ಬಕ್ರೀದ್ ಪ್ರಯುಕ್ತ ಕರಾವಳಿ ಟೈಮ್ಸ್ ವಿಶೇಷ ಲೇಖನ
ಮುಸಲ್ಮಾನರ ಮಹತ್ವಪೂರ್ಣವಾದ ಈದುಲ್ ಅಲ್‍ಹಾ ಆರ್ಥಾತ್ ಬಕ್ರೀದ್ ಹಬ್ಬಕ್ಕೆ ಅದರದ್ದೇ ಸ್ಥಾನಮಾನವಿದೆ. ಬಕ್ರೀದ್ ಎಂಬ ಕೂಡಲೇ ತಕ್ಷಣ ನೆನಪಾಗುವುದು ಪ್ರವಾದಿ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ ಅವರ ಭಕ್ತಿಯ ತ್ಯಾಗೋಜ್ವಲ ಜೀವನದ ಹಾಗೂ ಸಂಕಷ್ಟಗಳು. ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ ಅವರ ತ್ಯಾಗಕ್ಕೆ ಪವಿತ್ರ ಇಸ್ಲಾಂ ಮಹತ್ವಪೂರ್ಣ ಸ್ಥಾನವನ್ನು ಕಲ್ಪಿಸಿದೆ.
ಈ ಕ್ಷಣಿಕ ಲೋಕದಲ್ಲಿ ಜೀವಿಸುವ ಮನುಷ್ಯರಾದ ನಾವು ಅಲ್ಲಾಹನ ದಾಸರು, ನಮಗೆಲ್ಲರಿಗೂ ಆ ಏಕದೇವನಾದ ಅಲ್ಲಾಹನೇ ಒಡೆಯನು. ಈ ಲೋಕದಲ್ಲಿರುವ ಸರ್ವವೂ ಅವನದ್ದೇ. ಎಲ್ಲ ಘಟನೆಗಳು ಅವನ ಅಣತಿಯಂತೆಯೇ ನಡೆಯುತ್ತದೆ. ನಮ್ಮದೆಂದು ಹೇಳಲು ಇಲ್ಲಿ ಏನೂ ಉಳಿದಿಲ್ಲ. ಅವನು ಕೇಳಿದಾಗ ನಮ್ಮಲ್ಲಿರುವುದೆಲ್ಲವನ್ನು ಅವನಿಗೆ ಮರಳಿ ಒಪ್ಪಿಸಲೇಬೇಕು. ವೃದ್ದಾಪ್ಯದಲ್ಲಿ ಕಣ್ಮನಿಯಾಗಿದ್ದ ಪುತ್ರನನ್ನು ಬಲಿಯರ್ಪಿಸಲು ಅಲ್ಲಾಹನ ಆಜ್ಞೆ ಬಂದಾಗ ಅದಕ್ಕೆ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ ರವರು ಮುಂದಾಗಿರುವುದೇ ಅವರ ಸ್ಥಾನಮಾನ ಉನ್ನತ ಹಂತಕ್ಕೇರಲು ಪ್ರಮುಖ ಕಾರಣವಾಗಿತ್ತು. ತನ್ನ ಸ್ವಂತ ದೇಹವನ್ನು ಅಗ್ನಿ ಕುಂಡಕ್ಕೆ ಎಸೆಯಬೇಕೆಂದಾಗ ಅದಕ್ಕೂ ಅವರು ಸಿದ್ದರಾಗಿದ್ದು, ಅವರ ತ್ಯಾಗೋಜ್ವಲ ಜೀವನದ ನಿದರ್ಶನವಾಗಿದೆ. ದೇವ ಮಾರ್ಗದಲ್ಲಿ ಮುನ್ನುಗ್ಗಿದಾಗ ತನ್ನ ಕುಟುಂಬ, ಸೊತ್ತುಗಳು ಅವರಿಗೆ ಅಡ್ಡಿಯಾಗಲಿಲ್ಲ. ಪುತ್ರನ ಕೊರಳು ಕೊಯ್ಯಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಮ್ಮತಿ ಕೇಳಿದಾಗ “ಅಲ್ಲಾಹನ ಆಜ್ಞೆಗೆ ನಾನು ಎದುರಾಗಲಾರೆನು” ಎಂಬ ಮಗನ ಹೃದಯ ಮಿಡಿಯುವ ಉತ್ತರವು ಅವರನ್ನು ಉತ್ಸುಕರನ್ನಾಗಿಸಿತು. ಒಂಟಿ ಮಹಿಳೆ ಹಾಜರಾ ಬೀವಿ ರಳಿಯಲ್ಲಾಹು ಅನ್‍ಹಾರೊಂದಿಗೆ ಕರುಳ ಕುಡಿಯನ್ನು ಮರುಭೂಮಿಯಲ್ಲಿ ಬಿಟ್ಟು ಹೋದಾಗ ಆ ನಾರಿ ಮಹಿಳೆಯ ಮಾತು “ಅಲ್ಲಾಹು ಅಮರಕ ಹಾದ್ಸಾ”? ಅಲ್ಲಾಹು ಇದನ್ನು ನಿಮಗೆ ಆಜ್ಞಾಪಿಸಿರುವವನೇ? ಎಂದಾಗಿತ್ತು. ಎಂತಹ ಅಚಂಚಲ ವಿಶ್ವಾಸ. ಅದೆಂತಹ ದೇವಭಯ. ಅಲ್ಲಾಹನಿಗಾಗಿ ಏನನ್ನೂ ಸಹಿಸಲು ಸಿದ್ದರಾದ ಕುಟುಂಬ. ಆಧುನಿಕತೆಯ ಸೋಗಿನಲ್ಲಿ ಫ್ಯಾಶನ್ ಬದುಕನ್ನೇ ನೆಚ್ಚಿಕೊಂಡು ಧರ್ಮವನ್ನೇ ಅಪಹಾಸ್ಯ ಮಾಡುವ ಹಂತಕ್ಕೆ ಬರುವ ನಮ್ಮ ಇಂದಿನ ಮಹಿಳಾ ಮಣಿಯರಿಗೆ ಬೀವಿ ಹಾಜರಾ ರಳಿಯಲ್ಲಾಹು ಅನ್‍ಹಾ ಅವರ ಆದರ್ಶ ಬದುಕು ಎಲ್ಲ ಕಾಲದಲ್ಲೂ ಮಾದರಿಯಾಗಿತ್ತು.
ಸೂರ್ಯ, ಚಂದ್ರ, ನಕ್ಷತ್ರಗಳಿಗೆ ಆರಾದಿಸುತ್ತಿದ್ದ ಮೂಢ ಸಮೂಹವೊಂದನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯಲು ಆ ಮಹಾನ್‍ವರ್ಯರು ಯುಕ್ತಿಯೊಂದಿಗೆ ಹೆಜ್ಜೆ ಇರಿಸಿದಾಗಿನಿಂದ ಅವರ ಬದುಕಿನ ಪ್ರತಿ ನಿಮಿಷಗಳು ಅಗ್ನಿ ಪರೀಕ್ಷೆಗಳಿಂದ ಕೂಡಿತ್ತು. ಅದೆಲ್ಲವನ್ನೂ ತ್ಯಾಗ ಮನೋಭಾವದಿಂದಲೇ ಸಹಿಸಿದ ಪರಿಣಾಮವಾಗಿ ಅವರು ಇಂದು ಮುಸ್ಲಿಂ ಉಮ್ಮತ್‍ನ ಮುಂದೆ ‘ಖಲೀಲುಲ್ಲಾಹಿ’ (ಅಲ್ಲಾಹನ ಪರಮಾಪ್ತರು) ಎಂಬ ಬಿರುದಿನಿಂದ ರಾರಾಜಿಸುತ್ತಿದ್ದಾರೆ. ಬಕ್ರೀದ್ ಆಚರಣೆಯ ಹೆಸರಿನಲ್ಲಿ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ ಅವರ ಜೀವನದ ಎಲ್ಲ ತ್ಯಾಗಗಳನ್ನು ಪ್ರತಿ ವರ್ಷವೂ ಸಮುದಾಯ ಸ್ಮರಿಸುತ್ತಿದೆ.
ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ ಅವರ ತ್ಯಾಗ ಸಹಿತ ಜೀವನ ವಿದ್ಯಾರ್ಥಿಗಳಿಗೆ, ನಾಯಕನಿಗೆ, ಪ್ರಬೋಧಕನಿಗೆ ಮೊದಲಾದ ಸಮಾಜದ ಎಲ್ಲ ವರ್ಗಕ್ಕೂ ಮಾದರಿಯಾಗಿದೆ ಎನ್ನುವುದು ನಿಸ್ಸಂಶಯ.
