೂದು
ಸಾರ್ವಜನಿಕರು ಸ್ವಯಂ ಮನೆಗಣತಿ ಕಾರ್ಯ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಂದುವರಿಯುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಇದುವರೆಗೆ 57,466 ಮನೆಗಳ ಸ್ವಯಂ ಗಣತಿ ಕಾರ್ಯ ಮುಗಿದಿರುತ್ತದೆ. ಸ್ವಯಂ ಮನೆಗಣತಿಯು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಆನ್ ಲೈನ್‍ನಲ್ಲಿ se.census.gov.in ವೆಬ್ ಸೈಟಿಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆಗೆ ಬರುವ ಒ.ಟಿ.ಪಿ ಮೂಲಕ ಲಾಗಿನ್ ಆಗಿ, ನಿಮ್ಮ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಿ, ಡಿಜಿಟಲ್ ಮ್ಯಾಪ್‍ನಲ್ಲಿ ನಿಮ್ಮ ಮನೆಯ ಸ್ಥಳವನ್ನು ಗುರುತಿಸಿ, ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಬೇಕು. ಸಲ್ಲಿಸಿದ ನಂತರ ಎಸ್.ಇ ಐಡಿ ದೊರಕಲಿದೆ. ಎಸ್.ಇ ಐಡಿಯನ್ನು ಗಣತಿದಾರರು ಮನೆಗೆ ಭೇಟಿ ನೀಡಿದಾಗ ಒದಗಿಸಬೇಕು. ಗಣತಿದಾರರು ಎಸ್.ಇ ಐಡಿ ಮೂಲಕ ವಿವರಗಳನ್ನು ದೃಢೀಕರಿಸುತ್ತಾರೆ.
ಜಿಲ್ಲೆಯ ಎಲ್ಲಾ ಸಾರ್ವಜನಿಕ/ ನಾಗರೀಕರು ಆನ್‍ಲೈನ್‍ನಲ್ಲಿ ವೆಬ್‍ಸೈಟ್ ಲಿಂಕ್ ಮೂಲಕ ತಮ್ಮ ಮನೆಯ ಗಣತಿಯನ್ನು ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


















0 comments:
Post a Comment