ಮಂಗಳೂರು, ಮೇ 27, 2026 (ಕರಾವಳಿ ಟೈಮ್ಸ್) : ಮಂಗಳೂರು ಆರ್ ಟಿ ಒ ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದೆ ಜನ ಬಂದ ಕೆಲಸ-ಕಾರ್ಯಗಳು ಆಗದೆ ವಾಪಾಸು ಹೋಗುವ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸಾರಿಗೆ ಅಧಿಕಾರಿ ವಾರಕ್ಕೆ ಒಂದು ಬಾರಿಯೂ ಕಚೇರಿಯಲ್ಲಿ ಲಭ್ಯವಾಗದೆ ಇದ್ದು, ಸಾರ್ವಜನಿಕರ ಕೈಗೆ ಸಿಗುವುದೇ ಇಲ್ಲ. ಮೋಟಾರು ನಿರೀಕ್ಷಕರುಗಳು ಕೂಡಾ ಕಚೇರಿಗೆ ಬರದೇ ಇದ್ದು ಅಗತ್ಯ ಕೆಲಸಕ್ಕೆ ಬರುವ ಸಾರ್ವಜನಿಕರ ಪಾಲಿಗೆ ಲಭ್ಯರಾಗುವುದಿಲ್ಲ. ಸಾರ್ವಜನಿಕರು ಕಚೇರಿಗೆ ಬಂದರೆ ತಮ್ಮ ಅಹವಾಲು ಸಲ್ಲಿಕೆಗೆ ಅಧಿಕೃತ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಇರುವುದಿಲ್ಲ. ಆರ್ ಟಿ ಒ ಕಚೇರಿಯ ಕೆಳಗೆ ಹಾಗೂ ಮಹಡಿ ಮೇಲೆ ಎಲ್ಲಿ ಹೋದರೂ ಖಾಲಿ ಖಾಲಿಯಾಗಿಯೇ ಕಂಡು ಬರುತ್ತದೆ.
ಆರ್ ಟಿ ಒ ಕಚೇರಿಯ ಕಟ್ಟಡದಲ್ಲಿ ನಿರಂತರ ಕಾಮಗಾರಿಗಳು ನಡೆಯುತ್ತಲೇ ಇರುತ್ತದೆ. ಕಾಲಕಾಲಕ್ಕೂ ಇಲ್ಲಿನ ಕಚೇರಿಯ ನವೀಕರಣ ಕಾಮಗಾರಿ ನಡೆಯುತ್ತಿರುತ್ತಿದ್ದು, ಇದರಿಂದ ಅಧಿಕಾರಿ-ಸಿಬ್ಬಂದಿಗಳ ಕಚೇರಿ ಯಾವಾಗ ಎಲ್ಲಿಗೆ ಶಿಫ್ಟ್ ಆಗುತ್ತದೆ ಎಂಬುದೇ ಜನರಿಗೆ ಗೊತ್ತಾಗುತ್ತಿಲ್ಲ. ಈ ಬಗ್ಗೆ ಅಹವಾಲು ಹೇಳಲು ಜನ ಬಯಸಿದರೆ ಅದಕ್ಕೂ ಅಲ್ಲಿ ಅಧಿಕೃತ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಚೇರಿಯ ಆವರಣ ಪ್ರವೇಶಿಸಿದರೆ ವರಾಂಡದಲ್ಲಿ ಮೂರ್ನಾಲ್ಕು ಇಲಾಖಾ ವಾಹನಗಳು ನಿಂತಿರುವುದು ಕಂಡು ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಜನ ಕಚೇರಿಯ ಒಳ ಪ್ರವೇಶಿಸಿದರೆ ಒಳಗೆ ಮಾತ್ರ ಎಲ್ಲ ಕೋಣೆಗಳೂ ಖಾಲಿ ಖಾಲಿಯೇ ಇರುವುದು ಕಂಡು ಬರುತ್ತಿದೆ. ಸಮಸ್ಯೆ ಹಿಡಿದುಕೊಂಡು ಬರುವ ಜನ ಮಾತ್ರ ಯಾರ ಬಳಿ ತೆರಳಬೇಕೆಂಬುದೇ ತೋಚನೆ ಹಿಡಿಶಾಪ ಹಾಕಿ ವಾಪಾಸು ತೆರಳಬೇಕಾದ ಪರಿಸ್ಥಿತಿ ಇಲ್ಲಿದೆ.
ಅಲ್ಲದೆ ಇಲ್ಲಿನ ಕಚೇರಿಗೆ ಓರ್ವ ಅಧಿಕಾರಿ ಬರುವಾಗ ಒಂದು ರೀತಿಯ ನವೀಕರಣ ಕಾಮಗಾರಿ ನಡೆದರೆ, ಅವರು ಹೋಗಿ ಇನ್ನೊಬ್ಬರು ಅಧಿಕಾರಿ ಬರುವಾಗ ಹಿಂದಿನ ಅಧಿಕಾರಿ ಮಾಡಿದ ಎಲ್ಲ ವ್ಯವಸ್ಥೆಗಳನ್ನು ನಿರ್ಲಕ್ಷಿಸಿ ಹೊಸದಾದ ರೀತಿಯ ನವೀಕರಣ ವ್ಯವಸ್ಥೆಗಳನ್ನು ನೆಚ್ಚಿಕೊಳ್ಳುವ ಸರಣಿ ಕಾಮಗಾರಿ ಇಲ್ಲಿನ ಆರ್ ಟಿ ಒ ಕಚೇರಿಯಲ್ಲಿ ನಡೆಯುತ್ತಲೇ ಇರುತ್ತದೆ. ಅಧಿಕಾರಿಗಳ ಮನಸ್ಥಿತಿಗೆ ಸಾರ್ವಜನಿಕರ ತೆರಿಗೆಯ ಹಣ ಪೋಲಾಗುವ ಪರಿಸ್ಥಿತಿ ಮಾತ್ರ ಇಲ್ಲಿ ಕಂಡು ಬರುತ್ತಿದೆಯೇ ಹೊರತು ಇಲ್ಲಿ ಸಾರ್ವಜನಿಕರ ಕೆಲಸ-ಕಾರ್ಯಗಳು ಸಲೀಸಾಗಿ ನಡೆಯುವ ಯಾವುದೇ ವ್ಯವಸ್ಥೆಗಳೂ ಇಲ್ಲಿಲ್ಲ ಎಂಬ ದೂರು ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ರಾಜ್ಯದ ಎಲ್ಲೂ ಕಂಡು ಬರದ ಸಮಸ್ಯೆಗಳ ಆಗರ ಮಂಗಳೂರು ಆರ್ ಟಿ ಒ ಕಚೇರಿಯಲ್ಲಿ ಕಂಡುಬರುತ್ತಿದ್ದು, ರಾಜ್ಯ ಸಾರಿಗೆ ಸಚಿವರು ಖುದ್ದಾಗಿ ಮಂಗಳೂರಿನ ಆರ್ ಟಿ ಒ ಕಚೇರಿಗೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಗಳಿಗೆ ಶೀಘ್ರವಾಗಿ ಪರಿಹಾರ ಕಲ್ಪಿಸುವಂತೆ ಮಂಗಳೂರಿನ ಜನ ಆಗ್ರಹಿಸಿದ್ದಾರೆ.

























0 comments:
Post a Comment