ಪವಿತ್ರ ಇಸ್ಲಾಮಿನ ಪಂಚ ಕಡ್ಡಾಯ ಕರ್ಮಗಳಲ್ಲಿ ಒಂದಾಗಿರುವ ಪರಮ ಪವಿತ್ರ ಹಜ್ಜ್ ಯಾತ್ರೆಯೂ ಇದೇ ಬಕ್ರೀದ್ ಹಬ್ಬದೊಂದಿಗೆ ಸಮ್ಮಿಳಿತಗೊಂಡು ಇನ್ನಷ್ಟು ಮಹತ್ವವನ್ನು ತಂದುಕೊಟ್ಟಿದೆ. ಸಾಂಪತ್ತಿಕವಾಗಿ ಸಾಧ್ಯವಿರುವ ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತದಲ್ಲಿ ಒಂದು ಬಾರಿಯಾದರೂ ಕಅಬಾ ಪ್ರದಕ್ಷಿಣೆ ಅರ್ಥಾತ್ ಹಜ್ ಯಾತ್ರೆ ಕೈಗೊಳ್ಳುವುದು ಕಡ್ಡಾಯವಾಗಿದೆ. ಸಹಸ್ರಾರು ವರ್ಷಗಳ ಹಿಂದೆ ಇಬ್ರಾಹಿಂ ನೆಬಿ ಅಲೈಹಿಸ್ಸಲಾಂ ಸರ್ವಶಕ್ತನ ಆದೇಶದಂತೆ ಜಗತ್ತನ ಮುಸ್ಲಿಮರ ಕೇಂದ್ರವಾದ ಕಅಬಾವನ್ನು ಪುನರ್ ನಿರ್ಮಿಸಿ ಜಗತ್ತಿನ ಮುಸ್ಲಿಮರನ್ನು ಪವಿತ್ರ ಕಅಬಾದ ಪ್ರದಕ್ಷಿಣೆಗಾಗಿ ಕರೆ ನೀಡಿದರು. ಆ ಸಂದರ್ಭ ಅವರ ಕರೆಯನ್ನು ಜನ ಸಮೂಹ ಮೂರು ಪ್ರತ್ಯೇಕ ಸ್ಥಳಗಳಿಂದಲೂ ಸ್ವೀಕರಿಸಿ ಉತ್ತರಿಸಿದರು ಎಂದು ಇಸ್ಲಾಮಿ ಚರಿತ್ರೆ ಹೇಳುತ್ತದೆ. ಅವರ ಕರೆಗೆ ಓಗೊಟ್ಟ ಆ ಮೂರು ವಿಭಾಗಗಳೆಂದರೆ ಮೊದಲನೆಯವರು ಆ ಕಾಲಘಟ್ಟದಲ್ಲಿ ಜೀವಿಸುತ್ತಿದ್ದವರು, ಎರಡನೆಯದಾಗಿ ಆ ಕಾಲದಲ್ಲಿ ತಾಯಿಯ ಗರ್ಭಾಶಯದಲ್ಲಿದ್ದ ನವಜಾತ ಶಿಶುಗಳು ಹಾಗೂ ಮೂರನೆಯದಾಗಿ ಆತ್ಮಗಳ ಲೋಕ (ಆಲಮುಲ್ ಅರ್‍ವಾಹ್) ದಲ್ಲಿರುವವರು ಎಂಬುದು ಇಸ್ಲಾಮೀ ಚರಿತ್ರೆಯ ಸಾರಾಂಶದಲ್ಲಿ ವಿವರಿಸಲಾಗಿದೆ. ಅವರ ಕರೆಗೆ ಒಂದು ಬಾರಿ ಉತ್ತರಿಸಿದವರು ಜೀವನದಲ್ಲಿ ಒಂದು ಬಾರಿ ಹಜ್ಜ್ ಯಾತ್ರೆ ಕೈಗೊಳ್ಳುವ ಭಾಗ್ಯ ತಮ್ಮದಾಗಿಸಿಕೊಂಡರೆ, ಹಲವು ಬಾರಿ ಉತ್ತರಿಸಿದವರು ಹಲವು ಬಾರಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಭಾಗ್ಯವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂಬುದೂ ಇಸ್ಲಾಮೀ ಪಂಡಿತರ ಪರಾಮರ್ಶೆಯಾಗಿದೆ.
ಜಗತ್ತಿನ ಮುಸ್ಲಿಮರು ನಿತ್ಯ ಆರಾಧನೆಯಾಗಿ ನಿರ್ವಹಿಸುವ ಕಡ್ಡಾಯ ಕರ್ಮ ನಮಾಝ್ ಸಂದರ್ಭದಲ್ಲಿ ಇದೇ ಪವಿತ್ರ ಕಅಬಾಲಯವನ್ನು ಕೇಂದ್ರೀಕರಿಸುವುದು ಕಡ್ಡಾಯವಾಗಿದೆ. ಜಗತ್ತಿನ ಯಾವುದೇ ಭಾಗದಿಂದ ನೋಡಿದರೂ ಪವಿತ್ರ ಕಅಬಾಲಯವಿರುವುದು ಭೂಮಿಯ ಮಧ್ಯಭಾಗದಲ್ಲಾಗಿದೆ. ಸೃಷಿಕರ್ತನು ಮನುಷ್ಯ ವಿಭಾಗವನ್ನು ಸೃಷ್ಟಿಸುವ ಮೊದಲೇ ಪವಿತ್ರ ಕಅಬಾಲಯ ಇತ್ತೆಂದೂ, ಆ ಸಂದರ್ಭ ಅದನ್ನು ದೇವದೂತರು (ಮಲಕ್‍ಗಳು) ಪ್ರದಕ್ಷಿಣೆ ನಡೆಸುತ್ತಿದ್ದರೆಂದೂ ಇಸ್ಲಾಮೀ ಚರಿತ್ರೆ ಸಾರಿ ಹೇಳುತ್ತದೆ.
ಈ ಜಗತ್ತು ಒಂದೂಕಾಲು ಲಕ್ಷದಷ್ಟು ಪ್ರವಾದಿಯವರನ್ನು ಕಂಡಿದೆ. ಅವರೆಲ್ಲರೂ ಪವಿತ್ರ ಕಅಬಾಲಯದ ದುರಸ್ತಿ ಕಾರ್ಯವನ್ನು ಮಾಡಿದ್ದಾರೆಂಬುದು ಇತಿಹಾಸ. ಸ್ವರ್ಗ ಲೋಕದಿಂದ ತರಲಾಗಿರುವ ‘ಹಜರುಲ್ ಅಸ್ವದ್’ ಎಂಬ ಪಾವನ ಕಲ್ಲು ಕಅಬಾಲಯದ ಒಂದು ಮೂಲೆಯಲ್ಲಿ ಇದೆ. ಈ ಪವಿತ್ರ ಕಲ್ಲನ್ನು ಚುಂಬಿಸುವುದು ಹಜ್ ವಿಧಿ ವಿಧಾನಗಳಲ್ಲಿ ಒಂದಾಗಿದೆ.
ಹಜ್‍ಗೆ ಸಂಬಂಧಪಟ್ಟ ವಿಧಿ ವಿಧಾನಗಳು ಪ್ರಾರಂಭವಾಗುವುದು ಇಸ್ಲಾಮೀ ಕ್ಯಾಲೆಂಡ್ ಪ್ರಕಾರ ಹನ್ನೆರಡನೇ ತಿಂಗಳಾಗಿರುವ ದ್ಸುಲ್‍ಹಜ್ಜ್ ಮಾಸದಲ್ಲಾಗಿದೆ. ಹಜ್ ಕರ್ಮದ ವಿಧಿ ವಿಧಾನಗಳು ಅಂತ್ಯವಾಗುವ ದುಲ್‍ಹಜ್ ತಿಂಗಳ ಹತ್ತನೇ ದಿನದಂದು ಅತ್ತ ಪವಿತ್ರ ಮಕ್ಕಾದಲ್ಲಿರುವ ಮುಸ್ಲಿಂ ಬಾಂಧವರು ಹಜ್ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದರೆ, ಇತ್ತ ಊರಿನಲ್ಲಿರುವ ಮುಸ್ಲಿಂ ಬಾಂಧವರು ಆ ದಿನದಂದು ಈದುಲ್ ಅಝ್‍ಹಾ ಹಬ್ಬವನ್ನು ವಿವಿಧ ಆರಾಧನಾ ಕರ್ಮಗಳೊಂದಿಗೆ ಆಚರಿಸುತ್ತಾರೆ.
ಪವಿತ್ರ ಈದುಲ್ ಅಝ್‍ಹಾ ಹಬ್ಬದೊಂದಿಗೆ ಒಂದು ಪ್ರವಾದಿ ಕುಟುಂಬದ ಜೀವನದ ಕಷ್ಟ ಕಾರ್ಪಣ್ಯಗಳ, ಸಂಕಷ್ಟಗಳ ಸರಮಾಲೆಯ ಹಾಗೂ ತ್ಯಾಗೋಜ್ವಲ ನಿರ್ಧಾರಗಳ ಅನಾವರಣದ ಸಂದೇಶವಿದೆ. ಲೌಕಿಕದ ಅಮಲಿನಲ್ಲಿ ಜೀವಿಸುವ ಮುಸಲ್ಮಾನ ವ್ಯಕ್ತಿಯ ಭಕ್ತಿಯ ಮಟ್ಟವನ್ನು ಪರೀಕ್ಷಿಸುವ ಒಂದು ಸಂದರ್ಭವಾಗಿದೆ ಈದುಲ್ ಅಝ್‍ಹಾ ಆರ್ಥಾತ್ ಬಕ್ರೀದ್ ಹಬ್ಬ.
ತಾನೊಂದು ಮೇಕೆ, ಕುರಿ ಅಥವಾ ಇನ್ಯಾವುದೇ ಜೀವಿಯನ್ನು ಬಲಿ ಕೊಡುವುದರಲ್ಲಿ ಜಗಪಾಲಕನಿಗೆ ಯಾವುದೇ ಅಗತ್ಯವಿಲ್ಲ. ಆದರೆ ತಾನು ದಯಪಾಲಿಸಿದ ಸಂಪತ್ತನ್ನು ತನ್ನ ಮೇಲಿನ ವಿಶ್ವಾಸಕ್ಕಾಗಿ ಎಷ್ಟರಮಟ್ಟಿಗೆ ತನ್ನ ಸೃಷ್ಟಿಯಾದ ಮನುಷ್ಯ ವ್ಯಯಿಸಬಲ್ಲ ಎಂಬದನ್ನು ಪರೀಕ್ಷಿಸುವುದೇ ಇಲ್ಲಿರುವ ಬಲಿದಾನದ ತಾತ್ಪರ್ಯವಾಗಿದೆ. ದೇವ ಸಂಪ್ರೀತಿಗಾಗಿ ಹಲವು ವಿಧ ಸಂಕಷ್ಟಗಳನ್ನು ಎದುರಿಸಿ ಕೊನೆಗೆ ತನ್ನ ಕರುಳಕುಡಿಯನ್ನೇ ಬಲಿ ಅರ್ಪಿಸಲು ಮುಂದಾದ ಹಝ್ರತ್ ಇಬ್‍ರಾಹೀಮ್ ಅಲೈಹಿಸ್ಸಲಾಂ, ಅವರ ತ್ಯಾಗ ಮನೋಭಾವಕ್ಕೆ ತಕ್ಕ ಸಾಥ್ ನೀಡಿದ ಮಾದರಿ ಮಹಿಳಾಮಣಿ ಹಝ್ರತ್ ಹಾಜರಾ ಬೀವಿ ಹಾಗೂ ಅವರ ತ್ಯಾಗ ಮನೋಭಾವನೆ ನೆರವೇರಿಸಲು ಯಾವುದೇ ರೀತಿಯಲ್ಲೂ ಅಡ್ಡಿಯಾಗದ ಪುತ್ರ ಹಝ್ರತ್ ಇಸ್ಮಾಯೀಲ್ ಅಲೈಹಿಸ್ಸಲಾಂ ಒಟ್ಟಿನಲ್ಲಿ ಒಂದು ಪ್ರವಾದಿ ಕುಟುಂಬದ ತ್ಯಾಗಪೂರ್ಣ ಜೀವನದ ಸಂದೇಶವನ್ನು ಸಾರುವ ಈದುಲ್ ಅಝ್‍ಹಾ ಹಬ್ಬವು ನಾಡಿನ ಸರ್ವ ಜನಾಂಗದ ಜನರಿಗೆ ಕಷ್ಟ-ಸಂಕಷ್ಟಗಳನ್ನು ಎದುರಿಸುವ ಸೌಭಾಗ್ಯ ಕರುಣಿಸಲಿ ಎಂದು ಹಾರೈಸುವುದರೊಂದಿಗೆ ನಾವು ಹಬ್ಬದ ಸಂತಸದಲ್ಲಿರುವಾಗ ನಮ್ಮ ಸುತ್ತಲಿನ ಅದೆಷ್ಟೋ ಮನುಷ್ಯ ಜೀವಗಳು ಹೊಟ್ಟೆಗೆ ಹಿಟ್ಟಿಲ್ಲದೆ, ಉಡಲು ವಸ್ತ್ರವಿಲ್ಲದೆ ಜೀವನದ ಸುಖ-ಸಂತೋಷ ಅನುಭವಿಸಲು ಸಾಧ್ಯವಾಗದೆ ದುಃಖಿತರಾಗಿರುವ ಸಂದರ್ಭಗಳೂ ಸಾಕಷ್ಟು ಕಂಡು ಬರುತ್ತಿದೆ. ಇಂತಹ ಬಡ-ಬಗ್ಗರ ಬಗ್ಗೆ ಕನಿಷ್ಠ ಕರುಣೆಯನ್ನಾದರೂ ತೋರುವ ಮನೋ ಔದಾರ್ಯ ನಮ್ಮಲ್ಲಿರಬೇಕಾಗಿದೆ.
ಹಬ್ಬದ ಸಂತೋಷದಲ್ಲಿ ಅತಿರೇಕದ ವರ್ತನೆಗಳಾಗಲೀ, ಮಿತಿ ಮೀರಿದ ಸಂತೋಷಾಷಚರಣೆಗಳಾಗಲೀ ಮೈಳೈಸಬಾರದು. ಮರಣ ಎಂಬ ಮೂರಕ್ಷರ ಪದ ನಮ್ಮೆಲ್ಲರನ್ನು ಕ್ಷಣಾರ್ಧದಲ್ಲಿ ನುಂಗಿಬಿಡಲಿದೆ ಎಂಬ ನೆನಪು ನಮ್ಮಲ್ಲಿ ಸದಾ ಇರಬೇಕಾಗಿದೆ. ನಾವೆಷ್ಟೇ ಉನ್ನತಿಗೇರಿದರೂ ಅಲ್ಲಾಹನ ಮುಂದೆ ನಾವು ನಗಣ್ಯರು ತಾನೇ...?? ಅವನ ದಾಸ್ಯತನವನ್ನು ಸಂಪೂರ್ಣ ಅಂಗೀಕರಿಸದ ಹೊರತು ನಮ್ಮ ಯಾವುದೇ ಆಚರಣೆಯು ನೈಜ ಅರ್ಥವನ್ನು ನೀಡದು. ಅದಕ್ಕಾಗಿ ಹಬ್ಬದ ದಿನ ‘ಅಲ್ಲಾಹು ಅಕ್ಬರ್’ (ಅಲ್ಲಾಹು ಮಹೋನ್ನತನು) ಎಂಬ ವಾಕ್ಯಗಳು ಮೊಳಗುತ್ತವೆ. ಒಡೆಯನನ್ನು ಮರೆತ ಯಾವುದೇ ಹಬ್ಬಾಚರಣೆಗಳು ಇಸ್ಲಾಮಿಗೆ ಅನ್ಯವಾದುದು. ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಂ ರವರ ತ್ಯಾಗೋಜ್ವಲ ಜೀವನವನ್ನು ಮೆಲುಕು ಹಾಕುತ್ತಾ ಭಯ ಭಕ್ತಿಯನ್ನೇ ಮುಖ ಮುದ್ರೆಯಾಗಿಸಿಕೊಂಡು ಆಧ್ಯಾತ್ಮಿಕತೆಯನ್ನು ಮೈಗೂಡಿಸಿ ಸಮಾಜದ ಸರ್ವ ಜನಾಂಗದವರೊಂದಿಗೂ ಶಾಂತಿ-ಸೌಹಾರ್ದತೆಯೊಂದಿಗೆ ಬಾಳಲು ಈ ಬಾರಿಯ ಈದುಲ್ ಅಳ್‍ಹಾ ನಮ್ಮೆಲ್ಲರ ಪಾಲಿಗೆ ಪ್ರೇರಣೆಯಾಗಲಿ ಎಂಬ ಹಾರೈಕೆಯೊಂದಿಗೆ ನಾಡಿನ ಸಮಸ್ತ ಜನತೆಗೆ ಈದುಲ್ ಅಝ್‍ಹಾ ಶುಭಾಶಯಗಳು.






















0 comments:
Post a Comment